SIR: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಿಂದ 2 ಕೋಟಿಗೂ ಹೆಚ್ಚು ಹೆಸರು ಡಿಲೀಟ್: ಕಾಂಗ್ರೆಸ್ ವಾಗ್ದಾಳಿ
Voter Deletions in Maharashtra: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 2 ಕೋಟಿ ಹೆಸರನ್ನು ಡಿಲೀಟ್ ಮಾಡಲಾಗಿದೆ. ಮತದಾರರು ತಮ್ಮ ನೋಂದಾಯಿತ ವಿಳಾಸಗಳಲ್ಲಿ ಗೈರಾಗಿರುವುದು, ಪತ್ತೆಯಾಗದಿರುವುದು, ನಿವಾಸಗಳನ್ನು ಬದಲಾಯಿಸಿರುವುದು, ಮರಣ ಹೊಂದಿರುವುದು, ನಕಲಿ, ಬಹು ನೋಂದಣಿಗಳನ್ನು ಹೊಂದಿರುವುದು ಅಥವಾ ಬೇರೆಡೆ ನೋಂದಾಯಿಸಲ್ಪಟ್ಟಿರುವುದು ಇದಕ್ಕೆ ಕಾರಣ.
ಸಾಂದರ್ಭಿಕ ಚಿತ್ರ -
ಮುಂಬೈ, ಸೆ. 1: ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮಹಾರಾಷ್ಟ್ರದ ಕರಡು ಮತದಾರರ ಪಟ್ಟಿಯಲ್ಲಿ 2 ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ಕೈಬಿಡಲಾಗಿದೆ. ಮಹಾರಾಷ್ಟ್ರದ (Maharashtra) ಹಿಂದಿನ ಮತದಾರರ ಸಂಖ್ಯೆಯ ಶೇ. 21.14ರಷ್ಟು ಹೆಸರು ಕಾಣಿಸಿಕೊಂಡಿಲ್ಲ ಎಂದು ಚುನಾವಣಾ ಅಧಿಕಾರಿಗಳು (Election Commission) ತಿಳಿಸಿದ್ದಾರೆ. ಎಲ್ಲ 288 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಸೋಮವಾರ (ಆ. 31) ಪ್ರಕಟಿಸಲಾಗಿದ್ದು, 7,71,65,562 ಮತದಾರರು ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದು ರಾಜ್ಯದ ಹಿಂದಿನ 9,78,54,049 ಮತದಾರರ ಸಂಖ್ಯೆಯ ಶೇ. 78.86 ರಷ್ಟಿದೆ.
ಕರಡು ಪಟ್ಟಿಯಲ್ಲಿ 3,95,89,905 ಪುರುಷರು, 3,75,72,570 ಮಹಿಳೆಯರು ಮತ್ತು 3,087 ತೃತೀಯ ಲಿಂಗಿ ಮತದಾರರಿದ್ದಾರೆ. ಚುನಾವಣಾ ಅಧಿಕಾರಿಗಳ ಪ್ರಕಾರ, ಗಣತಿ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ 2,06,88,487 ಮತದಾರರನ್ನು ಕರಡು ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಮತದಾರರು ತಮ್ಮ ನೋಂದಾಯಿತ ವಿಳಾಸಗಳಲ್ಲಿ ಗೈರಾಗಿರುವುದು ಅಥವಾ ಪತ್ತೆಯಾಗದಿರುವುದು, ನಿವಾಸಗಳನ್ನು ಬದಲಾಯಿಸಿರುವುದು, ಮರಣ ಹೊಂದಿರುವುದು, ನಕಲಿ ಅಥವಾ ಬಹು ನೋಂದಣಿಗಳನ್ನು ಹೊಂದಿರುವುದು ಅಥವಾ ಬೇರೆಡೆ ನೋಂದಾಯಿಸಲ್ಪಟ್ಟಿರುವುದು ಹೆಸರು ಡಿಲೀಟ್ ಆಗಲು ಕಾರಣ.
ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ: ಎಸ್.ಆರ್.ಶ್ರೀನಿವಾಸ್
ವಿವಿಧ ಜಿಲ್ಲೆಗಳ ಪೈಕಿ, ಪುಣೆಯಲ್ಲಿ ಅತಿ ಹೆಚ್ಚು ಅಂದರೆ 28.6 ಲಕ್ಷ ಗಣತಿ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರ ನಂತರದ ಸ್ಥಾನಗಳಲ್ಲಿ ಥಾಣೆ- 28.5 ಲಕ್ಷ, ಮುಂಬೈ ಉಪನಗರ- 26.5 ಲಕ್ಷ, ನಾಗ್ಪುರ- 14.43 ಲಕ್ಷ, ನಾಸಿಕ್ 10.27 ಲಕ್ಷ ಮತ್ತು ಮುಂಬೈ ನಗರ 9.5 ಲಕ್ಷ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ ಮತದಾರರು ಆಗಸ್ಟ್ 31ರಿಂದ ಸೆಪ್ಟೆಂಬರ್ 30ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸೇರ್ಪಡೆ ಬಯಸುವವರು ಅರ್ಜಿ-6 ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಅರ್ಜಿ-7ರ ಮೂಲಕ ನೀಡಬೇಕು. ಇನ್ನು ಹೆಸರು, ವಿಳಾಸ, ವಯಸ್ಸು ಅಥವಾ ಲಿಂಗದಂತಹ ವಿವರಗಳ ತಿದ್ದುಪಡಿಗಾಗಿ ಅರ್ಜಿ-8 ಸಲ್ಲಿಸಬಹುದು.
ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 288 ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು 7,000ಕ್ಕೂ ಹೆಚ್ಚು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ, ಹಕ್ಕುಗಳು, ಆಕ್ಷೇಪಣೆಗಳು ಮತ್ತು ನೋಟಿಸ್‌ಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಅಕ್ಟೋಬರ್ 29ರವರೆಗೆ ಮುಂದುವರಿಯಲಿವೆ. ಇನ್ನು ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 4ರಂದು ಪ್ರಕಟಿಸಲು ನಿರ್ಧರಿಸಲಾಗಿದೆ.
ಇನ್ನು ಕರಡು ಪಟ್ಟಿಯಿಂದ ಭಾರಿ ಪ್ರಮಾಣದ ಮತದಾರರನ್ನು ಕೈಬಿಟ್ಟಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಅಂಕಿ-ಅಂಶಗಳು ರಾಹುಲ್ ಗಾಂಧಿ ಈ ಹಿಂದೆ ಮಾಡಿದ್ದ ಮತ ಕಳವು ಮತ್ತು ಚುನಾವಣೆ ಅಕ್ರಮ ಎಂಬ ಆರೋಪಗಳನ್ನು ನಿಜವೆಂದು ಸಾಬೀತುಪಡಿಸುತ್ತವೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.