ಪಹಲ್ಗಾಮ್ ದಾಳಿಗೆ 1 ವರ್ಷ: ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ತಲೆಬಾಗಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ
ಪಹಲ್ಗಾಮ್ ಭಯೋತ್ಪಾದನ ದಾಳಿಗೆ 1 ವರ್ಷವಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಭಾರತವು ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆ, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ತಾಣಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಏ. 22: ಕಳೆದ ವರ್ಷ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ನಡೆದ ಭೀಕರ ಭಯೋತ್ಪಾದನಾ ದಾಳಿಗೆ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮೃತ ಸಂತ್ರಸ್ತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಎಂದಿಗೂ ಯಾವುದೇ ರೂಪದ ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಮತ್ತು ಉಗ್ರರ ಹೀನ ಸಂಚುಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ದೃಢವಾಗಿ ಸಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಕಳೆದ ವರ್ಷ ಇದೇ ದಿನ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರನ್ನು ಸ್ಮರಿಸುತ್ತಿದ್ದೇನೆ. ಅವರನ್ನು ದೇಶ ಎಂದಿಗೂ ಮರೆಯುವುದಿಲ್ಲ. ದುಃಖತಪ್ತ ಕುಟುಂಬಗಳ ಜತೆ ನಾವಿದ್ದೇವೆ. ಒಂದು ರಾಷ್ಟ್ರವಾಗಿ ನಾವು ಈ ಶೋಕದಲ್ಲಿ ಒಂದಾಗಿದ್ದೇವೆ ಮತ್ತು ಭಯೋತ್ಪಾದನೆಯನ್ನು ಮಟ್ಟಹಾಕಲು ಸಂಕಲ್ಪ ಮಾಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪೋಸ್ಟ್:
Remembering the innocent lives lost in the gruesome Pahalgam terror attack on this day last year. They will never be forgotten. My thoughts are also with the bereaved families as they cope with this loss.
— Narendra Modi (@narendramodi) April 22, 2026
As a nation, we stand united in grief and resolve. India will never bow to…
ಭಾರತೀಯ ಸೇನೆ ಮತ್ತು ಸರ್ಕಾರದ ದಿಟ್ಟ ಕ್ರಮ
2025ರ ಏಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಮಂದಿ ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಗುರುತಿಸಿ ಹತ್ಯೆ ಮಾಡಿದ್ದರು. ಈ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂದೂರ್' ಮತ್ತು 'ಆಪರೇಷನ್ ಮಹದೇವ್' ಎಂಬ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ (Pakistan-occupied Kashmir) ಒಂಬತ್ತಕ್ಕೂ ಹೆಚ್ಚು ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಿ, 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಯಿತು. ಅಲ್ಲದೆ, ಪಹಲ್ಗಾಮ್ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಉಗ್ರರನ್ನು ಸತತ 93 ದಿನಗಳ ಬೆನ್ನಟ್ಟಿ ನಂತರ ಹೊಡೆದುರುಳಿಸಲಾಯಿತು.
ಪಹಲ್ಗಾಮ್ ದಾಳಿಗೆ ಪ್ರತೀಕಾರ; 250 ಕಿಲೋ ಮೀಟರ್ ಬೆನ್ನಟ್ಟಿ ಉಗ್ರರ ಬೇಟೆಯಾಡಿದ ಭಾರತೀಯ ಸೇನೆ
ಅಮರ ಸ್ಮರಣೆ
ಜಮ್ಮು ಕಾಶ್ಮೀರದ ಲಿಡ್ಡರ್ ನದಿಯ ದಡದಲ್ಲಿ ಸಂತ್ರಸ್ತರ ನೆನಪಿಗಾಗಿ ಕಪ್ಪು ಅಮೃತಶಿಲೆಯ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರಲ್ಲಿ ದಾಳಿಗೆ ಬಲಿಯಾದ 25 ಪ್ರವಾಸಿಗರು ಮತ್ತು ಸ್ಥಳೀಯ ಕುದುರೆ ಸವಾರ ಆದಿಲ್ ಶಾ ಸೇರಿದಂತೆ ಒಟ್ಟು 26 ಮಂದಿಯ ಹೆಸರನ್ನು ಕೆತ್ತಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ರಾಜಕೀಯ ಮುಖಂಡರು ಮತ್ತು ನಾಗರಿಕರು ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಕೂಡ "ಭಾರತದ ವಿರುದ್ಧದ ಕೃತ್ಯಗಳಿಗೆ ಪ್ರತಿಕ್ರಿಯೆ ಖಚಿತ ಮತ್ತು ನ್ಯಾಯ ದೊರೆಯಲಿದೆ" ಎಂದು ಎಚ್ಚರಿಸಿದೆ.