ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಹಲ್ಗಾಮ್ ದಾಳಿಗೆ 1 ವರ್ಷ: ಕಣಿವೆಯನ್ನು ಬೆಚ್ಚಿ ಬೀಳಿಸಿದ ಆ ಕರಾಳ ದಿನದ ನೆನಪು

Pahalgam Attack: ಮಿನಿ ಸ್ವಿಟ್ಜರ್ಲೆಂಡ್ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಂದು ಒಂದು ವರ್ಷ. 26 ಅಮಾಯಕರು ಬಲಿಯಾದ ಈ ದಾಳಿಯು ದೇಶವನ್ನು ನಡುಗಿಸಿತ್ತು. ನಂತರ ಭದ್ರತಾ ಪಡೆಗಳು ಉಗ್ರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಹೊಡೆದುರುಳಿಸಲಾಗಿದೆ. ಈಗ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದರೂ ಬಲಿಯಾದವರ ಕುಟುಂಬಗಳ ನೋವು ಇನ್ನೂ ಮಸುಕಾಗಿಲ್ಲ.

ಪಹಲ್ಗಾಮ್ ಹತ್ಯಾಕಾಂಡಕ್ಕೆ ಒಂದು ವರ್ಷ

ಸಾಂದರ್ಭಿಕ ಚಿತ್ರ -

Profile
Sushmitha Jain Apr 22, 2026 3:31 PM

ಶ್ರೀನಗರ, ಏ. 22: ಮಿನಿ ಸ್ವಿಟ್ಜರ್ಲೆಂಡ್ ಎಂದೇ ಖ್ಯಾತಿಯಾದ ಪಹಲ್ಗಾಮ್‌ನ ಸುಂದರ ಬೈಸರನ್ ಹುಲ್ಲುಗಾವಲಿನಲ್ಲಿ 2025ರ ಏಪ್ರಿಲ್ 22ರಂದು ಭೀಕರ ರಕ್ತಪಾತಕ್ಕೆ ಸಾಕ್ಷಿಯಾಗಿತ್ತು. ಇಂದು ಆ ಭೀಕರ ಘಟನೆಗೆ ಒಂದು ವರ್ಷ ತುಂಬಿದ್ದು, ಅಂದು ಲಷ್ಕರ್-ಎ-ತೈಬಾ (Lashkar-e-Taiba) ಉಗ್ರರು ನಡೆಸಿದ ಅಮಾನವೀಯ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಪೋನಿ ಹ್ಯಾಂಡ್ಲರ್ ಸೇರಿದಂತೆ ಒಟ್ಟು 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು (Pahalgam Attack). ಈ ದಾಳಿಯು ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಕ್ರೂರ ದಾಳಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಅಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರು ಎಂ4 ಕಾರ್ಬೈನ್ ಮತ್ತು ಎಕೆ-47 ರೈಫಲ್‌ಗಳೊಂದಿಗೆ ಪ್ರವಾಸಿಗರ ಮೇಲೆ ಮುಗಿಬಿದ್ದರು. ಪ್ರವಾಸಿಗರ ಧರ್ಮವನ್ನು ಕೇಳಿ ಮುಸ್ಲಿಮೇತರರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿಕೋರರು ಮೃತದೇಹಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಲ್ಲದೆ, ಬದುಕುಳಿದ ಮಹಿಳೆಯರಿಗೆ ಈ ಭೀಕರತೆಯನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸುವಂತೆ ಹೇಳಿದ್ದರು. ಈ ರಕ್ತಪಾತದ ನಡುವೆಯೂ, ರಜೆಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರು ಸುಮಾರು 40 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು. ದಾಳಿಯ ಭಯಾನಕ ದೃಶ್ಯಗಳು ಜಿಪ್‌ಲೈನಿಂಗ್ ಮಾಡುತ್ತಿದ್ದ ಪ್ರವಾಸಿಗನ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಗುರುತಿನ ಚೀಟಿ, ರಾವಲ್ಪಿಂಡಿ ಮನೆ: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್‌ನ ಪಾಕಿಸ್ತಾನ ಸಂಪರ್ಕ ಪತ್ತೆ

ಸೇನಾ ಕಾರ್ಯಾಚರಣೆಗಳು ಮತ್ತು ಪ್ರತಿಕಾರ

ದಾಳಿಯ ಬೆನ್ನಲ್ಲೇ ಭಾರತೀಯ ಭದ್ರತಾ ಪಡೆಗಳು ಆಪರೇಷನ್ ಮಹಾದೇವ್ ಎಂಬ ಬೃಹತ್ ಶೋಧ ಕಾರ್ಯವನ್ನು ಆರಂಭಿಸಿದವು. 2025ರ ಜುಲೈ 28ರಂದು ಹರ್ವಾನ್ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದಾಳಿಯ ಮಾಸ್ಟರ್‌ಮೈಂಡ್ ಸೇರಿ ಮೂವರು ಪ್ರಮುಖ ಉಗ್ರರನ್ನು ಹತ್ಯೆಗೈಯಲಾಯಿತು. ಅಷ್ಟೇ ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಮಾಡಲು 2025ರ ಮೇಯಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೆನೆಗಳು ಜಂಟಿಯಾಗಿ 'ಆಪರೇಷನ್ ಸಿಂದೂರ್' ನಡೆಸಿ ಒಂಬತ್ತು ಪ್ರಮುಖ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದವು.

ಜೀವನ ಮತ್ತು ಚೇತರಿಕೆ

ದುರಂತದ ಒಂದು ವರ್ಷದ ನಂತರ ಪಹಲ್ಗಾಮ್‌ಗೆ ಪ್ರವಾಸಿಗರು ಮರಳುತ್ತಿದ್ದಾರೆ. ಆದರೆ ಬಲಿಯಾದವರ ಕುಟುಂಬಗಳಲ್ಲಿನ ನೋವು ಇನ್ನೂ ಮಾಸಿಲ್ಲ. ಪ್ರವಾಸಿಗರನ್ನು ರಕ್ಷಿಸಲು ಹೋಗಿ ಪ್ರಾಣತ್ಯಾಗ ಮಾಡಿದ ಆದಿಲ್ ಹುಸೇನ್ ಶಾ ಅವರ ಪತ್ನಿ ಗುಲ್ನಾಜ್ ಇಂದು ಜೀವನ ನಡೆಸಲು ಪರದಾಡುತ್ತಿದ್ದಾರೆ. "ಅವರು ಪ್ರವಾಸಿಗರನ್ನು ಉಳಿಸಲು ವೀರಮರಣ ಹೊಂದಿದರು ಎಂಬ ಹೆಮ್ಮೆಯಿದೆ. ಆದರೆ ಅವರಿಲ್ಲದ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ" ಎಂದು ಅವರು ಕಂಬನಿ ಮಿಡಿಯುತ್ತಿದ್ದಾರೆ. ಕಣಿವೆಯಲ್ಲಿ ಈಗ ಬಿಗಿ ಭದ್ರತೆಯ ನಡುವೆ ಪ್ರವಾಸೋದ್ಯಮ ಮತ್ತೆ ಚಿಗುರುತ್ತಿದೆ.