ಆಪರೇಷನ್ ಸಿಂದೂರ್‌ಗೆ 9 ತಿಂಗಳು: ಇನ್ನೂ ಮುಗಿದಿಲ್ಲ ಧ್ವಂಸಗೊಂಡ ಪಾಕಿಸ್ತಾನದ ಗಡಿ ಪೋಸ್ಟ್‌ಗಳ ರಿಪೇರಿ ಕೆಲಸ
2025ರ ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ಸುಮಾರು ಒಂಬತ್ತು ತಿಂಗಳು ಕಳೆದರೂ, ಪಾಕಿಸ್ತಾನದ ಅನೇಕ ಗಡಿ ಪೋಸ್ಟ್‌ಗಳು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ದಾಳಿಯಲ್ಲಿ ಹಾನಿಗೊಳಗಾದ ಕಟ್ಟಡಗಳು, ಸಂವಹನ ವ್ಯವಸ್ಥೆಗಳು ಮತ್ತು ರಕ್ಷಣಾತ್ಮಕ ಮೂಲಸೌಕರ್ಯಗಳ ಪುನರ್‌ನಿರ್ಮಾಣ ಕಾರ್ಯವು ಮಂದಗತಿಯಲ್ಲಿ ಸಾಗುತ್ತಿದೆ.
ಆಪರೇಷನ್ ಸಿಂಧೂರ್ -
ಪಾಕಿಸ್ತಾನ: 2025ರ ಪಹಲ್ಗಾಮ್ ಉಗ್ರರ ದಾಳಿ (Pahalgam terror attack)ಗೆ ಭಾರತ (India) ನೀಡಿದ ಬಲವಾದ ಮಿಲಿಟರಿ ಪ್ರತಿಕ್ರಿಯೆ 'ಆಪರೇಷನ್ ಸಿಂದೂರ್ (Operation Sindoor)' ನಡೆದು ಹತ್ತು ತಿಂಗಳು ಸಮೀಪಿಸುತ್ತಿದ್ದರೂ, ಪಾಕಿಸ್ತಾನ (Pakistan)ದ ಗಡಿ ಪೋಸ್ಟ್‌ಗಳು (Border Outposts) ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರ್ಯಾಚರಣೆಯ ವೇಳೆ ಹಾನಿಗೊಳಗಾದ ಗಡಿ ಪೋಸ್ಟ್‌ಗಳ ಪುನರ್ನಿರ್ಮಾಣ ಕಾರ್ಯವು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೌಲ್ಯಮಾಪನ ಮತ್ತು ಹಾನಿಯ ವಿವರ
ಇತ್ತೀಚಿನ ಫೋಟೋಗಳು ಮತ್ತು ಕ್ಷೇತ್ರ ಮೌಲ್ಯಮಾಪನದ ಪ್ರಕಾರ, ಪಾಕಿಸ್ತಾನದ ಅನೇಕ ಮುಂಚೂಣಿಯ ಗಡಿ ಪೋಸ್ಟ್‌ಗಳು ಕೇವಲ ಭಾಗಶಃ ಕಾರ್ಯನಿರ್ವಹಿಸುತ್ತಿವೆ. ಭಾರತದ ಕಡೆಯಿಂದ ಬರುವ ಗುಂಡಿನ ದಾಳಿಯಿಂದ ರಕ್ಷಿಸಿಕೊಳ್ಳಲು ಪಾಕಿಸ್ತಾನವು ಕೇವಲ ಮೂಲಭೂತ ರಕ್ಷಣಾತ್ಮಕ ರಚನೆಗಳನ್ನು ಮಾತ್ರ ನಿರ್ಮಿಸಿಕೊಂಡಿದೆ. ಆಪರೇಷನ್ ಸಿಂಧೂರ್ ಅವಧಿಯಲ್ಲಿ, ಭಾರತೀಯ ಸೇನೆಯ ಕಾರ್ಯಾಚರಣಾ ಕಮಾಂಡ್ ಅಡಿಯಲ್ಲಿದ್ದ ಗಡಿ ಭದ್ರತಾ ಪಡೆ (BSF), ಪಂಜಾಬ್ ಮತ್ತು ಜಮ್ಮು ಸೆಕ್ಟರ್‌ಗಳಲ್ಲಿ ಪಾಕಿಸ್ತಾನದ 118 ಗಡಿ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿತ್ತು.
ಕೇವಲ ಕಟ್ಟಡಗಳಲ್ಲ, ಸಂಪರ್ಕ ವ್ಯವಸ್ಥೆಯೂ ಧ್ವಂಸ:
ಈ ದಾಳಿಯಿಂದ ಕೇವಲ ಕಟ್ಟಡಗಳಿಗೆ ಮಾತ್ರವಲ್ಲದೆ, ಪಾಕಿಸ್ತಾನದ ಸಂವಹನ ವ್ಯವಸ್ಥೆಗಳು, ರಕ್ಷಣಾ ಕೋಟೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳಿಗೂ ಭಾರಿ ಪೆಟ್ಟು ಬಿದ್ದಿತ್ತು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, "ಅವರು ಒಂದು ಗುಂಡು ಹಾರಿಸಿದರೆ, ನಾವು ಲೆಕ್ಕವಿಲ್ಲದಷ್ಟು ಗುಂಡುಗಳನ್ನು ಹಾರಿಸುತ್ತೇವೆ" ಎಂಬ ಸ್ಪಷ್ಟ ಸಂದೇಶವನ್ನು ಅಂದು ನೀಡಲಾಗಿತ್ತು.
ದಾಳಿ ನಡೆದ ತಕ್ಷಣ ಪಾಕಿಸ್ತಾನಿ ಪಡೆಗಳು ರಸ್ತೆ ಮತ್ತು ಕಟ್ಟಡಗಳನ್ನು ದುರಸ್ತಿ ಮಾಡಲು ಪ್ರಯತ್ನಿಸಿದವು. ಆದರೆ, ಕದನ ವಿರಾಮ ಘೋಷಣೆಯಾದ ನಂತರ ಸುಮಾರು ಎರಡು ತಿಂಗಳವರೆಗೆ ಯಾವುದೇ ಕೆಲಸಗಳು ನಡೆಯಲಿಲ್ಲ. ಭಾರತದ ಕಡೆಯಿಂದ ಮತ್ತೆ ದಾಳಿ ನಡೆಯಬಹುದು ಎಂಬ ಭಯದಿಂದ ಪಾಕಿಸ್ತಾನಿ ಪಡೆಗಳು ಕೆಲಸ ಮಾಡಲು ಹಿಂಜರಿಯುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಕೆಲವು ಕಡೆ ತಾತ್ಕಾಲಿಕ ವ್ಯವಸ್ಥೆಗಳ ಮೂಲಕ ಕೆಲಸ ನಡೆಯುತ್ತಿದ್ದರೂ, ಪೂರ್ಣ ಪ್ರಮಾಣದ ಮೂಲಸೌಕರ್ಯಗಳು ಇನ್ನೂ ಸಿದ್ಧವಾಗಿಲ್ಲ. ಹಲವು ಕಡೆಗಳಲ್ಲಿ ಹಾನಿಯ ಗುರುತುಗಳು ಇಂದಿಗೂ ಹಾಗೆಯೇ ಇವೆ.
ಈ ಪರಿಸ್ಥಿತಿಯು 'ಆಪರೇಷನ್ ಸಿಂಧೂರ್' ಪಾಕಿಸ್ತಾನದ ಗಡಿ ಮೂಲಸೌಕರ್ಯದ ಮೇಲೆ ಎಷ್ಟು ಗಾಢವಾದ ಪರಿಣಾಮ ಬೀರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.