ಪಾಕಿಸ್ತಾನಕ್ಕೆ ಏಪ್ರಿಲ್ ಬಳಿಕ ಸಿಗಲಿದೆ ಮತ್ತೊಂದು ಶಾಕ್; ಸಿಂಧೂ ಬಳಿಕ ರಾವಿ ನದಿ ನೀರು ಹರಿವಿಗೆ ತಡೆ
ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಪ್ರೋತ್ಸಾಹ ಜಗಜ್ಜಾಹಿರವಾಗಿದ್ದರೂ ಪಾಕಿಸ್ತಾನ ನಾಯಕರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ನಡೆಸಿ ಪಾಕಿಸ್ತಾನದ ಒಳಗೆ ಮತ್ತು ಗಡಿ ಭಾಗದಲ್ಲಿದ್ದ ಹಲವಾರು ಉಗ್ರರ ಕೇಂದ್ರವನ್ನು ಹೊಡೆದುರುಳಿಸಿದರೂ ಅದು ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಭಾರತ ಜಲ ಸಮರವನ್ನು ಪ್ರಾರಂಭಿಸಿತ್ತು. ಸಿಂದೂ ನದಿ ನೀರನ್ನು ನಿಲ್ಲಿಸಿದ ಬಳಿಕ ಇದರ ಮುಂದುವರಿದ ಭಾಗವಾಗಿ ಇದೀಗ ರಾವಿ ನದಿ ನೀರು ತಡೆಗೆ ಸಿದ್ಧತೆ ನಡೆಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (jammu and kashmir) ಪಂಜಾಬ್ (punjab) ಗಡಿ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಹಪುರ್ ಕಂಡಿ ಅಣೆಕಟ್ಟು (Shahpur Kandi Dam) ಕಾಮಗಾರಿ ಮಾರ್ಚ್ 31ರೊಳಗೆ ಪೂರ್ಣಗೊಳ್ಳಲಿದೆ. ಈ ಬಳಿಕ ಪಾಕಿಸ್ತಾನಕ್ಕೆ ಹರಿಯುತ್ತಿರುವ ಹೆಚ್ಚುವರಿ ರಾವಿ ನದಿ ನೀರು (Raavi river water) ಕೂಡ ಸ್ಥಗಿತಗೊಳ್ಳಲಿದೆ. ಇದರಿಂದ ಪಾಕಿಸ್ತಾನದಲ್ಲಿ ನೀರಿನ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಿಂಧೂ ನೀರನ್ನು (Indus Water) ತಡೆದಿರುವ ಭಾರತದ ವಿರುದ್ಧ ಹೋರಾಡುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಸವಾಲು ಎದುರಾಗಿದೆ.
ಈಗಾಗಲೇ ಶಹಪುರ್ ಕಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ ಅದು ವಿಳಂಬವಾಗಿದೆ. ಇದೀಗ ಮಾರ್ಚ್ 31 ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭಾರತದಲ್ಲಿ ಸಾಕಷ್ಟು ನೀರು ಸಂಗ್ರಹಣಾ ಸೌಲಭ್ಯಗಳಿಲ್ಲದ ಕಾರಣ ರಾವಿ ನದಿಯಿಂದ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇದು ನಿಲ್ಲಲಿದೆ. ಇದರಿಂದ ಏಪ್ರಿಲ್ ನಂತರ ಪಾಕಿಸ್ತಾನಕ್ಕೆ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಲಿದೆ.
ಕಾಶ್ಮೀರದ ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ಕಳೆದ ವರ್ಷ ಏಪ್ರಿಲ್ 22 ರಂದು ಉಗ್ರರು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸಿಂದೂ ನದಿ ನೀರಿನ ಹರಿವನ್ನು ತಡೆದಿತ್ತು. ಇದರ ಮುಂದುವರಿದ ಭಾಗವಾಗಿ ಶಾಹಪುರ್ ಕಂಡಿ ಅಣೆಕಟ್ಟು ಯೋಜನೆಗೆ ತ್ವರಿತ ನಿರ್ಣಯ ಕೈಗೊಂಡು ಇದೀಗ ಕಾಮಗಾರಿ ಅಂತಿಮ ಹಂತವನ್ನು ತಲುಪಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.
ರಾವಿ ನದಿ ನೀರು ತಡೆದರೆ ಏನಾಗುತ್ತೆ?
ಈಗಾಗಲೇ ಸಿಂದೂ ನದಿ ನೀರಿನ ಕೊರತೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಶಾಹಪುರ್ ಕಂಡಿ ಅಣೆಕಟ್ಟು ಯೋಜನೆಯ ಪೂರ್ಣಗೊಂಡ ಬಳಿಕ ರಾವಿ ನದಿ ನೀರು ಕೂಡ ನಿಯಮಿತವಾಗಿ ಸಿಗುವುದಿಲ್ಲ. ಇದರಿಂದ ಅಲ್ಲಿ ನೀರಿನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಾಗಲಿದೆ.
ಈ ಕುರಿತು ಭಾರತ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಜಲಸಂಪನ್ಮೂಲ ಸಚಿವ ಜಾವೇದ್ ಅಹ್ಮದ್ ರಾಣಾ, ಪಾಕಿಸ್ತಾನಕ್ಕೆ ಹೆಚ್ಚುವರಿ ರಾವಿ ನದಿ ನೀರು ಹರಿಯುವುದನ್ನು ನಿಲ್ಲಿಸಬೇಕಾಗಿದೆ. ಇದು ಬರಗಾಲ ಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಮಹತ್ವದ್ದಾಗಿದೆ. ಪಾಕಿಸ್ತಾನದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದಾರೆ. ತಮ್ಮದೇ ಆದ ಸಮಸ್ಯೆಗಳಲ್ಲಿ ಮುಳುಗಿದ್ದರೆ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಯ ಮೇಲೆ ನಡೆಸುತ್ತಿರುವ ನಾಲ್ಕು ಜಲವಿದ್ಯುತ್ ಯೋಜನೆ ಕಾಮಗಾರಿಗಳು ಸ್ಥಿರವಾಗಿ ನಡೆಯುತ್ತಿದ್ದು, ಇವುಗಳು 2027-28 ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ರಾವಿ ನದಿ ನೀರಿನ ಮೇಲೆ ಭಾರತದ ಹಕ್ಕು
ಸಿಂದೂ ನದಿಯ ಬಳಿಕ ರಾವಿ ನದಿ ನೀರನ್ನು ತಡೆಯಲು ಮುಂದಾಗಿರುವ ಭಾರತದ ವಿರುದ್ಧ ಪಾಕಿಸ್ತಾನ ಗಂಭೀರ ಆರೋಪಗಳನ್ನು ಮಾಡುತ್ತಿದೆ. ಭಾರತವು ತನ್ನ ನದಿಗಳನ್ನು ಒಣಗಿಸುತ್ತಿದೆ ಎಂದು ದೂರಿದೆ. ಶಹಪುರ್ ಕಂಡಿ ಅಣೆಕಟ್ಟು ಸಿಂಧೂ ನೀರಿನ ಒಪ್ಪಂದದ ಅಡಿಯಲ್ಲಿ ಇಲ್ಲ. ಯಾಕೆಂದರೆ ಇದು ಸಿಂದೂವಿನ ಮೂರು ಪೂರ್ವ ನದಿಗಳಲ್ಲಿ ಒಂದಾಗಿದೆ. 1960ರ ಒಪ್ಪಂದದ ಪ್ರಕಾರ ಆರು ನದಿಗಳನ್ನು ಎರಡು ದೇಶಗಳ ನಡುವೆ ವಿಂಗಡಿಸಲಾಗಿದೆ. ಇದರಲ್ಲಿ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ಮೇಲೆ ಭಾರತಕ್ಕೆ ಅನಿಯಂತ್ರಿತ ಹಕ್ಕನ್ನು ನೀಡಲಾಗಿದ್ದು, ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್‌ಗಳ ಮೇಲೆ ಪಾಕಿಸ್ತಾನಕ್ಕೆ ಹಕ್ಕು ನೀಡಲಾಗಿದೆ. ಈ ಒಪ್ಪಂದಗಳ ಬಳಿಕ ಪೂರ್ವ ನದಿಗಳಿಂದ ಸಾಕಷ್ಟು ನೀರು ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿದಿದೆ. ಅದನ್ನು ಈಗ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ.
ಎರಡು ದೇಶಗಳ ನಡುವಿನ ಜಲ ಒಪ್ಪಂದದ ಬಳಿಕ ಶಹಪುರ್ ಕಿಂಡಿ ಆಣೆಕಟ್ಟು ಯೋಜನೆಯನ್ನು ಪರಿಷ್ಕರಿಸಲಾಗಿದೆ. ಇದಕ್ಕೆ 2018ರಲ್ಲೇ ಸಂಸತ್ತಿನಲ್ಲಿ ಅನುಮೋದನೆ ನೀಡಲಾಗಿತ್ತು. ಇಲ್ಲಿ ನೀರಾವರಿ ಘಟಕಕ್ಕಾಗಿ 485.38 ಕೋಟಿ ರೂ. ಗಳ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಸಾಂಬಾ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಭೂಮಿಗೆ ನೀರು ಸಿಗಲಿದೆ.