ಗಡಿ ದಾಟಿ ಒಳ ಬರುತ್ತಿದ್ದ ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್
Pakistani Intruder: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಗಡಿ ಭದ್ರತಾ ಪಡೆ ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದೆ. ಗಣ್ಯರಾಜ್ಯೋತ್ಸವದ ಮುನ್ನಾ ದಿನವಾದ ಭಾನುವಾರ ರಾಮಗಢ ವಲಯದ ಮಜ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ. -
ಶ್ರೀನಗರ, ಜ. 26: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಗಡಿ ಭದ್ರತಾ ಪಡೆ (BSF) ಪಾಕಿಸ್ತಾನದ ನುಸುಳುಕೋರನನ್ನು (Pakistani Intruder) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಣ್ಯರಾಜ್ಯೋತ್ಸವದ ಮುನ್ನಾ ದಿನವಾದ ಭಾನುವಾರ ಈ ಘಟನೆ ನಡೆದಿದೆ. ʼʼಅಂತಾರಾಷ್ಟ್ರೀಯ ಗಡಿ ಸಮೀಪ ಭಾರತದ ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಪ್ರಜೆಯನ್ನು ಹತ್ಯೆ ಮಾಡಲಾಗಿದೆʼʼ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಮಗಢ ವಲಯದ ಮಜ್ರಾ ಪ್ರದೇಶದ ಮೂಲಕ ನುಸುಳುಕೋರ ಭಾರತದ ಪ್ರದೇಶಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾಗ ಬಿಎಸ್‌ಎಫ್ ಪಡೆಗಳು ಆತನ ಚಲನವಲನಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಂಡವು.
ಎಚ್ಚರಿಕೆ ನೀಡಿದ್ದ ಬಿಎಸ್‌ಎಫ್
ನುಸುಳುಕೋರನನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಆರಂಭದಲ್ಲಿ ಆತನಿಗೆ ಎಚ್ಚರಿಕೆ ನೀಡಿದರು. ಆದರೆ ಎಚ್ಚರಿಕೆಯನ್ನು ಕಡೆಗಣಿಸಿ ಆತ ಭಾರತದತ್ತ ತನ್ನ ಚಲನೆಯನ್ನು ಮುಂದುವರಿಸಿದ. ಹೀಗಾಗಿ ಗತ್ಯಂತರವಿಲ್ಲದೆ ಬಿಎಸ್‌ಎಫ್ ಆತನ ಮೇಲೆ ಗುಂಡಿನ ಮಳೆಗೆರೆಯಿತು. ಹೀಗಾಗಿ ಆತ ಸ್ಥಳದಲ್ಲೇ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ʼʼಅಂತಾರಾಷ್ಟ್ರೀಯ ಗಡಿ ಸಮೀಪ, ಪಾಕಿಸ್ತಾನದ ನೆಲದಲ್ಲೇ ನುಸುಳುಕೋರನ ಮೃತದೇಹ ಬಿದ್ದಿದೆʼʼ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪಾಕ್ ಒಳನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್:
Samba, J&K: The BSF foiled an infiltration attempt along the International Border in the Ramgarh area of the Samba sector. BSF troops retaliated effectively, neutralising one intruder. The body was recovered in the morning, and senior BSF officers later reached the spot to review… pic.twitter.com/oFaQMOaisA
— IANS (@ians_india) January 26, 2026
ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಗುಜರಾತ್‌ನಲ್ಲಿ ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನ ನುಸುಳುಕೋರನನ್ನು ಹೊಡೆದುರುಳಿಸಿದ್ದರು. ಮೇ 23ರ ರಾತ್ರಿ ಗಡಿ ಭದ್ರತಾ ಪಡೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನು ಹತ್ಯೆಗೈದಿತ್ತು.
ಆಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಅನುಮಾನಾಸ್ಪದ ವ್ಯಕ್ತಿ ಒಳ ಬರುತ್ತಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ಗಮನಿಸಿ ಆರಂಭದಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಆತ ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಮುಂದೆ ಮುಂದೆ ಬರತೊಡಗಿದ್ದ. ಕೊನೆಗೆ ಗತ್ಯಂತರವಿಲ್ಲದೆ ಗುಂಡಿನ ದಾಳಿ ನಡೆಸಬೇಕಾಯ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಆಪರೇಷನ್ ಸಿಂದೂರ್ ನಡೆಸಿ ಉಗ್ರರ ಹೆಮೆಮುರಿ ಕಟ್ಟಿದ್ದು, ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹತ್ಯೆಗೂ ಮುನ್ನ ಜಮ್ಮು-ಕಾಶ್ಮೀರದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಜೈಶ್ ಭಯೋತ್ಪಾದಕ
ಬಿಎಸ್‌ಎಫ್‌ನಿಂದ ಸರ್ಪಗಾವಲು
ಜಮ್ಮು ಮತ್ತು ಕಾಶ್ಮೀರವು ಸಾಂಬಾ, ಕಥುವಾ ಮತ್ತು ಜಮ್ಮು ಜಿಲ್ಲೆಗಳಲ್ಲಿ 240 ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ. ಭಾರತದ ಕಡೆಯಿಂದ ಬಿಎಸ್‌ಎಫ್ ಅಂತಾರಾಷ್ಟ್ರೀಯ ಗಡಿಯನ್ನು ಕಾಯುತ್ತಿದ್ದರೆ, ಪಾಕಿಸ್ತಾನದಲ್ಲಿ ರೇಂಜರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನದ ಒಳನುಸುಳುವಿಕೆ, ಗಡಿಯಾಚೆಗಿನ ಕಳ್ಳ ಸಾಗಣೆ ಮತ್ತು ಡ್ರೋನ್ ಚಟುವಟಿಕೆಗಳನ್ನು ತಡೆಯಲು ಸೇನೆ ಮತ್ತು ಬಿಎಸ್‌ಎಫ್ ಸಿಬ್ಬಂದಿಯನ್ನು ಗಡಿಯಲ್ಲಿ ನಿಯೋಜಿಸಲಾಗಿದೆ.
ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನ ಪಡೆಗಳ ಸಹಾಯದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ/ಮದ್ದುಗುಂಡು, ನಗದು ಮತ್ತು ಮಾದಕ ವಸ್ತುಗಳನ್ನು ಭಾರತದ ಗಡಿ ದಾಟಿಸುತ್ತಿವೆ. ಹೀಗಾಗಿ ಗಡಿಗಳಲ್ಲಿ ಕಟ್ಟೆಚ್ಚರವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.