ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿ; ಮಾರ್ಗ ಮಧ್ಯದಲ್ಲಿ ರೋಗಿ ಸಾವು

Patient death: ಒಡಿಶಾದ ಕಟಕ್‌ನಿಂದ ಭುವನೇಶ್ವರಕ್ಕೆ ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿಯಾಗಿ 27 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೇಂದ್ರಪಾರ ಜಿಲ್ಲೆಯ ಪ್ರಕಾಶ್ ಕುಮಾರ್ ತಂಡಿ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು.

ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿ; ರೋಗಿ ಸಾವು

ಮಾರ್ಗಮಧ್ಯೆ ಆಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿ -

Priyanka P
Priyanka P May 16, 2026 3:08 PM

ಭುವನೇಶ್ವರ, ಮೇ 16: ಒಡಿಶಾದ (Odisha) ಕಟಕ್‌ನಿಂದ ಭುವನೇಶ್ವರಕ್ಕೆ ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿಯಾಗಿ 27 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೇಂದ್ರಪಾರ ಜಿಲ್ಲೆಯ ಪ್ರಕಾಶ್ ಕುಮಾರ್ ತಂಡಿ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಭುವನೇಶ್ವರದ (Bhubaneswar) ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ಕುಟುಂಬ ಸದಸ್ಯರ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಅವರಿಗೆ ಆಮ್ಲಜನಕದ ಅವಶ್ಯಕತೆಯಿತ್ತು.

ಕಥಜೋಡಿ ನದಿ ಸೇತುವೆಯ ಮೇಲೆ ಈ ಘಟನೆ ನಡೆದಿದೆ. ಇಂಧನ ಖಾಲಿಯಾಗಿ ಆಂಬ್ಯುಲೆನ್ಸ್ ಸೇತುವೆಯ ಮೇಲೆ ಹಠಾತ್ತನೆ ನಿಂತಿತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸಹಾಯಕ್ಕಾಗಿ ಹತಾಶ ಪ್ರಯತ್ನಗಳ ಹೊರತಾಗಿಯೂ, ಮತ್ತೊಂದು ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಲು ಸುಮಾರು 30 ನಿಮಿಷಗಳು ಬೇಕಾಯಿತು ಎಂದು ಕುಟುಂಬ ಹೇಳಿದೆ.

ಪರ್ಯಾಯ ವಾಹನ ಬರುವ ಹೊತ್ತಿಗೆ, ಆಂಬ್ಯುಲೆನ್ಸ್‌ನೊಳಗಿನ ಆಮ್ಲಜನಕ ಸಿಲಿಂಡರ್ ಕೂಡ ಖಾಲಿಯಾಗಿತ್ತು. ಹೀಗಾಗಿ ಪ್ರಕಾಶ್ ಮೃತಪಟ್ಟರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಸೇತುವೆಯ ಮೇಲೆ ಆಂಬ್ಯುಲೆನ್ಸ್ ಇಂಧನ ಖಾಲಿಯಾಗಿ ನಿಂತಿದ್ದರಿಂದ ಕುಟುಂಬಸ್ಥರಿಗೆ ದಿಕ್ಕುತೋಚದಾಗಿದೆ. ಸಹಾಯಕ್ಕಾಗಿ ಅವರು ಅಂಗಾಲಾಚಿದ್ದಾರೆ. ಇದು ರಾಜ್ಯದಲ್ಲಿ ತುರ್ತು ವೈದ್ಯಕೀಯ ಮೂಲಸೌಕರ್ಯದ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ.

ಇಲ್ಲಿದೆ ವಿಡಿಯೊ:



ಅಪೋಲೋ ಆಸ್ಪತ್ರೆಯಿಂದ ಉನ್ನತ ಮಟ್ಟದ ಏರ್ ಆಂಬ್ಯುಲೆನ್ಸ್ ಸೇವಾ ಸೌಲಭ್ಯ

ಈ ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಭಕ್ತ ಚರಣ್ ದಾಸ್, ಬಿಜೆಪಿ ನೇತೃತ್ವದ ಒಡಿಶಾ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಈ ಘಟನೆಯನ್ನು ಆಡಳಿತಾತ್ಮಕ ವೈಫಲ್ಯ ಎಂದು ಕರೆದರು.

ಇಂಧನ ಕೊರತೆ ಇಲ್ಲ ಎಂದು ಸರ್ಕಾರ ಪದೇ ಪದೇ ಭರವಸೆ ನೀಡಿದ್ದರೂ, ಭುವನೇಶ್ವರ ಮತ್ತು ಕಟಕ್‌ನಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಜನರು ಭೀತಿಯಿಂದ ಇಂಧನ ಖರೀದಿ ಮಾಡುತ್ತಿದ್ದಾರೆ. ಇದಕ್ಕಾಗಿ ಉದ್ದನೆಯ ಸರತಿ ಸಾಲುಗಳಲ್ಲಿ ಜನರು ನಿಲ್ಲುತ್ತಿದ್ದಾರೆ. ಈ ನಡುವೆ ಈ ದುರಂತ ಸಂಭವಿಸಿದೆ.

ಒಡಿಶಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೃಷ್ಣಚಂದ್ರ ಪಾತ್ರ ಅವರು ಈ ಹಿಂದೆ ರಾಜ್ಯದಲ್ಲಿ ಕನಿಷ್ಠ 13 ದಿನಗಳವರೆಗೆ ಸಾಕಾಗುವಷ್ಟು ಇಂಧನ ಸಂಗ್ರಹವಿದೆ ಎಂದು ಹೇಳಿದ್ದರು. ಜನರು ಭಯಭೀತರಾಗದಂತೆ ಒತ್ತಾಯಿಸಿದ್ದರು.

ಇನ್ನು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮೃತಪಟ್ಟ ವ್ಯಕ್ತಿಯ ಕುಟುಂಬ ಒತ್ತಾಯಿಸಿದೆ. ಘಟನೆಯ ಕುರಿತು ಅಧಿಕಾರಿಗಳು ಇನ್ನೂ ವಿವರವಾದ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.