ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ; ಶಾಂತಿ ಹಾಳು ಮಾಡುವ ಕ್ರಮ ಎಂದು ಪ್ರಧಾನಿ ಮೋದಿ ಕಿಡಿ
Putin- Modi: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ನೇತೃತ್ವದ ದಾಳಿಗಳು ನಡೆದಿವೆ ಎಂಬ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದು ಶಾಂತಿಗೆ ರಾಜತಾಂತ್ರಿಕತೆಯೇ ಏಕೈಕ ವಿಶ್ವಾಸಾರ್ಹ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಪುಟಿನ್ -
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಅವರ ನಿವಾಸದ ಮೇಲೆ ಉಕ್ರೇನ್ ನೇತೃತ್ವದ ದಾಳಿಗಳು ನಡೆದಿವೆ ಎಂಬ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದು ಶಾಂತಿಗೆ ರಾಜತಾಂತ್ರಿಕತೆಯೇ ಏಕೈಕ ವಿಶ್ವಾಸಾರ್ಹ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ್ದಾರೆ. ವರದಿಗಳಿಗೆ ಪ್ರತಿಕ್ರಿಯಿಸಿದ ಮೋದಿ, ನಡೆಯುತ್ತಿರುವ ಹಗೆತನದ ನಡುವೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದಾದ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಒಕ್ಕೂಟದ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ. ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವನ್ನು ನೀಡುತ್ತವೆ. ಈ ಪ್ರಯತ್ನಗಳ ಮೇಲೆ ಗಮನಹರಿಸಲು ಮತ್ತು ಅವುಗಳನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ತಪ್ಪಿಸಲು ನಾವು ಸಂಬಂಧಪಟ್ಟ ಎಲ್ಲರನ್ನೂ ಒತ್ತಾಯಿಸುತ್ತೇವೆ" ಎಂದು ಪ್ರಧಾನಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿ ಟ್ವೀಟ್
Deeply concerned by reports of the targeting of the residence of the President of the Russian Federation. Ongoing diplomatic efforts offer the most viable path toward ending hostilities and achieving peace. We urge all concerned to remain focused on these efforts and to avoid any…
— Narendra Modi (@narendramodi) December 30, 2025
ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ವ್ಲಾಡಿಮಿರ್ ಪುಟಿನ್ ಅವರ ಸರ್ಕಾರಿ ನಿವಾಸದ ಮೇಲೆ ಕೈವ್ ದಾಳಿ ನಡೆಸಲು ಪ್ರಯತ್ನಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿಕೊಂಡ ಒಂದು ದಿನದ ನಂತರ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ. ಉಕ್ರೇನ್ ಈ ಹೇಳಿಕೆಯನ್ನು ಅಲ್ಲಗಳೆದಿದ್ದು, ರಷ್ಯಾದ ಆರೋಪವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ನಿರಾಕರಿಸಿದ್ದಾರೆ. ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸಲು ಮಾಸ್ಕೋ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಕ್ರಿಸಮಸ್ ದಿನವೇ ಕದನ ವಿರಾಮ ಘೋಷಿಸಿ; ರಷ್ಯಾ- ಉಕ್ರೇನ್ಗೆ ಪೋಪ್ ಲಿಯೋ ಮನವಿ
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನೀಡಿರುವ ಹೇಳಿಕೆಯ ಪ್ರಕಾರ, ವಾಯುವ್ಯ ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ರಾತ್ರೋರಾತ್ರಿ 91 ದೂರಗಾಮಿ ಡ್ರೋನ್ಗಳ ಮೂಲಕ ದಾಳಿ ನಡೆಸಿದೆ. ಆದರೆ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಈ ಎಲ್ಲಾ ಡ್ರೋನ್ಗಳನ್ನು ಹೊಡೆದುರುಳಿಸಿದೆ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ರಷ್ಯಾ ತನ್ನ ಶಾಂತಿ ಮಾತುಕತೆಯ ನಿಲುವನ್ನು ಮರುಪರಿಶೀಲಿಸಲಿದೆ ಎಂದು ಲಾವ್ರೊವ್ ಎಚ್ಚರಿಸಿದ್ದಾರೆ.