ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಪಾಕ್‌ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತದಿಂದ ರಣತಂತ್ರ; 3 ಸೇನೆಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆ

Operation Sindoor: ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಆರಂಭಿಸಿದ ಬಳಿಕ ಬೆಚ್ಚಿಬಿದ್ದ ಪಾಕಿಸ್ತಾನ ದಂಡೆತ್ತಿ ಬಂದು ಸೋತು ಸುಣ್ಣವಾಗಿದೆ. ಈ ಮಧ್ಯೆ ಎರಡೂ ದೇಶಗಳ ನಡುವೆ ಉದ್ಭವಿಸಿರುವ ಸಂಘರ್ಷದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿ ಮೇ 9ರಂದು ಮೂರೂ ಸೇನಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

3 ಸೇನೆಗಳ ಮುಖ್ಯಸ್ಥರೊಂದಿಗೆ ಮೋದಿ ಸಭೆ

Profile Ramesh B May 9, 2025 8:25 PM

ಹೊಸದಿಲ್ಲಿ: ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ (Operation Sindoor) ಆರಂಭಿಸಿದ ಬಳಿಕ ಬೆಚ್ಚಿಬಿದ್ದ ಪಾಕಿಸ್ತಾನ ದಂಡೆತ್ತಿ ಬಂದು ಸೋತು ಸುಣ್ಣವಾಗಿದೆ. ಈ ಮಧ್ಯೆ ಎರಡೂ ದೇಶಗಳ ನಡುವೆ ಉದ್ಭವಿಸಿರುವ ಸಂಘರ್ಷದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸದಿಲ್ಲಿಯಲ್ಲಿ ಮೇ 9ರಂದು ಮೂರೂ ಸೇನಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕಳೆದ 3 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಎರಡು ದೇಶಗಳ ಸಂಬಂಧ ತೀರಾ ಹದಗೆಟ್ಟಿದ್ದು, ಯುದ್ಧದ ಕಾರ್ಮೋಡ ಕವಿದಿದೆ. ಪಾಕಿಸ್ತಾನದ ದಾಳಿಯನ್ನು ಹೇಗೆ ಎದುರಿಸಬಹುದು ಎನ್ನುವುದನ್ನು ಮೋದಿ ಚರ್ಚೆ ನಡೆಸಿದರು.

ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರಂದು ಪಾಕ್‌ನ ಉಗ್ರ ನೆಲೆಯ ಮೇಲೆ ದಾಳಿ ನಡೆಸಿತು. ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಭಾರತ ಸ್ಪಷ್ಟನೆಯನ್ನೂ ನೀಡಿತು. ಆದರೆ ಆದಾದ ಬಳಿಕ ಪಾಕ್‌ ಕದನ ವಿರಾಮ ಉಲ್ಲಂಘಿಸಿ ಭಾರತದ ಹಲವು ನಗರಗಳ ಮೇಲೆ ಪ್ರತಿದಾಳಿ ನಡೆಸಿತು. ಇದನ್ನು ಭಾರತೀಯ ಸೇನೆ ದಿಟ್ಟವಾಗಿ ಮಟ್ಟ ಹಾಕಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸದ್ಯದ ಸ್ಥಿತಿಯನ್ನು ಅವಲೋಕಿಸಿದರು.

ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ:



ಈ ಸುದ್ದಿಯನ್ನೂ ಓದಿ: Operation Sindoor: ಪಾಕ್‌ನ 400 ಡ್ರೋನ್‌ ಹೊಡೆದುರುಳಿಸಿದ್ದೇವೆ; ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆ ಮಾಹಿತಿ

ನರೇಂದ್ರ ಮೋದಿ ಅವರ ಅದಿಕೃತ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ನೆಲ, ಜಲ, ವಾಯು ಸೇನೆಯ ಮುಖ್ಯಸ್ಥರು ಭಾಗವಹಿಸಿದರು. ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ್ ಕ್ಷಿಪಣಿ, ಎಸ್‌ 400 ವಾಯು ರಕ್ಷಣಾ ವ್ಯವಸ್ಥೆಗಳ ಸಹಾಯದಿಂದ ಪಾಕಿಸ್ತಾನ ಡ್ರೋನ್ ದಾಳಿಗಳನ್ನು ತಡೆಗಟ್ಟಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದರು.

ʼʼಪಾಕಿಸ್ತಾನದ ಸಶಸ್ತ್ರ ಪಡೆಗಳು ಮೇ 8 ಮತ್ತು 9ರಂದು ಡ್ರೋನ್‌, ಕ್ಷಿಪಣಿ ಬಳಸಿ ಭಾರತದ ಮೇಲೆ ಹಲವು ಬಾರಿ ದಾಳಿ ನಡೆಸಿದೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್‌ ಸೈನ್ಯ ಕದನ ವಿರಾಮ ಉಲ್ಲಂಘಿಸಿದೆ. ಸುಮಾರು 400 ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ದೇಶದ ಅಖಂಡತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆʼʼ ಎಂದು ಸೇನೆ ತಿಳಿಸಿದೆ.

ಧರ್ಮ ಯುದ್ಧ

''ಪಾಕಿಸ್ತಾನವು ಗುರುದ್ವಾರ, ಚರ್ಚ್‌ ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ಶೆಲ್‌ ದಾಳಿ ನಡೆಸುತ್ತಿದೆʼʼ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ತಿಳಿಸಿದರು. ʼʼಪಾಕಿಸ್ತಾನ ಎಲ್‌ಒಸಿ ಉದ್ದಕ್ಕೂ ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಮೇ 7ರಂದು ಪಾಕಿಸ್ತಾನ ಹಾರಿಸಿದ ಶೆಲ್‌ ಪೂಂಚ್‌ನ ಶಾಲೆಯ ಮೇಲೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆʼʼ ಎಂದು ಮಾಹಿತಿ ನೀಡಿದರು.

ʼʼಅಸ್ತಿತ್ವದಲ್ಲಿರುವ ಭದ್ರತಾ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸದ್ಯ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ನ ಸೇವೆ ಸ್ಥಗಿತಗೊಳಿಸಲಾಗಿದೆʼʼ ಎಂದೂ ಅವರು ತಿಳಿಸಿದರು.