ಪಾಕಿಸ್ತಾನ- ಅಫ್ಘಾನಿಸ್ತಾನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಅವರು ಪಾಕಿಸ್ತಾನ ನಾಯಕರನ್ನು ಹೊಗಳಿದ್ದು, ಅಗತ್ಯ ಬಿದ್ದರೆ ನಾನು ಮಧ್ಯಪ್ರವೇಶಿಸುವುದಾಗಿ ಹೇಳಿದ್ದಾರೆ. ಅಲ್ಲದೇ ತಮ್ಮ ಮಾತಿನ ಮೂಲಕ ಈ ಸಂಘರ್ಷದಲ್ಲಿ ಅವರು ಯಾರ ಪರ ನಿಲ್ಲಬಹುದು ಎನ್ನುವ ಸೂಚನೆಯನ್ನೂ ಕೊಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ (Pakistan-Afghanistan conflict) ತೀವ್ರಗೊಂಡ ಬಳಿಕ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮಾತನಾಡಿ, ಅಗತ್ಯ ಬಂದರೆ ತಾನು ಮಧ್ಯಪ್ರವೇಶಿಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನ (pakistan) ಮತ್ತು ಅಫ್ಘಾನಿಸ್ತಾನದ (afghanistan) ಮುಕ್ತ ಯುದ್ಧದ ಕುರಿತು ಮಾತನಾಡಿರುವ ಅವರು, ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಪಾಕಿಸ್ತಾನವು ಶ್ರೇಷ್ಠ ಪ್ರಧಾನಿ, ಜನರಲ್ ಅವರನ್ನು ಹೊಂದಿದೆ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ವಾರದ ಆರಂಭದಿಂದ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿಗಳ ಕುರಿತು ,ಮಾತನಾಡಿದ ಟ್ರಂಪ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ಉತ್ತಮ ನಾಯಕರು. ನಾನು ಮಧ್ಯಪ್ರವೇಶಿಸುತ್ತೇನೆ. ಆದರೆ ಅದಕ್ಕೂ ಮೊದಲು ತಿಳಿದುಕೊಳ್ಳಬೇಕಾದ ಸಂಗತಿ ಎಂದರೆ ಅಲ್ಲಿ ಉತ್ತಮ ಪ್ರಧಾನಿ, ಉತ್ತಮ ಜನರಲ್, ಉತ್ತಮ ನಾಯಕರಿದ್ದಾರೆ. ಅವರನ್ನು ನಾನು ಗೌರವಿಸುತ್ತೇನೆ. ಪಾಕಿಸ್ತಾನ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಮರ್ಮಾಘಾತ ಗ್ಯಾರಂಟಿ; ದಾಳಿಗೆ ತಾಲಿಬಾನ್ ಆತ್ಮಹತ್ಯಾ ದಳ ಸಜ್ಜು
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೀಣೆ ಉದ್ವಿಗ್ನತೆ ಭುಗಿಲೆದ್ದ ಬಳಿಕ ಶುಕ್ರವಾರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನಿಸ್ತಾನದೊಂದಿಗೆ ಮುಕ್ತ ಯುದ್ಧವನ್ನು ಘೋಷಿಸಿದರು. ಇದಕ್ಕೂ ಮುನ್ನ ಪಾಕಿಸ್ತಾನವು ಕಂದಹಾರ್, ಕಾಬೂಲ್ ಸೇರಿದಂತೆ ನೆರೆಯ ದೇಶದಾದ್ಯಂತ 29 ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
#Watch | "They're Great": Trump Praises Shehbaz Sharif, Asim Munir Amid Pakistan-Afghanistan Conflicthttps://t.co/wDZ6nuKBzs pic.twitter.com/FtzAouGABo
— NDTV (@ndtv) February 28, 2026
ಎರಡು ರಾಷ್ಟ್ರಗಳ ಸಂಘರ್ಷದಲ್ಲಿ 297 ಅಫ್ಘಾನ್ ತಾಲಿಬಾನ್ ಮತ್ತು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದ್ದು, ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಅಫ್ಘಾನ್ ಪಡೆಗಳು 55 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ ಎಂದು ತಿಳಿಸಿದೆ.
2021ರವರೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆ ಇದ್ದು, ಇದನ್ನು ವಾಪಾಸ್ ಪಡೆದ ಬಳಿಕ ತಾಲಿಬಾನ್ ಅಧಿಕಾರಕ್ಕೆ ಮರಳಿತ್ತು. ಹೀಗಾಗಿ ಈಗ ಪಾಕಿಸ್ತಾನಕ್ಕೆ ಇದೊಂದು ಪ್ರಮುಖ ಯುದ್ಧವಾಗಿದೆ.
ಅಫ್ಘಾನಿಸ್ತಾನದ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್, ನಮ್ಮ ದೇಶದ ಸಶಸ್ತ್ರ ಪಡೆಗಳು ಆಕ್ರಮಣಕಾರರನ್ನು ಪುಡಿ ಮಾಡುತ್ತಿದೆ. ಸಂಪೂರ್ಣ ರಾಷ್ಟ್ರವು ಪಾಕಿಸ್ತಾನ ಸಶಸ್ತ್ರ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ತಿಳಿಸಿದರು.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ; ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಯುದ್ಧದ ಬಗ್ಗೆ ಭಾರತದ ನಿಲುವೇನು?
ತಾಲಿಬಾನ್ ದಾಳಿಯ ವಿರುದ್ಧ ಪಾಕಿಸ್ತಾನಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದು, ತಾಲಿಬಾನ್ ತಮ್ಮ ಭಯೋತ್ಪಾದನಾ ನಿಗ್ರಹ ಬದ್ಧತೆಗಳನ್ನು ಎತ್ತಿಹಿಡಿಯುವಲ್ಲಿ ನಿರಂತರವಾಗಿ ವಿಫಲವಾಗಿದೆ. ಹಿಂಸಾಚಾರದ ಮೂಲಕ ಗಡಿ ಪ್ರದೇಶದಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಭಯೋತ್ಪಾದಕ ಗುಂಪುಗಳು ಅಫ್ಘಾನಿಸ್ತಾನವನ್ನು ತಮ್ಮ ಘೋರ ದಾಳಿಗಳಿಗೆ ಉಡಾವಣಾ ವೇದಿಕೆಯಾಗಿ ಬಳಸುತ್ತಿವೆ ಎಂದು ಹೇಳಿದೆ.
ಈ ನಡುವೆ ಬ್ರಿಟನ್, ಎರಡು ರಾಷ್ಟ್ರಗಳು ಸಂಘರ್ಷವನ್ನು ನಿಲ್ಲಿಸುವಂತೆ ಕರೆ ನೀಡಿದೆ. ಚೀನಾ ಕೂಡ ಕದನ ವಿರಾಮಕ್ಕೆ ಕರೆ ನೀಡಿದೆ ಮತ್ತು ಇರಾನ್ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ.