Thalapathy Vijay: ಇಫ್ತಾರ್ ಕೂಟದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ನಟ ವಿಜಯ್ ವಿರುದ್ಧ ದೂರು ದಾಖಲು
ಇತ್ತೀಚೆಗೆ ಇಫ್ತಾರ್ ಕೂಟದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಮತ್ತು ಮುಸ್ಲಿಮರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ವಿಜಯ್ ವಿರುದ್ಧ ಇದೀಗ ದೂರು ದಾಖಲಾಗಿದೆ. ವಿಜಯ್ ಇತ್ತೀಚೆಗೆ ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.

ಇಫ್ತಾರ್ ಕೂಟದಲ್ಲಿ ವಿಜಯ್ ಭಾಗವಹಿಸಿರುವುದು

ಚೆನ್ನೈ: ತಮಿಳು ಸೂಪರ್‌ಸ್ಟಾರ್ ನಟ ವಿಜಯ್ (Thalapathy Vijay) ಇತ್ತೀಚೆಗೆ ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಅದ್ಧೂರಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಇದಕ್ಕೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಈ ಕಾರ್ಯಕ್ರಮವು ಈಗ ವಿವಾದದ ಕೇಂದ್ರಬಿಂದುವಾಗಿದೆ. 'ಮುಸ್ಲಿಮರನ್ನು ಅವಮಾನಿಸಿದ್ದಕ್ಕಾಗಿ' ತಮಿಳುನಾಡು ಸುನ್ನತ್ ಜಮಾತ್ ಈಗ ನಟನ ವಿರುದ್ಧ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದೆ ಎಂದು ತಿಳಿದು ಬಂದಿದೆ. ತಮಿಳುನಾಡು ಸುನ್ನತ್ ಜಮಾತ್‌ನ ಖಜಾಂಚಿ ಸೈಯದ್ ಕೌಸ್, ಸಭೆಯು ಮುಸ್ಲಿಂ ಸಮುದಾಯದ ಭಾವನೆಗಳನ್ನು ಅಗೌರವಿಸಿದೆ ಎಂದು ಆರೋಪಿಸಿದ್ದಾರೆ. ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಲಾಗಿಲ್ಲ ಮತ್ತು ಇಫ್ತಾರ್‌ನ ನಿಜವಾದ ಮನೋಭಾವವನ್ನು ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಫ್ತಾರ್ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಅವಮಾನಿಸಲಾಗಿದೆ. ಉಪವಾಸ ಅಥವಾ ಇಫ್ತಾರ್‌ಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ಹಾಜರಿದ್ದರು. ಇದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಸೈಯದ್ ಕೌಸ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿನ ಭದ್ರತಾ ಕ್ರಮಗಳನ್ನು ಟೀಕಿಸಿದ ಅವರು, ವಿಜಯ್ ಅವರ ವಿದೇಶಿ ಕಾವಲುಗಾರರು ನೆರದಿದ್ದವರನ್ನು ಪ್ರಾಣಿಗಳಂತೆ ನೋಡಿದ್ದಾರೆ ಎಂದು ಹೇಳಿದ್ದಾರೆ.
ವಿಜಯ್ ಅವರ ಮೇಲೆ ದೂರನ್ನು ದಾಖಲಿಸುವಂತೆ ಸೈಯದ್ ಕೌಸ್ ಒತ್ತಾಯಿಸಿದ್ದಾರೆ. , ಈ ದೂರು ಪ್ರಚಾರಕ್ಕಾಗಿ ದಾಖಲಾಗಿಲ್ಲ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವ ಸಲುವಾಗಿ ದಾಖಲಾಗಿದೆ ಎಂದು ಅವರು ಹೇಳಿದರು.
ಏನಿದು ಘಟನೆ?
ಮಾರ್ಚ್ 8 ರಂದು, ದಕ್ಷಿಣದ ಸೂಪರ್‌ಸ್ಟಾರ್ ಪವಿತ್ರ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಅವರು ತಲೆಗೆ ಟೋಪಿ ಧರಿಸಿ ಪ್ರಾರ್ಥನೆ ಸಲ್ಲಿಸಿದ್ದರು. ವಿಜಯ್ ಅವರ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ವಿಜಯ್ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸುವ ಮೊದಲು ಇಡೀ ದಿನ ಉಪವಾಸ ಮಾಡಿ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಪ್ರಾರ್ಥನೆ ಸಲ್ಲಿಸಿದ್ದರು ಎನ್ನಲಾಗಿದೆ. ಕಳೆದ ವರ್ಷ ವಿಜಯ್ ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ(TVK)ನ್ನು ಪ್ರಾರಂಭಿಸಿದರು. ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.