ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ ಪಿಎಂ ಇಟಲಿಯಲ್ಲಿ ಚಾಕೊಲೇಟ್‌ ಹಂಚುತ್ತಿದ್ದಾರೆʼʼ: 'ಮೆಲೊಡಿ' ಕ್ಷಣದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೊಡಿ’ ಚಾಕೊಲೇಟ್ ಉಡುಗೊರೆಯಾಗಿ ನೀಡಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಟಾಫಿ ಹಂಚುತ್ತ ಬ್ಯುಸಿಯಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ರೈತರು, ಯುವಕರು, ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದರೆ, ಸರ್ಕಾರ ಗಂಭೀರ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Profile
Sushmitha Jain May 20, 2026 7:09 PM

ನವದೆಹಲಿ, ಮೇ 20: ದೇಶವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಈ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಇಟಲಿಯಲ್ಲಿ ಚಾಕೊಲೇಟ್‌ ಹಂಚುತ್ತ ಬ್ಯುಸಿಯಾಗಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಐದು ದೇಶಗಳ ಪ್ರವಾಸದ ಕೊನೆಯ ಹಂತವಾಗಿ ಇಟಲಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೊಡಿ' ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೆಲೋನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟೀಕೆ ಮಾಡಿದ್ದಾರೆ.

ಪ್ರಧಾನಿ ಮೋದಿಯ 'ಮೆಲೊಡಿ' ಕ್ಷಣದ ವಿರುದ್ಧ ಕಿಡಿ

ಮೆಲೋನಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಪ್ರಧಾನಿ ಮೋದಿ ತಮಗೆ ಮೆಲೊಡಿ ಚಾಕೊಲೇಟ್ ಪ್ಯಾಕೆಟ್ ನೀಡುತ್ತಿರುವುದನ್ನು ತೋರಿಸುತ್ತಾ, "ಪ್ರಧಾನಿ ಮೋದಿ ನಮಗೊಂದು ಅತ್ಯಂತ ರುಚಿಕರ ಟಾಫಿ ತಂದಿದ್ದಾರೆ, ಅದೇ ಮೆಲೊಡಿ" ಎಂದು ಹೇಳಿ ಉಡುಗೊರೆಗಾಗಿ ಧನ್ಯವಾದ ಅರ್ಪಿಸಿದ್ದಾರೆ.

ಮೋದಿ ವಿರುದ್ಧ ರಾಹುಲ್‌ ಗಾಂಧಿ ಟೀಕೆ:



ಈ ವೈರಲ್ ಕ್ಷಣವನ್ನು ವ್ಯಂಗ್ಯವಾಡಿ ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ದೇಶದ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಎದ್ದಿದೆ. ಆದರೆ ನಮ್ಮ ಪ್ರಧಾನಿ ಇಟಲಿಯಲ್ಲಿ ಚಾಕೊಲೇಟ್‌ ಹಂಚುವಲ್ಲಿ ನಿರತರಾಗಿದ್ದಾರೆ. ಕೃಷಿಕರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಕಣ್ಣೀರು ಹಾಕುತ್ತಿದ್ದಾರೆ - ಪಿಎಂ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ, ಬಿಜೆಪಿಯವರು ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಇದೊಂದು ನೌಟಂಕಿ" ಎಂದು ಕಿಡಿಕಾರಿದ್ದಾರೆ.

ರೋಮ್‌ನಲ್ಲಿ ಪ್ರಧಾನಿ ಮೋದಿಯೊಂದಿಗೆ ಜಾರ್ಜಿಯಾ ಮೆಲೋನಿ ಸೆಲ್ಫಿ ವೈರಲ್

ಆರ್ಥಿಕ ಬಿಕ್ಕಟ್ಟಿನ ಕುರಿತು ರಾಹುಲ್ ಎಚ್ಚರಿಕೆ

ತಮ್ಮ ಸಂಸದೀಯ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ನಡೆದ 'ಬಹುಜನ ಸ್ವಾಭಿಮಾನ ಸಭಾ' ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಅವರ ಇತ್ತೀಚಿನ ನಡವಳಿಕೆಯನ್ನು ತೀವ್ರವಾಗಿ ಪ್ರಶ್ನಿಸಿದರು.

"ಪ್ರಧಾನಿ ಮೋದಿ ಭಾರತವನ್ನು ಬಿಟ್ಟು ಇಟಲಿಗೆ ಹೊರಡುವ ಮುನ್ನ, ದೇಶದಲ್ಲಿ ಆರ್ಥಿಕ ಬಿರುಗಾಳಿ ಬರಲಿದೆ. ಆದ್ದರಿಂದ ಜನರು ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಬೇಕು, ಚಿನ್ನ ಖರೀದಿಸಬಾರದು, ಕಡಿಮೆ ಖರ್ಚು ಮಾಡಬೇಕು ಮತ್ತು ವಿದೇಶ ಪ್ರವಾಸಗಳನ್ನು ತಪ್ಪಿಸಬೇಕು ಎಂದು ಜನರಿಗೆ ಹೇಳಿದ್ದರು. ಆದರೆ ಅದಾಗಿ ಕೇವಲ ಒಂದು ದಿನದ ನಂತರ, ನರೇಂದ್ರ ಮೋದಿ 3,000ದಿಂದ 4,000 ಕೋಟಿ ರುಪಾಯಿ ಮೌಲ್ಯದ ವಿಮಾನವನ್ನು ಹತ್ತಿ, ಜೇಬಿನಲ್ಲಿ ಚಾಕೊಲೇಟ್‌ ಇಟ್ಟುಕೊಂಡು ಇಟಲಿಗೆ ಹೋಗಿ ಅಲ್ಲಿನ ಪ್ರಧಾನಿಗೆ ಮೆಲೊಡಿ ನೀಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ಮುಂದುವರಿದು, "ದೇಶದ ಜನರೊಂದಿಗೆ ಎಂತಹ ಹಾಸ್ಯಾಸ್ಪದ ಆಟವಾಡಲಾಗುತ್ತಿದೆ ಎಂಬುದನ್ನು ನೀವೇ ನೋಡಿ. ಇಲ್ಲಿ ಪೆಟ್ರೋಲ್, ಗ್ಯಾಸ್ ಕೊರತೆಯಿದೆ, ಉದ್ಯಮಗಳು ಮತ್ತು ಕಾರ್ಖಾನೆಗಳು ಮುಚ್ಚುತ್ತಿವೆ, ಹಣದುಬ್ಬರ ಏರುತ್ತಿದೆ, ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ ಹಾಗೂ ಇಡೀ ಕೈಗಾರಿಕಾ ವ್ಯವಸ್ಥೆಯೇ ಕಂಗೆಡುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಅವರು ನೋಟು ಅಮಾನ್ಯೀಕರಣದ ನಿರ್ಧಾರವನ್ನು ಟೀಕಿಸಿದರಲ್ಲದೆ, ದೇಶದ ಸಾರ್ವಜನಿಕ ಸಂಪತ್ತು ಮತ್ತು ಸಂಸ್ಥೆಗಳನ್ನು ಕೆಲವು ಆಯ್ದ ಉದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಆರೋಪಿಸಿದರು.