"ಆಪರೇಷನ್ ಸಿಂದೂರ್, ಬಾಲಾಕೋಟ್ ದಾಳಿಯ ಮಾಂತ್ರಿಕ"; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಶುಕ್ರವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು "ಬಾಲಾಕೋಟ್, ನೋಟು ರದ್ದತಿ ಮತ್ತು ಆಪರೇಷನ್ ಸಿಂಧೂರ್‌ನ ಮಾಂತ್ರಿಕ" ಎಂದು ವ್ಯಂಗ್ಯವಾಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಶುಕ್ರವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ಮೋದಿ (Narendra Modi) ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು "ಬಾಲಾಕೋಟ್, ನೋಟು ರದ್ದತಿ ಮತ್ತು ಆಪರೇಷನ್ ಸಿಂಧೂರ್‌ನ (Operation Sindoor) ಮಾಂತ್ರಿಕ" ಎಂದು ವ್ಯಂಗ್ಯವಾಡುವ ಮೂಲಕ ಗದ್ದಲಕ್ಕೆ ಕಾರಣರಾದರು. 2019 ರ ಬಾಲಕೋಟ್ ಜೈಶ್-ಎ-ಮೊಹಮ್ಮದ್ ಶಿಬಿರಗಳ ಮೇಲಿನ ವೈಮಾನಿಕ ದಾಳಿ, 2016 ರ 500 ಮತ್ತು 1,000 ರೂ. ನೋಟುಗಳ ರದ್ದತಿ ಮತ್ತು ಕಳೆದ ವರ್ಷ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಗಡಿಯಾಚೆಗಿನ ದಾಳಿ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಸರ್ಕಾರ ನಿರ್ವಹಿಸುವ ರೀತಿಯನ್ನು ರಾಹುಲ್ ಟೀಕಿಸಿದ್ದಾರೆ.
ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮತ್ತು ಸೀಮಾ ನಿರ್ಣಯ ಆಯೋಗ ರಚನೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ , ಈ ಕ್ರಮವನ್ನು "ಭಯಭೀತಿಯ ಪ್ರತಿಕ್ರಿಯೆ" ಎಂದು ಹೇಳಿದರು. ಕೆಳಮನೆಯಲ್ಲಿ ಮಸೂದೆಗಳು ಅಂಗೀಕಾರವಾಗುವುದಿಲ್ಲ ಎಂದು ಬಿಜೆಪಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಹೇಳಿದ್ದಾರೆ. ಮೊದಲನೆಯದಾಗಿ, ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವುದು. ಎರಡನೆಯದಾಗಿ, ಪ್ರಧಾನ ಮಂತ್ರಿಯನ್ನು ಮಹಿಳಾ ಪರ ಎಂದು ಬಿಂಬಿಸುವುದು" ಎಂದು ಹೇಳುವ ಮೂಲಕ ಈ ಕ್ರಮವನ್ನು ಎರಡು ಉದ್ದೇಶಗಳಿಂದ ನಡೆಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ನೇರವಾಗಿ ತೆಗೆದುಕೊಳ್ಳದೆ ಅವರು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದರು ತಕ್ಷಣ ಪ್ರತಿಕ್ರಿಯಿಸಿದರು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿ ಮೋದಿ ವಿರುದ್ಧ ಅನುಚಿತ ಭಾಷೆಯನ್ನು ಬಳಸಿದ್ದಾರೆ ಮತ್ತು ಬಾಲಕೋಟ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸುವ ಮೂಲಕ ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಹಿಳಾ ಕೋಟಾವನ್ನು ಜಾರಿಗೆ ತರುವ ನೆಪದಲ್ಲಿ ಸರ್ಕಾರವು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕ್ಷೇತ್ರಗಳನ್ನು ತುಂಡು ಮಾಡಿ ವಿಭಜಿಸಲು ಬಯಸಿದೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಿಳಾ ಕೋಟಾ ಮಸೂದೆಯು "ಜಾತಿ ಜನಗಣತಿಯನ್ನು ಬದಿಗಿಡುವ" ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.