ರೇಬಿಸ್ ಸೋಂಕಿತ ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತ ಸೇವಿಸಿದ 200 ಮಂದಿ; ವೈದ್ಯರಿಂದ ಎಚ್ಚರಿಕೆ
ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ರೇಬಿಸ್ ಸೋಂಕಿತ ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತ (ಮೊಸರು ಬಜ್ಜಿ)ವನ್ನು ಸುಮಾರು 200ಕ್ಕೂ ಹೆಚ್ಚು ಮಂದಿ ಸೇವಿಸಿರುವುದು ಬೆಳಕಿಗೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇವರೆಲ್ಲರಿಗೂ ರೇಬಿಸ್ ಲಸಿಕೆ ನೀಡಲಾಗಿದೆ. ಸದ್ಯ ಆತಂಕದ ವಾತಾವರಣ ಮನೆ ಮಾಡಿದೆ.
ಎಐ ಚಿತ್ರ. -
ಲಖನೌ, ಡಿ. 29: ರೇಬಿಸ್ (Rabies) ಸೋಂಕಿತ ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತವನ್ನು(ಮೊಸರು ಬಜ್ಜಿ) ಸುಮಾರು 200ಕ್ಕೂ ಜನ ಸೇವಿಸಿರುವ ಘಟನೆ ಉತ್ತರ ಪ್ರದೇಶದ ಬುದೌನ್ (Uttar Pradesh's Budaun) ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ನಡೆದಿದೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ ಎಲ್ಲರಿಗೂ ರೇಬಿಸ್ ಲಸಿಕೆಯನ್ನು ನೀಡಲಾಗಿದೆ. ಗ್ರಾಮಸ್ಥರ ಪ್ರಕಾರ ಡಿಸೆಂಬರ್ 23ರಂದು ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ರೈತಾ ನೀಡಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು 200ಕ್ಕೂ ಹೆಚ್ಚು ಜನರು ಆ ರೈತಾವನ್ನು ಸೇವಿಸಿದ್ದರು. ಸ್ವಲ್ಪ ಸಮಯದ ನಂತರ ಆ ರಾಯ್ತವನ್ನು ಕೆಲ ದಿನಗಳ ಹಿಂದೆ ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ. ಆ ಎಮ್ಮೆ ಡಿಸೆಂಬರ್ 26ರಂದು ಮೃತಪಟ್ಟಿದ್ದು, ಇದರಿಂದಾಗಿ ಗ್ರಾಮಸ್ಥರಲ್ಲಿ ಸೋಂಕಿನ ಭಯ ಸೃಷ್ಟಿಯಾಗಿದೆ.
ಸದ್ಯ ರಾಯ್ತವನ್ನು ಸೇವಿಸಿದ ಎಲ್ಲರೂ ಉಜ್ಜೀನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ರೇಬಿಸ್ ನಿರೋಧಕ ಲಸಿಕೆ ಪಡೆದುಕೊಂಡಿದ್ದಾರೆ. ಪ್ರಕರಣ ಕುರಿತು ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ವರ ಮಿಶ್ರಾ, “ಗ್ರಾಮದ ಒಂದು ಎಮ್ಮೆಯನ್ನು ರೇಬಿಸ್ ಸೋಂಕಿತ ನಾಯಿ ಕಚ್ಚಿದ್ದು, ನಂತರ ರೇಬಿಸ್ ಲಕ್ಷಣಗಳಿಂದ ಅದು ಮೃತಪಟ್ಟಿದೆ ಎಂಬ ಮಾಹಿತಿ ನಮಗೆ ಲಭಿಸಿದೆ. ಅದೇ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತವನ್ನು ಗ್ರಾಮಸ್ಥರು ಸೇವಿಸಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ರೇಬಿಸ್ ಲಸಿಕೆ ಪಡೆಯಲು ಸಲಹೆ ನೀಡಲಾಗಿದೆ" ಎಂದು ಅವರು ಹೇಳಿದರು.
“ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ, ಹಾಗಾಗಿ ಅನುಮಾನ ಇದ್ದವರೆಲ್ಲರಿಗೂ ಆ್ಯಂಟಿ-ರೇಬಿಸ್ ಲಸಿಕೆ ನೀಡಲಾಗಿದೆ. ಸಾಮಾನ್ಯವಾಗಿ ಹಾಲನ್ನು ಕುದಿಸಿದ ನಂತರ ರೇಬಿಸ್ ಅಪಾಯ ಇರುವುದಿಲ್ಲ. ಆದರೂ ಯಾವುದೇ ಸಂಭವನೀಯ ಅಪಾಯವನ್ನು ತಪ್ಪಿಸಲು ಲಸಿಕೆ ನೀಡಲಾಗಿದೆ” ಎಂದು ಮಿಶ್ರಾ ತಿಳಿಸಿದ್ದಾರೆ.
ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?
ಗ್ರಾಮಸ್ಥರೊಬ್ಬರು, “ಎಮ್ಮೆಯನ್ನು ನಾಯಿ ಕಚ್ಚಿದ ಕಾರಣ ಅದು ಅಸ್ವಸ್ಥಗೊಂಡು ನಂತರ ಮೃತಪಟ್ಟಿತು. ಅದೇ ಎಮ್ಮೆಯ ಹಾಲಿನಿಂದ ರಾಯ್ತ ಮಾಡಲಾಗಿದೆ ಎಂಬ ಕಾರಣಕ್ಕೆ ಸೋಂಕಿನ ಭಯ ಉಂಟಾಯಿತು. ಅದಕ್ಕಾಗಿ ನಾವು ರೇಬಿಸ್ ನಿರೋಧಕ ಲಸಿಕೆ ಪಡೆದುಕೊಂಡಿದ್ದೇವೆ” ಎಂದು ಹೇಳಿದರು.
ಆರೋಗ್ಯ ಇಲಾಖೆಯ ಪ್ರಕಾರ, ಈವರೆಗೆ ಗ್ರಾಮದಲ್ಲಿ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಾಮಾನ್ಯವಾಗಿದೆ. ಅಲ್ಲದೇ ಉಜ್ಜೀನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕೆಗಾಗಿ ಬಂದ ಎಲ್ಲರಿಗೂ ತಕ್ಷಣವೇ ಇಂಜೆಕ್ಷನ್ ನೀಡಲಾಗಿದೆ. ಲಸಿಕೆ ನೀಡಲೆಂದೇ ಶನಿವಾರ ಮತ್ತು ಭಾನುವಾರವೂ ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಇನ್ನೂ ಯಾವುದೇ ವದಂತಿಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ನಿಗಾ ಇರಿಸಲಾಗಿದೆ ಎಂದು ಸಿಎಂಒ ಹೇಳಿದ್ದಾರೆ.