ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೊಸಳೆಯ ಕೈಕಾಲು ಕಟ್ಟಿ ಬೈಕ್‍ನಲ್ಲಿ ಎಳೆದೊಯ್ದ ಪಾಪಿಗಳು; ಪೆಟಾ ಗರಂ, ಪೊಲೀಸ್ ದೂರು

Wildlife cruelty news: ಬಿಹಾರದಲ್ಲಿ ಕಿಡಿಗೇಡಿಗಳು ಅಪರೂಪ ಪ್ರಬೇಧದ ಮೊಸಳೆಯನ್ನು ಬೈಕ್‍ಗೆ ಕಟ್ಟಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೆಟಾ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ದೂರು ದಾಖಲಿಸಿದೆ. ಬೆಟ್ಟಿಯಾ ಫಾರೆಸ್ಟ್ ಡಿವಿಷನ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಅಪರೂಪದ ಮೊಸಳೆಯನ್ನು ಬೈಕ್‍ನಲ್ಲಿ ಎಳೆದೊಯ್ದ ವ್ಯಕ್ತಿ

ಎಐ ಚಿತ್ರ -

Priyanka P
Priyanka P Dec 29, 2025 5:40 PM

ಪಾಟ್ನಾ, ಡಿ. 29: ಅಪರೂಪದ ಮಾರ್ಷ್ ಮೊಸಳೆಯನ್ನು (Marsh crocodile) ಕಿಡಿಗೇಡಿಗಳು ಬೈಕ್‌ಗೆ ಕಟ್ಟಿ ಎಳೆದುಕೊಂಡು ಹೋಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಈ ಅಮಾನುಷ ಕೃತ್ಯದ ವಿಡಿಯೊವನ್ನು ಪೆಟಾ ಇಂಡಿಯಾ (PETA India) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಮಾರ್ಷ್ ಮೊಸಳೆಯ ಮೇಲಿನ ದೌರ್ಜನ್ಯ ಮತ್ತು ಹಿಂಸೆ ವನ್ಯಜೀವಿ ಪ್ರಿಯರ ಆಕ್ರೋಸಕ್ಕೆ ಕಾರಣವಾಗಿದೆ.

ಈ ವಿಡಿಯೊದಲ್ಲಿ ವ್ಯಕ್ತಿಗಳಿಬ್ಬರು ಈ ಬೃಹತ್ ಸರೀಸೃಪವನ್ನು ಬೈಕ್‌ಗೆ ಕಟ್ಟಿ ತೆರೆದ ಮೈದಾನದಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಬೇಸರದ ಸಂಗತಿ ಎಂದರೆ ಇವರಿಬ್ಬರು ಅಮಾನುಷವಾಗಿ ವರ್ತಿಸಿದರೂ ಸುತ್ತಮುತ್ತ ನೆರೆದಿದವರು ಇದನ್ನು ಖಂಡಿಸಿಲ್ಲ. ಗ್ರಾಮಸ್ಥರು ಅದನ್ನು ನೋಡುತ್ತಾ ನಿಂತಿದ್ದರೆ ಹೊರತು ಮೊಸಳೆಯ ರಕ್ಷಣೆಗೆ ಮುಂದೆ ಬಂದಿಲ್ಲ.

ಮೊಸಳೆ ಬಾಯಿಗೆ ಸಿಕ್ಕ ಸಹಚರನನ್ನು ಕಾಪಾಡಲು ನದಿಗೆ ಹಾರಿದ ಮಂಗಗಳು

ಆಹಾರ ಹುಡುಕುತ್ತ ಬಂದ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಮೋಟಾರ್ ಬೈಕ್‍ಗೆ ಕ್ರೂರವಾಗಿ ಜೋಡಿಸಲಾಗಿದೆ. ನಂತರ, ಒಬ್ಬ ವ್ಯಕ್ತಿ ಬೈಕ್ ಬಳಸಿ ಮೊಸಳೆಯನ್ನು ಎಳೆಯಲು ಪ್ರಾರಂಭಿಸಿದನು. ಆತನಿಗೆ ಬ್ಯಾಲೆನ್ಸ್‌ ತಪ್ಪಿದಾಗ ಮತ್ತೊಬ್ಬ ಬಂದು ಬೈಕ್‌ ಚಲಾಯಿಸಿದ್ದು ವಿಡಿಯೊದಲ್ಲಿ ಕಂಡು ಬಂದಿದೆ. ಇದು ಮೊಸಳೆಯ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡಿತು.

ವಿಡಿಯೊ ಇಲ್ಲಿದೆ:

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಕಾಣಿಸಿಕೊಳ್ಳುತ್ತಿದ್ದಂತೆ, ಪೆಟಾ ಇಂಡಿಯಾ ಔಪಚಾರಿಕ ದೂರು ದಾಖಲಿಸಿತು. ತ್ವರಿತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳ ಬಳಿ ಪೆಟಾ ಆಗ್ರಹಿಸಿದೆ. ಬಿಹಾರ ಅರಣ್ಯ ಇಲಾಖೆಯ ಬೆಟ್ಟಿಯಾ ಅರಣ್ಯ ವಿಭಾಗವು ಸಂರಕ್ಷಿತ ಸರೀಸೃಪದ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಮಗ್ಗರ್ ಮೊಸಳೆಗಳು ಎಂದೂ ಕರೆಯಲ್ಪಡುವ ಮಾರ್ಷ್ ಮೊಸಳೆಗಳನ್ನು 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯ ವೇಳಾಪಟ್ಟಿ Iರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ವೇಳಾಪಟ್ಟಿ Iರ ಅಡಿಯಲ್ಲಿ ಬರುವ ಜೀವಿಗಳ ವಿರುದ್ಧದ ದೌರ್ಜನ್ಯವನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಜಾಮೀನು ರಹಿತ ಕೃತ್ಯ. ಈ ಕಾನೂನಿನಡಿ ತಪ್ಪಿತಸ್ಥರೆಂದು ಕಂಡುಬಂದವರಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದು ಏಳು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ಕನಿಷ್ಠ 25,000 ರುಪಾಯಿ ದಂಡ ವಿಧಿಸಬಹುದಾಗಿದೆ.

ಹೊಟೇಲ್‌ಗೆ ಎಂಟ್ರಿ ಕೊಟ್ಟ ಮೊಸಳೆ; ಕೊನೆಗೆ ಆಗಿದ್ದೇನು ಗೊತ್ತಾ?

ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಪೆಟಾ ಇಂಡಿಯಾ ಅರಣ್ಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದೆ. ಈ ಘಟನೆ ನಂತರ ವನ್ಯಜೀವಿ ಜಾಗೃತಿ, ಮಾನವ–ಪ್ರಾಣಿ ಸಂಘರ್ಷ ಮತ್ತು ವನ್ಯಜೀವಿಗಳು ಮಾನವ ವಾಸಸ್ಥಳಕ್ಕೆ ಬಂದಾಗ ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಮೊಸಳೆ ವಿರುದ್ಧ ದೌರ್ಜನ್ಯ ಎಸಗಿದ್ದಕ್ಕಾಗಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಭಾರತದ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಹೆಚ್ಚಿನ ರಕ್ಷಣೆಗಾಗಿ ಕರೆ ನೀಡಿದ್ದಾರೆ.