#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ವಿಡಿಯೋ ಶೋದಲ್ಲಿ ಅಶ್ಲೀಲ ಮಾತುಕತೆ: ಯುಟ್ಯೂಬರ್‌ಗಳ ಮೇಲೆ ಬಿತ್ತು ಕೇಸ್

ಇತ್ತೀಚಿನ ದಿನಗಳಲ್ಲಿಕಾರ್ಯಕ್ರಮಗಳ ಹೆಸರಿನಲ್ಲಿ ಯುಟ್ಯೂಬರ್‌ಗಳು ಆಕ್ಷೇಪಾರ್ಹ ಕಂಟೆಂಟ್‌ಗಳ ಮೂಲಕ ವಿವಾದಕ್ಕೆ ಕಾರಣವಾಗುತ್ತಿರುವ ನಡುವೆ ಅಸ್ಸಾಂ ಪೊಲೀಸರು ನಾಲ್ವರ ಮೇಲೆ ಎಫ್.ಐ.ಆರ್. ದಾಖಲಿಸಿದ್ದು, ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಮಾಹಿತಿ ನೀಡಿದ್ದಾರೆ.

ನಾಲ್ವರು ಯುಟ್ಯೂಬರ್‌ಗಳ ಮೇಲೆ ಪ್ರಕರಣ ದಾಖಲು

ಯುಟ್ಯೂಬರ್‌ಗಳ ಮೇಲೆ ಪ್ರಕರಣ ದಾಖಲು.

Profile Sushmitha Jain Feb 11, 2025 11:21 AM

ಹೊಸದಿಲ್ಲಿ: ಆಕ್ಷೇಪಾರ್ಹ ಮತ್ತು ಲೈಂಗಿಕ ಪ್ರಚೋದನಕಾರಿ ಹೇಳಿಕೆ ನೀಡಿದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯುಟ್ಯೂಬರ್‌ಗಳಿಗೆ (YouTubers) ಅಸ್ಸಾಂ ಪೊಲೀಸರು (Assam Police) ಬಿಸಿ ಮುಟ್ಟಿಸಿದ್ದಾರೆ. ನಾಲ್ವರು ಯುಟ್ಯೂಬರ್‌ಗಳ ಮೇಲೆ ಪ್ರಚೊದನಕಾರಿ ಕಂಟೆಂಟ್ ಪ್ರಮೋಟ್ ಮಾಡಿದ ಆರೋಪದಲ್ಲಿ ಎಫ್.ಐ.ಆರ್. (FIR) ದಾಖಲಾಗಿದೆ. ಈ ಕುರಿತಾದ ಮಾಹಿತಿಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ (Himanta Biswa Sarma) ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ನೀಡಿದ್ದಾರೆ. ಯುಟ್ಯೂಬರ್‌ಗಳಾಗಿರುವ ಆಶಿಶ್ ಚಂಚ್ಲಾನಿ, ಜಸ್ ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್‌ ಅಲ್ಲಾಬಾಡಿಯಾ ಮೇಲೆ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ (India's Got Talent) ಎನ್ನುವ ಕಾರ್ಯಕ್ರಮದಲ್ಲಿ ಲೈಂಗಿಕ ಪದಗಳ ಬಳಕೆ ಮಾಡಿದ ಮತ್ತು ಲೈಂಗಿಕ ಪ್ರಚೋದನಕಾರಿ ಹಾಗೂ ಅಶ್ಲೀಲ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆರೊಪ ಈ ನಾಲ್ವರ ಮೇಲಿದೆ.

ಭಾರತೀಯ ನ್ಯಾಯ ಸಂಹಿತೆ 2023, ಐಟಿ ಕಾಯ್ದೆ 2000, ಸಿನೆಮಾಟೋಗ್ರಾಫ್ ಕಾಯ್ದೆ 1952 ಹಾಗೂ ರೆಪ್ರೆಸೆಂಟೇಶನ್ ಆಫ್ ವಿಮೆನ್ (ಪ್ರೊಹಿಬಿಷನ್) ಆಕ್ಟ್, 1986ರ ವಿವಿಧ ಸೆಕ್ಷನ್‌ಗಳಡಿಯಲ್ಲಿ ಗೌಹಾತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.



‘ತಂದೆ, ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ಈ ಯುಟ್ಯೂಬರ್‌ಗಳು ಯಾವ ರೀತಿಯಾಗಿ ಕಮೆಂಟ್ ಮಾಡಿದ್ದಾರೆ ಎಂದು ವಿವರಿಸುವ ಒಂದು ಎಫ್.ಐ.ಆರ್. ಒಂದನ್ನು ನಾವು ದಾಖಲಿಸಿಕೊಂಡಿದ್ದೇವೆ. ಮಾತ್ರವಲ್ಲದೇ ಈ ಆರೋಪಿಗಳು ತಮ್ಮ ಯುಟ್ಯೂಬ್ ಕಾರ್ಯಕ್ರಮದಲ್ಲಿ ತುಂಬಾ ಆಕ್ಷೇಪಾರ್ಹ ಮಾದರಿಯಲ್ಲಿ ಕೆಲವೊಂದು ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಇವರ ಮೇಲೆ ಎಫ್.ಐ.ಆರ್. ಒಂದನ್ನು ದಾಖಲಿಸಿದ್ದೇವೆ. ಈ ಯುಟ್ಯೂಬರ್‌ಗಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ – ಈ ಕಾರ್ಯಕ್ರಮದ ಪ್ರಮುಖ ನಿರೂಪಕ ಸಮಯ್ ರೈನಾ ಆಗಿದ್ದು, ಕ್ಲಿಪ್‌ನಲ್ಲಿರುವಂತೆ ಅಶ್ಲೀಲ ಕಮೆಂಟ್ ಮಾಡಿರುವ ವ್ಯಕ್ತಿ ರಣವೀರ್‌ ಅಲಹಾಬಾದಿಯಾ ಎನ್ನಲಾಗಿದೆ ಮತ್ತು ಈತನ ಜತೆ ಇನ್ನೂ ಕೆಲವರ ಸೇರಿಕೊಂಡಿದ್ದಾರೆ. ನಾವು ಅವರನ್ನು ಪತ್ತೆ ಮಾಡಿ, ಈ ಪ್ರಕರಣದಲ್ಲಿ ಸಾಧ್ಯವಿರುವ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಗೌಹಾತಿ ಜಾಯಿಂಟ್ ಪೊಲೀಸ್ ಕಮಿಷನರ್ ಅಂಕುರ್ ಜೈನ್ ಎ.ಎನ್.ಐ. ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಶ್ರೀಲಂಕಾಕ್ಕೆ ತಪ್ಪದ ಕೋತಿ ಕಾಟ; ದೇಶವನ್ನೇ ಕತ್ತಲೆಯಲ್ಲಿ ಮುಳುಗುವಂತೆ ಮಾಡಿದ ವಾನರ ಸೇನೆ!



ಈ ವಿಚಾರಕ್ಕೆ ಸಂಬಂಧಿಸಿದಂತೆ, ಶಿವ ಸೇನಾ ಯುಬಿಟಿ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಪ್ರಕರಣವನ್ನು ಐಟಿ ಮತ್ತು ಸಂವಹನ ಸ್ಥಾಯೀ ಸಮಿತಿಯ ಗಮನಕ್ಕೆ ತರುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಪ್ರಿಯಾಂಕಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದು, ಈ ಯುಟ್ಯೂಬ್ ಕಾರ್ಯಕ್ರಮದಲ್ಲಿ ರಣವೀರ್‌ನ ಅಶ್ಲೀಲ ಕಮೆಂಟ್‌ಗೆ ಸಂಸದೆ ಕಿಡಿ ಕಾರಿದ್ದು, ತಾನು ಈ ಪ್ರಕರಣವನ್ನು ಐಟಿ ಮತ್ತು ಸಂವಹನದ ಸ್ಥಾಯೀ ಸಮಿತಿಯ ಗಮನಕ್ಕೆ ತಂದು ಇಂತಹ ಪ್ರಕರಣಗಳಿಗೊಂದು ಸೂಕ್ತ ಕಾನೂನು ಚೌಕಟ್ಟು ರೂಪಿಸುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಮತ್ತು ಇಂತಹ ಕಾರ್ಯಕ್ರಮಗಳು ಯುವ ಮನಸ್ಸುಗಳ ಮೇಲೆ ಪರಿಣಾಮ ಬೀರುವ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿರುವಂತೆ, ಅಲಹಾಬಾದಿಯಾ ಸೊಮವಾರ ವಿಡಿಯೊ ಮೂಲಕ ಕ್ಷಮೆ ಯಾಚಿಸಿದ್ದಾನೆ ಮತ್ತು ಈ ವಿವಾದಾತ್ಮಕ ಭಾಗವನ್ನು ಕಾರ್ಯಕ್ರಮದ ವಿಡಿಯೋದಿಂದ ತೆಗೆದು ಹಾಕಲಾಗಿದೆ ಎಂದೂ ಹೇಳಿಕೊಂಡಿದ್ದಾನೆ.