#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಶ್ರೀಲಂಕಾಕ್ಕೆ ತಪ್ಪದ ಕೋತಿ ಕಾಟ; ದೇಶವನ್ನೇ ಕತ್ತಲೆಯಲ್ಲಿ ಮುಳುಗುವಂತೆ ಮಾಡಿದ ವಾನರ ಸೇನೆ!

ತ್ರೇತಾಯುಗದಲ್ಲಿ ಸಾಗರ ದಾಟಿ ಬಂದ ಕಪಿ ಸೇನೆ ರಾವಣನ ಲಂಕಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರೆ, ಈ ಕಾಲದಲ್ಲಿ ಕೋತಿಗಳ ಹಿಂಡೊಂದು ಈ ದ್ವೀಪರಾಷ್ಟ್ರವನ್ನು ಕೆಲಕಾಲ ಕಗ್ಗತ್ತಲೆಯಲ್ಲಿ ಮುಳುಗುವಂತೆ ಮಾಡಿದೆ! ಈ ಇಂಟರೆಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.

ಕೋತಿಗಳ ಕಾಟಕ್ಕೆ ಕತ್ತಲೆಯಲ್ಲಿ ಮುಳುಗಿದ ಶ್ರೀಲಂಕಾ

ಸಾಂದರ್ಭಿಕ ಚಿತ್ರ

Profile Sushmitha Jain Feb 11, 2025 8:00 AM

ಕೊಲೊಂಬೋ: ಕೋತಿ ಚೇಷ್ಠೆ ಎನ್ನುವ ಮಾತೊಂದಿದೆ! ಅಂದರೆ ಯಾರಾದ್ರೂ ಏನಾದ್ರು ಕಿತಾಪತಿ ಮಾಡಿದ್ರೆ ಅದಕ್ಕೆ ಕೋತಿ ಚೇಷ್ಠೆ ಎಂದು ಕರೆಯುತ್ತಾರೆ. ಅಂತಹ ಒಂದು ಕೋತಿ ಚೇಷ್ಠೆ ದ್ವೀಪ ರಾಷ್ಟ್ರವಾಗಿರುವ ಶ್ರೀಲಂಕಾವನ್ನು (Sri Lanka) ಕೆಲ ಸಮಯ ಕತ್ತಲಿನ ಕೂಪಕ್ಕೆ ತಳ್ಳಿದೆ ಎಂದರೆ ನಂಬುತ್ತೀರಾ? ಅಚ್ಚರಿಯಾದರೂ ಇದು ಸತ್ಯ. ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಕೋತಿ ಚೇಷ್ಠೆಯ ಕಾರಣದಿಂದ ವಿದ್ಯುತ್ ಕೇಂದ್ರದಲ್ಲಿ (Grid Substation) ಸಮಸ್ಯೆಯುಂಟಾಗಿ ಫೆ. 9ರಂದು ರಾಷ್ಟ್ರವ್ಯಾಪಿ ಜನಜೀವನ ಅಸ್ತವ್ಯಸ್ತಗೊಂಡಿತು. ಈ ವಿಚಾರವನ್ನು ಲಂಕಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಸಮಸ್ಯೆ ಸ್ಥಳೀಯ ಕಾಲಮಾನ ಬೆಳಗ್ಗೆ 11.30ರ ಸುಮಾರಿಗೆ ಸಂಭವಿಸಿದ್ದು, ಸುಮಾರು 3 ಗಂಟೆಗಳ ಕಾಲ ಈ ಸಮಸ್ಯೆ ಮುಂದುವರಿದಿತ್ತು. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಶ್ರಮವಹಿಸಿ ವಿದ್ಯುತ್ ಸಂಪರ್ಕ ಪುನರಾರಂಭಗೊಳ್ಳುವಂತೆ ಮಾಡಿದರು.



ಕಾರಣವೇನು?

ಕೋತಿಯೊಂದು ಗ್ರಿಡ್ ಟ್ರಾನ್ಸ್ ಫಾರ್ಮರ್ (Grid Transformer) ಜತೆ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಈ ಸಮಸ್ಯೆ ಉಂಟಾಗಿದೆ. ಇದು ಇಡೀ ವಿದ್ಯುತ್ ಪೂರೈಕೆ (Electricity Supply) ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಕೊಲಂಬೋ(Colombo)ದ ದಕ್ಷಿಣ ಉಪನಗರದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಈ ಸಂಕಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೇಶದ ಇಂಧನ ಸಚಿವ ಕುಮಾರ ಜಯಕೋಡಿ ನೀಡಿದ್ದಾರೆ.

ʼʼಈ ಸಮಸ್ಯೆಯನ್ನು ಬಗೆಹರಿಸಲು ಎಂಜಿನಿಯರ್‌ಗಳು ಶ್ರಮವಹಿಸುತ್ತಿದ್ದರು ಮತ್ತು ಶೀಘ್ರದಲ್ಲಿ ಈ ಸಮಸ್ಯೆ ಪರಿಹಾರ ಒದಗಿಸಿದರುʼʼ ಎಂದು ಜಯಕೋಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಂಜಿನಿಯರ್‌ಗಳ ಸತತ ಪ್ರಯತ್ನದ ಫಲವಾಗಿ ಕೆಲವೊಂದು ಪ್ರದೇಶಗಳಲ್ಲಿ ತಕ್ಷಣ ವಿದ್ಯುತ್ ಪುರೈಕೆ ಪುನರಾರಂಭಗೊಂಡಿತು. ಇನ್ನುಳಿದ ಪ್ರದೇಶಗಳಲ್ಲಿ ಕ್ರಮೇಣ ವಿದ್ಯುತ್ ಸರಬರಾಜಿನಲ್ಲಿ ಕಂಡುಬಂದ ಸಮಸ್ಯೆ ನಿವಾರಣೆಯಾಗಿದೆ.

ಶ್ರೀಲಂಕಾ ತೀವ್ರ ಸ್ವರೂಪದ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ದೇಶದಲ್ಲಿ ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟು ( Economic Collapse) ಎದುರಾಗಿದ್ದ ಸಂದರ್ಭದಲ್ಲೂ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಸ್ವರೂಪದ ವ್ಯತ್ಯಾಸಗಳುಂಟಾಗಿತ್ತು. ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನ ಕೊರತೆಯಿಂದಾಗಿ ಪ್ರತೀದಿನ 13 ಗಂಟೆ ಮಾತ್ರವೇ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು.

ಇದನ್ನೂ ಓದಿ: Delhi Election Result: ದಿಲ್ಲಿ ಚುನಾವಣೆಯಲ್ಲಿ ಸಿಂಗಲ್ ನಂಬರ್ ಮತಗಳನ್ನು ಪಡೆದವರ ವಿವರ

ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು, ಕೋತಿ ಚೇಷ್ಠೆಯಿಂದ ರಾಷ್ಟ್ರವ್ಯಾಪಿ ಕತ್ತಲು ಆವರಿಸಿರುವುದು ನೆಟ್ಟಿಗರ ವಲಯದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ.

‘ಒಂದು ಉದ್ಧಟ ಕೋತಿ ಕೊಲಂಬೋದಲ್ಲಿ ಶ್ರೀಲಂಕಾದ ಪೂರ್ತಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ’ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ಒಂದು ಕೋತಿ = ಒಟ್ಟು ಗೊಂದಲ. ವಿದ್ಯುತ್ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಇದೇ ಸರಿಯಾದ ಸಮಯ’ ಎಂದು ಇನ್ನೊಬ್ಬರು ಹೇಳಿದ್ದಾರೆ.

‘ಲಂಕನ್ನರಿಗೆ ಕೋತಿಗಳ ಪರಾಕ್ರಮ ಅನುಭವಕ್ಕೆ ಬಂದಿರುವುದು ಇದೇ ಮೊದಲಲ್ಲ...’ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.

‘ಕೋತಿಗಳ ಗುಂಪು ಪವರ್ ಸ್ಟೇಷನ್ ಒಳಗಡೆ ಕಾದಾಟ ನಡೆಸಿ ದ್ವೀಪರಾಷ್ಟ್ರದ ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಲು ಶ್ರೀಲಂಕಾದಲ್ಲಿ ಮಾತ್ರವೇ ಸಾಧ್ಯ’ ಎಂದು ಡೈಲಿ ಮಿರರ್ ಪತ್ರಿಕೆಯ ಪ್ರಧಾನ ಸಂಪಾದಕ ಜಮಿಲಾ ಹುಸೈನ್ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ತ್ರೇತಾಯುಗದಲ್ಲಿ ಸಾಗರ ದಾಟಿ ಬಂದ ಕಪಿ ಸೇನೆ ರಾವಣನ ಲಂಕಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರೆ, ಈ ಕಾಲದಲ್ಲಿ ಕೋತಿಗಳ ಹಿಂಡು ಈ ದ್ವೀಪರಾಷ್ಟ್ರವನ್ನು ಕೆಲಕಾಲ ಕಗ್ಗತ್ತಲೆಯಲ್ಲಿ ಮುಳುಗುವಂತೆ ಮಾಡಿದೆ!