Vladimir Putin: ಪ್ರಧಾನಿ ಮೋದಿ ನನ್ನ ಸ್ನೇಹಿತ, ಅವಮಾನಕ್ಕೆ ತಲೆ ಬಾಗಿಸೊಲ್ಲ: ವ್ಲಾದಿಮಿರ್ ಪುಟಿನ್
PM Narendra Modi: ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಸ್ನೇಹಿತ ಎಂದು ಉಲ್ಲೇಖಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅವರ ವಿಶ್ವಾಸಾರ್ಹ ಸಂವಹನವನ್ನು ಪ್ರಶಂಸಿಸಿದರು. ಮೋದಿಯವರನ್ನು "ಸಮತೋಲಿತ, ಬುದ್ಧಿವಂತ ಮತ್ತು ರಾಷ್ಟ್ರೀಯ ದೃಷ್ಟಿಕೋನ ಹೊಂದಿರುವ ನಾಯಕ" ಎಂದು ಕರೆದರು.

-

ಮಾಸ್ಕೋ: ಭಾರತ (India) ಹಾಗೂ ರಷ್ಯಾದ (Russia) ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸುವಂತೆ ಒತ್ತಡ ಹೇರಲು ಅಮೆರಿಕ ಪ್ರಯತ್ನಿಸುತ್ತಿರುವುದನ್ನು ಟೀಕಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ನವದೆಹಲಿ ಎಂದಿಗೂ ಅಂತಹ ಬೇಡಿಕೆಗಳಿಗೆ ಮಣಿಯುವುದಿಲ್ಲ ಮತ್ತು ಯಾರ ಮುಂದೆಯೂ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಸೋಚಿಯಲ್ಲಿ ನಡೆದ ವಾಲ್ಡೈ ಚರ್ಚಾ ಕ್ಲಬ್‌ನ ಸಮಗ್ರ ಅಧಿವೇಶನದಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು "ಸಮತೋಲಿತ ಮತ್ತು ಬುದ್ಧಿವಂತ ನಾಯಕ" ಎಂದು ಹೊಗಳಿದರು.
ಭಾರತವು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು "ಸಂಪೂರ್ಣವಾಗಿ ಆರ್ಥಿಕ ಲೆಕ್ಕಾಚಾರ" ಎಂದು ಅವರು ಹೇಳಿದರು. ಇಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಕೆಲವು ನಷ್ಟಗಳನ್ನು ಅನುಭವಿಸುತ್ತದೆ. ಅಂದಾಜುಗಳು ಬದಲಾಗುತ್ತವೆ; ಕೆಲವರು ಇದು ಸುಮಾರು $9-10 ಬಿಲಿಯನ್ ಆಗಿರಬಹುದು ಎಂದು ಹೇಳುತ್ತಾರೆ. ಆದರೆ ಅದು ನಿರಾಕರಿಸದಿದ್ದರೆ, ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಮತ್ತು ನಷ್ಟವು ಅದೇ ಪ್ರಮಾಣದಲ್ಲಿರುತ್ತದೆ ಎಂದು ಪುಟಿನ್ ಕೇಳಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಸ್ನೇಹಿತ ಎಂದು ಉಲ್ಲೇಖಿಸಿದ ಅವರು, ಅವರ ವಿಶ್ವಾಸಾರ್ಹ ಸಂವಹನವನ್ನು ಪ್ರಶಂಸಿಸಿದರು. ಮೋದಿಯವರನ್ನು "ಸಮತೋಲಿತ, ಬುದ್ಧಿವಂತ ಮತ್ತು ರಾಷ್ಟ್ರೀಯ ದೃಷ್ಟಿಕೋನ ಹೊಂದಿರುವ ನಾಯಕ" ಎಂದು ಕರೆದರು.
ಖಂಡಿತ ಭಾರತದಂತಹ ದೇಶದ ಜನರು ಅಲ್ಲಿನ ರಾಜಕೀಯ ನಾಯಕತ್ವವು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಯಾರ ಮುಂದೆಯೂ ಯಾವುದೇ ಅವಮಾನಕ್ಕೆ ಎಂದಿಗೂ ಒಳಗಾಗುವುದಿಲ್ಲ. ನನಗೆ ಪ್ರಧಾನಿ ಮೋದಿ ಗೊತ್ತು; ಅವರು ಸ್ವತಃ ಈ ರೀತಿಯ ಯಾವುದೇ ಕ್ರಮಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ. ಯುಎಸ್ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ. ಜೊತೆಗೆ ಅದು ಸಾರ್ವಭೌಮ ರಾಷ್ಟ್ರವೂ ಆಗಿ ಪ್ರತಿಷ್ಠೆಯನ್ನು ಉಳಿಸಿಕೊಳ್ಳುತ್ತದೆ ಎಂದಿದ್ದಾರೆ ಪುಟಿನ್.
ಎರಡು ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವಾಗ ಚೀನಾ ಮತ್ತು ಭಾರತವನ್ನು ಉಕ್ರೇನ್ ಯುದ್ಧದ "ಪ್ರಾಥಮಿಕ ಹಣಕಾಸು ಸಹಾಯಗಾರರು" ಎಂದು ಕರೆದಿದ್ದರು. ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಮೂಲಕ ಅದಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಆರೋಪಿಸಿದ್ದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಶಿಕ್ಷೆಯಾಗಿ ಅಮೆರಿಕ ಭಾರತದ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದೆ. ಆಗಸ್ಟ್‌ನಲ್ಲಿ ಭಾರತೀಯ ರಫ್ತಿನ ಮೇಲಿನ ಒಟ್ಟು ತೆರಿಗೆಯನ್ನು ಶೇಕಡಾ 50 ಕ್ಕೆ ಹೆಚ್ಚಿಸಿದೆ.
ವ್ಯಾಪಾರ ಪಾಲುದಾರರ ಮೇಲಿನ ಹೆಚ್ಚಿನ ಸುಂಕಗಳು ಜಾಗತಿಕ ಬೆಲೆಗಳನ್ನು ಹೆಚ್ಚಿಸಬಹುದು ಮತ್ತು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಲು ಒತ್ತಾಯಿಸಬಹುದು ಎಂದು ಪುಟಿನ್ ಗಮನಿಸಿದರು. ಸೋವಿಯತ್ ಒಕ್ಕೂಟದ ಕಾಲದಿಂದಲೂ ರಷ್ಯಾ- ಭಾರತ ಸಂಬಂಧಗಳ "ವಿಶೇಷ" ಸ್ವರೂಪವನ್ನು ಎತ್ತಿ ತೋರಿಸಿದರು. ಭಾರತದವರು ಅದನ್ನು ಗೌರವಿಸುತ್ತಾರೆ. ಭಾರತ ಅದನ್ನು ಮರೆತಿಲ್ಲ. ನಮಗೆ ಭಾರತದೊಂದಿಗೆ ಯಾವುದೇ ಸಮಸ್ಯೆಗಳು ಅಥವಾ ಅಂತರರಾಷ್ಟ್ರ ಉದ್ವಿಗ್ನತೆಗಳು ಎಂದಿಗೂ ಇರಲಿಲ್ಲ ಎಂದವರು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: Narendra Modi: ಪುಟಿನ್-ಮೋದಿ ದೂರವಾಣಿ ಸಂಭಾಷಣೆ: ಉಕ್ರೇನ್ ಯುದ್ಧದ ಬಗ್ಗೆ ಚರ್ಚೆ, ಶಾಂತಿಗೆ ಕರೆ