Encounter in Kupwara: ಕುಪ್ವಾರಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಒಳ ನುಸುಳಲು ಯತ್ನಿಸಿದ ಭಯೋತ್ಪಾದಕರ ಪ್ರಯತ್ನವನ್ನು ತಡೆದ ಭದ್ರತಾ ಪಡೆ ಅವರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ (Kupwara) ಜಿಲ್ಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ (Line of Control-LoC) ಭಾರತದ ಒಳ ನುಸುಳಲು ಯತ್ನಿಸಿದ ಭಯೋತ್ಪಾದಕರ ಪ್ರಯತ್ನವನ್ನು ತಡೆದ ಭದ್ರತಾ ಪಡೆ ಅವರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ. ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು.
ಆರಂಭದಲ್ಲಿ ಅಡಗು ತಾಣದಲ್ಲಿದ್ದ ಉಗ್ರರು ಆಕ್ರಮಣ ನಡೆಸಿದರು. ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಭಯೋತ್ಪಾದಕರು ಬಲಿಯಾದರು. ಅದಾಗ್ಯೂ ಅವರ ಶವವನ್ನು ಇನ್ನು ವಶಕ್ಕೆ ಪಡೆದುಕೊಂಡಿಲ್ಲ. ಸ್ಥಳಕ್ಕೆ ಭಯೋತ್ಪಾದನೆ ನಿಗ್ರಹ ದಳ ಧಾವಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.
#IndianArmy has foiled an infiltration bid along the #LoC and neutralised 2 Pakistani terrorists in J&K's Kupwara. pic.twitter.com/LyXnLRo6c2
— News IADN (@NewsIADN) September 28, 2025
ಈ ಸುದ್ದಿಯನ್ನೂ ಓದಿ: Encounter in Kishtwar: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ; ಭಯೋತ್ಪಾದಕರನ್ನು ಹಿಮ್ಮೆಟ್ಟಿಸುತ್ತಿರುವ ಭಾರತೀಯ ಸೇನೆ
ಚಳಿಗಾಲ ಆರಂಭವಾಗುವ ಮುನ್ನ ಒಳನುಸುಳುವಿಕೆ ಪ್ರಯತ್ನಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. "ಹಿಮಪಾತಕ್ಕೂ ಮುನ್ನ ಯಾವಾಗಲೂ ಒಳನುಸುಳುವಿಕೆ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಭದ್ರತಾ ಪಡೆಗಳು ಗಡಿಯಲ್ಲಿ ಕಟ್ಟೆಚ್ಚರ ವಹಿಸಿವೆʼʼ ಎಂದು ವಿವರಿಸಿದ್ದಾರೆ.
ಬಂಡಿಪೋರಾ ಮತ್ತು ಕುಪ್ವಾರಾ ಸೆಕ್ಟರ್‌ಗಳ ಎದುರಿನ ಎಲ್‌ಒಸಿಯಾದ್ಯಂತ ಲಾಂಚ್ ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಒಳನುಸುಳುವ ಅವಕಾಶಕ್ಕಾಗಿ ಕಾಯುತ್ತಲೇ ಇದ್ದಾರೆ ಎನ್ನಲಾಗಿದೆ. "ಭದ್ರತೆ ತುಂಬಾ ಬಿಗಿಯಾಗಿದೆ. ಯಾವಾಗಲೂ ಒಳನುಸುಳಲು ಪ್ರಯತ್ನ ನಡೆಯುತ್ತವೆ. ಆದರೆ ನಾವು ಈ ಸವಾಲನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ ಮತ್ತು ಕಟ್ಟೆಚ್ಚರ ವಹಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
ಹೈಟೆಕ್ ಕಣ್ಗಾವಲು ವ್ಯವಸ್ಥೆಗಳ ಸಹಾಯದಿಂದ ಸೇನೆ ಮತ್ತು ಬಿಎಸ್‌ಎಫ್ ಎಲ್‌ಒಸಿಯಲ್ಲಿ ಸರ್ಪಗಾವಲು ಹಾಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದ್ದು, ಬಿಎಸ್‌ಎಫ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಬೆಳಗ್ಗೆ 6.30ರ ಸುಮಾರಿಗೆ ರಾಮಗಢ ವಲಯದ ಕರಾಲಿಯನ್ ಗ್ರಾಮದ ಮೇಲೆ ಡ್ರೋನ್ ಸುಳಿದಾಡುತ್ತಿರುವುದು ಕಂಡುಬಂದಿದ್ದು, ನಂತರ ಕಣ್ಮರೆಯಾಗಿದೆ ಎಂದು ವರದಿಯಾಗಿದೆ.
ಗಡಿಯಾಚೆಯಿಂದ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳನ್ನು ಸಾಗಿಸಿಲ್ಲ ಎಂದು ತಕ್ಷಣವೇ ಬಿಎಸ್‌ಎಫ್ ಪಡೆಗಳು ಗ್ರಾಮ ಮತ್ತು ಅಕ್ಕಪಕ್ಕದ ಪ್ರದೇಶಗಳನ್ನು ಶೋಧಿಸಿದವು. ಈಗಲೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕಿಶ್ತ್ವಾರ್‌ನಲ್ಲಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ
ಕಳೆದ ವಾರ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಿಂದ ಉಗ್ರರನ್ನು ಹಿಮ್ಮೆಟ್ಟಿಸಿತ್ತು. ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಯಿತು. ಪಿಟಿಐ ವರದಿಯ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು. ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಭಯೋತ್ಪಾದಕರನ್ನು ಹೊಡೆದುರುಳಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.