ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seema Haider: ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್‌; ಪ್ರೀತಿಗಾಗಿ ಪಾಕ್‌ನಿಂದ 2 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಮಹಿಳೆ ಈಕೆ

Seema Haider-Sachin Meena: ಪಬ್‌ಜಿ ಮೂಲಕ ಪರಿಚಯವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಸಚಿನ್‌ ಮೀನಾ ಅವರನ್ನು ವರಿಸಿದ ಸೀಮಾ ಹೈದರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯದಿಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್‌

ಸಚಿನ್‌ ಮೀನಾ ಮತ್ತು ಸೀಮಾ ಹೈದರ್‌.

Profile Ramesh B Mar 18, 2025 3:53 PM

ಲಖನೌ: ಆನ್‌ಲೈನ್‌ ಗೇಮ್‌ ಪಬ್‌ಜಿ (PUBG) ಮೂಲಕ ಪರಿಚಯವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಸಚಿನ್‌ ಮೀನಾ (Sachin Meena) ಅವರನ್ನು ಮದುವೆಯಾಗಿ ಪ್ರೀತಿಗೆ ಗಡಿಯ ಹಂಗಿಲ್ಲ ಎಂದು ಸಾರಿದ್ದ ಸೀಮಾ ಹೈದರ್‌ (Seema Haider) ಮಂಗಳವಾರ (ಮಾ. 18) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ʼʼಗ್ರೇಟರ್‌ ನೋಯ್ಡಾದ ಕೃಷ್ಣ ಲೈಫ್‌ಲೈನ್‌ ಆಸ್ಪತ್ರಯಲ್ಲಿ ಸೀಮಾ ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ-ಮಗು ಆರೋಗ್ಯದಿಂದಿದ್ದಾರೆʼʼ ಎಂದು ವಕೀಲ, ಕುಟುಂಬದ ಆಪ್ತ ಎ.ಪಿ.ಸಿಂಗ್‌‌ (AP Singh) ತಿಳಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಸೀಮಾ ಹೈದರ್ ಮತ್ತು ಸಚಿನ್‌ ಮೀನಾ ತಾವು ಪೋಷಕರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.

ʼʼಸೀಮಾ ಮತ್ತು ಸಚಿನ್‌ ಅವರನ್ನು ಬೆಂಬಲಿಸುವ ಪ್ರತಿಯೊಬ್ಬರೂ ಖುಷಿ ಪಡುವ ವಿಚಾರ ಇದು. ಇವರಿಬ್ಬರು ಮಾತ್ರವಲ್ಲ ದೇಶವೇ ಮಗುವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದೆʼʼ ಎಂದು ಎ.ಪಿ.ಸಿಂಗ್‌ ಹೇಳಿದ್ದಾರೆ.



ಆನ್‌ಲೈನ್‌ ಗೇಮ್‌ ಆಡುತ್ತಾ ಪರಿಚಯವಾದ ಸಚಿನ್‌ನನ್ನು ಪ್ರೀತಿಸುತ್ತಿದ್ದ ಸೀಮಾ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ನಂತರ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Narendra Modi : ಟ್ರಂಪ್‌ಗೂ 10 ವರ್ಷದ ಮೊದಲೇ DOGE ಪರಿಚಯಿಸಿದ ಮೋದಿ ಸರ್ಕಾರ; 5 ಲಕ್ಷ ಕೋಟಿ ರೂ ಉಳಿಸಿದ್ದು ಹೇಗೆ?

ಸೀಮಾ-ಸಚಿನ್‌ ಲವ್‌ ಸ್ಟೋರಿ

ಲಾಕ್‌ಡೌನ್‌ ವೇಳೆ ಪಬ್‌ಜಿ ಗೇಮ್‌ ಆಡುತ್ತ ಪರಿಚಯವಾದ ಸೀಮಾ ಮತ್ತು ಸಚಿನ್‌ ಅವರದ್ದು ಅಪರೂಪದ ಲವ್‌ ಸ್ಟೋರಿ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರ ನಿವಾಸಿ ಸಚಿನ್ ಮತ್ತು ಪಾಕಿಸ್ತಾನಿ ಮಹಿಳೆ ಸೀಮಾಳ ಲವ್​ಸ್ಟೋರಿ 2 ವರ್ಷಗಳ ಹಿಂದೆ ದೇಶಾದ್ಯಂತ ಭಾರೀ ಚರ್ಚೆಯಾಗಿತ್ತು. ಸಚಿನ್‌ಗಾಗಿ ಸೀಮಾ ತನ್ನ 4 ಮಕ್ಕಳೊಂದಿಗೆ 2023ರಲ್ಲಿ 3 ದೇಶಗಳ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅಂದಿನಿಂದ ಇಲ್ಲಿಯೇ ವಾಸವಾಗಿದ್ದಾರೆ. ಸೀಮಾ ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಸಚಿನ್‌ ಜತೆ ಸಪ್ತಪದಿ ತುಳಿದಿದ್ದರು. ಅದಾದ ಬಳಿಕ ಅವರ ಮಕ್ಕಳಿಗೂ ಹಿಂದೂ ಹೆಸರನ್ನು ಇಡಲಾಗಿತ್ತು.

ಕಾನೂನು ಸಂಕಷ್ಟ

ಸೀಮಾ ಹೈದರ್‌ ಅನಧಿಕೃತವಾಗಿ ಭಾರತಕ್ಕೆ ಕಾಲಿಟ್ಟಿದ್ದರಿಂದ ಸಾಕಷ್ಟು ಕಾನೂನು ಸಂಕಷ್ಟಗಳನ್ನೂ ಎದಿರಿಸಬೇಕಾಯ್ತು. ಸಚಿನ್‌ ಮತ್ತು ಸೀಮಾ ಅವರನ್ನು ಮೊದಲು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಸೀಮಾ ಅವರ ಮೊದಲ ಪತಿ, ಪಾಕಿಸ್ತಾನದಲ್ಲಿರುವ ಘುಲಮ್‌ ಹೈದರ್‌ ಪತ್ನಿಯನ್ನು ಮರಳಿ ಕರೆತರಲು ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಆದರೆ ಆಕೆ ಇನ್ನೊಂದೂ ಪಾಕ್‌ಗೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ. ಸಚಿನ್‌ ಮನೆಯವರೂ ಸೀಮಾ ಅವರನ್ನು ತಮ್ಮ ಸೊಸೆ ಎಂದು ಒಪ್ಪಿಕೊಂಡಿದ್ದಾರೆ.

ʼʼನಾನು ಬೇಕಾದರೆ ಪ್ರಾಣ ಕಳೆದುಕೊಳ್ಳುತ್ತೇನೆ. ಆದರೆ ಸಚಿನ್‌ನನ್ನು ಬಿಟ್ಟು ಹೋಗುವುದಿಲ್ಲ. ಆದಷ್ಟು ಬೇಗ ಭಾರತದ ಪೌರತ್ವ ನೀಡಬೇಕುʼʼ ಎಂದು ಸೀಮಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ರಬೂಪುರ ನಿವಾಸಿಗಳೂ ಸಚಿನ್‌-ಸೀಮಾ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪಾಕಿಸ್ತಾನಕ್ಕೆ ಹೋದರೆ ಸೀಮಾ ಅವರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.