ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

''ಅಧಿಕಾರದಲ್ಲಿದ್ದವರು ತಮ್ಮ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡ್ತಾರ?'' ಶಾಲಾ ಮಧ್ಯಾಹ್ನ ಬಿಸಿಯೂಟದ ಕಳಪೆ ಗುಣಮಟ್ಟದ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ

Abhijeet Dipke: ದೇಶದ ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಿಜೆಪಿ ಪಕ್ಷದ ಸಂಸ್ಥಾಪಕ ಅಭೀಜಿತ್ ದೀಪ್ಕೆ ಹಮ್ಮಿಕೊಂಡಿರುವ ‘ಶಾಲೆ ಠೀಕ್ ಕರೋ’ ಅಭಿಯಾನದ ಬೆನ್ನಲ್ಲೇ, ಮಹಾರಾಷ್ಟ್ರದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಅವಧಿ ಮೀರಿದ ಆಹಾರ ಪೂರೈಸಲಾಗುತ್ತಿದೆ ಎಂಬ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸರ್ಕಾರದ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗೆ ಅವಧಿ ಮೀರಿದ ಆಹಾರ ಪೂರೈಕೆ: ಅಭಿಜಿತ್ ದೀಪ್ಕೆ ಆಕ್ರೋಶ

ಅಭಿಜಿತ್‌ ದೀಪ್ಕೆ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 29, 2026 9:14 PM

ಮುಂಬೈ, ಆ. 29: ದೇಶದ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಮೂಲಸೌಕರ್ಯ ಸುಧಾರಣೆಗಾಗಿ ಕಾಕ್ರೋಚ್‌ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಸ್ಕೂಲ್‌ ಠೀಕ್ ಕರೋ (School Thik Karo) ಅಭಿಯಾನದ ವೇಳೆ ಮಹಾರಾಷ್ಟ್ರದ ಶಾಲೆಯೊಂದಕ್ಕೆ ಬೇಟಿ ನೀಡಿದ ಅಭಿಜಿತ್ ದೀಪ್ಕೆ (Abhijeet Dipke) ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡಲಾಗುತ್ತಿರುವ ವಿಚಾರವನ್ನು ಬಯಲು ಮಾಡಿದ್ದಾರೆ. ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಆಹಾರ ಪದಾರ್ಥಗಳು ಅವಧಿ ಮೀರಿರುವ ಕುರಿತ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ʼʼಅಧಿಕಾರದಲ್ಲಿರುವ ನಾಯಕರು ತಮ್ಮ ಮಕ್ಕಳಿಗೆ ಇಂತಹ ಅವಧಿ ಮೀರಿದ ಮತ್ತು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಾರೆಯೇ? ಒಂದು ವೇಳೆ ಈ ಸತ್ಯವನ್ನು ಹೊರ ಹಾಕಿದ್ದಕ್ಕಾಗಿ ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವುದಾದರೆ ದಾಖಲಿಸಲಿ. ಆದರೆ ಯಾವುದೇ ಕಾರಣಕ್ಕೂ ನಾವು ಈ ಕಟು ಸತ್ಯವನ್ನು ಸಮಾಜದ ಮುಂದೆ ತೆರೆದಿಡುವುದನ್ನು ನಿಲ್ಲಿಸುವುದಿಲ್ಲʼ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶಾಲೆಯಲ್ಲಿನ ಅವಧಿ ಮೀರಿದ ಆಹಾರ ಪ್ರದರ್ಶಿಸಿದ ಅಭಿಜಿತ್‌ ದೀಪ್ಕೆ:



ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಬೆಂಬಲ

ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾವಿರಾರು ನೆಟ್ಟಿಗರು ಈ ವಿಡಿಯೊವನ್ನು ಹಂಚಿಕೊಂಡು, ಮಕ್ಕಳ ಪೋಷಣೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರಿ ಶಾಲೆಗಳ ಈ ದುಸ್ಥಿತಿಯನ್ನು ‘ಶಾಲೆ ಠೀಕ್ ಕರೋ’ ಅಭಿಯಾನದ ಎತ್ತಿ ತೋರಿಸಿದ್ದು, ಕೊಡಲೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ದೀಪ್ಕೆ ಹೇಳಿದ್ದಾರೆ.

ಸಿಜೆಪಿ ಕಾರ್ಯಕರ್ತರ ಮೇಲಿನ ದಾಳಿ ಬಳಿಕ ಶಿಥಿಲಗೊಂಡಿದ್ದ ಶಾಲೆಗೆ ಹೊಸ ಕಟ್ಟಡ: ರಾಜಸ್ಥಾನ ಸರ್ಕಾರ ಆದೇಶ

ಅವಧಿ ಮೀರಿದ ಮಸಾಲೆ ಪ್ಯಾಕೇಟ್

ದೀಪ್ಕೆ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಶಾಲೆಯಲ್ಲಿದ್ದ ಮಸಾಲೆ ಪ್ಯಾಕೇಟ್‌ನ ಅವಧಿ ಮುಗಿದಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ಈ ಮಸಾಲೆ ಪ್ಯಾಕೇಟ್ ಅನ್ನು 2025ರ ಆಗಸ್ಟ್‌ನಲ್ಲಿ ಪ್ಯಾಕ್ ಮಾಡಲಾಗಿದ್ದು, 2026ರ ಫೆಬ್ರವರಿ ಒಳಗೆ ಬಳಸಬೇಕಾಗಿತ್ತು. ಇದನ್ನು ಖಂಡಿಸಿ ‘ʼಗ್ರಾಮೀಣ ಭಾರತದ ಮಕ್ಕಳಿಗೆ ಅವಧಿ ಮೀರಿದ ಮತ್ತು ಕಳಪೆ ಆಹಾರವನ್ನು ನೀಡಲಾಗುತ್ತಿದೆʼ’ ಎಂದು ದೀಪ್ಕೆ ಕಿಡಿಕಾರಿದ್ದಾರೆ.

ಶಾಲಾ ಮೂಲ ಸೌಕರ್ಯ ಕೇಂದ್ರೀಕೃತ ಅಭಿಯಾನ

ಈ ಅಭಿಯಾನದ ಭಾಗವಾಗಿ ಮಹಾರಾಷ್ಟ್ರದ ಶಾಲೆಯೊಂದಕ್ಕೆ ನೀಡಿದ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ದೀಪ್ಕೆ ಹಲವು ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಅನೇಕ ಗ್ರಾಮಗಳಲ್ಲಿ ಶಾಲೆಗಳೇ ಇಲ್ಲದ ಕಾರಣ ಹಾಗೂ ಸೂಕ್ತ ಸಾರಿಗೆ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪ್ರತಿದಿನ ಕಿಲೋ ಮೀಟಟ್‌ಗಟ್ಟಲೆ ದೂರ ನಡೆದುಕೊಂಡೇ ಶಾಲೆಗೆ ತೆರಳಬೇಕಾದ ಅನಿವಾರ್ಯತೆಯಿದೆ.

ಆದ್ದರಿಂದ ಸಿಜೆಪಿ ಆರಂಭಿಸಿರುವ ಈ ‘ಶಾಲೆ ಠೀಕ್ ಕರೋ’ ಅಭಿಯಾನವು ಕೇವಲ ತರಗತಿಯ ಒಳಗಿನ ಚಟುವಟಿಕೆಗಳು ಅಥವಾ ಪಠ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಮಕ್ಕಳು ಸುರಕ್ಷಿತವಾಗಿ ಶಾಲೆ ತಲುಪಲು ಸಾಧ್ಯವಿದೆಯೇ ಮತ್ತು ಶಾಲೆ ತಲುಪಿದ ನಂತರ ಅವರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಸರಿಯಾದ ಸಾರಿಗೆಯಂತಹ ಕನಿಷ್ಠ ಮೂಲಸೌಕರ್ಯಗಳು ದೊರೆಯುತ್ತಿವೆಯೇ ಎಂಬುದರ ಮೇಲೆಯೂ ಇದು ಕೇಂದ್ರಿಕೃತವಾಗಿದೆ.

ದೆಹಲಿ ಹೋರಾಟದ ಬಳಿಕ ರಾಷ್ಟ್ರವ್ಯಾಪಿ ಮತ್ತೆ ಹೊಸ ಆಂದೋಲನ ಘೋಷಿಸಿದ ಸಿಜೆಪಿಯ ಅಭಿಜಿತ್ ದೀಪ್ಕೆ

ದೇಶಾದ್ಯಂತ ಮಾಹಿತಿ ಸಂಗ್ರಹ

ಈ ಯೋಜನೆ ಭಾಗವಾಗಿ ಶಾಲೆಯಲ್ಲಿ ಕನಿಷ್ಠ ಮೂಲಸೌಕರ್ಯಗಳು ಇವೆಯೇ ಅಥವಾ ಇಲ್ಲವೇ ಎಂಬುವುದನ್ನು ಪರಿಶೀಲಿಸಲು ಚೆಕ್‌ಲಿಸ್ಟ್ ರೂಪಿಸಿ ಪೋಷಕರು ಮತ್ತು ಸರ್ಕಾರಿ ಅಧಿಕಾರಿಗಳು ಅದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅಭಿಜಿತ್ ದೀಪ್ಕೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಸೇರಿ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳ ನೈಜ ಸ್ಥಿತಿಗತಿಯ ಮಾಹಿತಿಯನ್ನು ಸಂಗ್ರಹಿಸಿ ಕ್ರೂಢೀಕರಿಸಲು ಕಾಕ್ರೋಚ್ ಜನತಾ ಪಾರ್ಟಿ ಯೋಜನೆ ರೂಪಿಸಿದೆ. ಈ ಸೋಷಿಯಲ್ ಆಡಿಟ್ ಮತ್ತು ಮಾಹಿತಿ ಸಂಗ್ರಹಣೆ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿರದೆ, ನಿಜವಾಗಿಯೂ ಗ್ರಾಮೀಣ ಭಾಗದ ಶಾಲೆಗಳ ಮೂಲಸೌಕರ್ಯಗಳ ಸುಧಾರಣೆಗೆ ಎಷ್ಟರಮಟ್ಟಿಗೆ ಹಾದಿಮಾಡಿಕೊಡುತ್ತದೆ ಎಂಬುವುದರ ಮೇಲೆ ಈ ಅಭಿಯಾನದ ನೈಜ ಯಶಸ್ಸು ಆಧಾರಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.