ದೇಶಾದ್ಯಂತ ನೀರಿನ ಸಮೃದ್ಧ ಪೂರೈಕೆಗೆ ಸುಜಲಾಂ ಭಾರತ್ ಯೋಜನೆ ಜಾರಿ
ಎರಡು ದಿನಗಳ ʼಸುಜಲಾಂ ಭಾರತ್ ವಿಶನ್ʼ ಶೃಂಗ ಸಮಾವೇಶವು ಹೊಸದಿಲ್ಲಿಯಲ್ಲಿ 2025ರ ನವೆಂಬರ್ 29ರಂದು ಮುಕ್ತಾಯವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಭಾಗವಾಗಿ, ಜಲಶಕ್ತಿ ಸಚಿವಾಲಯವು ನೀತಿ ಆಯೋಗದ ಸಹಯೋಗದೊಂದಿಗೆ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಸಂಗ್ರಹ ಚಿತ್ರ -
ಚೆನ್ನೇಗೌಡ, ಬೆಂಗಳೂರು
ಬೆಂಗಳೂರು, ಡಿ. 3: ಸುಜಲಾಂ ಭಾರತ್ ವಿಶನ್-2025 (Sujalam Bharat Summit-2025)- ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಇಡೀ ದೇಶದಲ್ಲಿ ಸುರಕ್ಷಿತ ಕುಡಿಯುವ ನೀರು, ಜಲ ಸಂರಕ್ಷಣೆ ಮತ್ತು ಆರೋಗ್ಯಕರ ಸಮುದಾಯವನ್ನು ನಿರ್ಮಿಸುವ ಸಂಕಲ್ಪ ಹೊಂದಿರುವ ಮಹತ್ತ್ವಾಕಾಂಕ್ಷೆಯ ರಾಷ್ಟ್ರೀಯ ಅಭಿಯಾನ. ಕೇಂದ್ರ ಸರಕಾರ-ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು, ಜತೆಗೆ ಸಾರ್ವಜನಿಕರನ್ನು ಒಳಗೊಂಡಂತೆ ಎಲ್ಲರ ಪ್ರಯತ್ನ, ಪರಿಶ್ರಮದಿಂದ ಇದು ಅನುಷ್ಠಾನವಾಗುತ್ತಿರುವುದು ವಿಶೇಷ. ಆದ್ದರಿಂದ ತೀವ್ರ ಕುತೂಹಲ ಮೂಡಿಸಿದೆ.
ಎರಡು ದಿನಗಳ 'ಸುಜಲಾಂ ಭಾರತ್ ವಿಶನ್ʼ ಶೃಂಗ ಸಮಾವೇಶವು ಹೊಸದಿಲ್ಲಿಯಲ್ಲಿ 2025ರ ನವೆಂಬರ್ 29ರಂದು ಮುಕ್ತಾಯವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಭಾಗವಾಗಿ, ಜಲಶಕ್ತಿ ಸಚಿವಾಲಯವು ನೀತಿ ಆಯೋಗದ ಸಹಯೋಗದೊಂದಿಗೆ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಏನಿದು ಸುಜಲಾಂ ಭಾರತ್?
ಈ ಯೋಜನೆಯ ಉದ್ದೇಶ, ದೇಶಾದ್ಯಂತ ಜಲ ನಿರ್ವಹಣೆಯನ್ನು ಬಲಪಡಿಸುವುದು, ನೈರ್ಮಲ್ಯೀಕರಣ ಮತ್ತು ದೇಶಾದ್ಯಂತ ಜಲಮೂಲಗಳ ರಕ್ಷಣೆಗೆ ಸುಸ್ಥಿರ ಪ್ರಯತ್ನ ನಡೆಸುವುದು. ಈ ಕುರಿತ ರಾಷ್ಟ್ರೀಯ ಮಟ್ಟದ ನಿರ್ಧಾರ ಪ್ರಕ್ರಿಯೆಗಳಲ್ಲಿ ತಳಮಟ್ಟದ ಪರಿಕಲ್ಪನೆಗಳನ್ನು ಕೂಡ ಒಳಗೊಳ್ಳುವುದು, ದೇಶದುದ್ದಕ್ಕೂ ಜಲ ಸಂಪನ್ಮೂಲಗಳನ್ನು ಭದ್ರಪಡಿಸಲು ಮತ್ತು ಅಭಿವೃದ್ಧಿ ಪಡಿಸಲು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸುವುದು, ಸಮುದಾಯವನ್ನು ಒಳಗೊಳ್ಳುವುದು, ದೀರ್ಘಾವಧಿಯ ಉಪಕ್ರಮಗಳನ್ನು ಅನುಸರಿಸುವುದು ಯೋಜನೆಯ ಉದ್ದೇಶವಾಗಿದೆ.
ಭಾರತವು ತ್ವರಿತ ನಗರೀಕರಣ, ಹೆಚ್ಚುತ್ತಿರುವ ಕೈಗಾರಿಕೀಕರಣ, ಬದಲಾಗುತ್ತಿರುವ ಭೂ ಸ್ವರೂಪ, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದ ಜಲ ಸಂಪನ್ಮೂಲದ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಈ ಅಭಿಯಾನದಲ್ಲಿ 6 ಪ್ರಮುಖ ಆಯಾಮಗಳು ಇವೆ. ಮೊದಲನೆಯದಾಗಿ ನದಿಗಳು ಮತ್ತು ಕೆರೆ ಕೊಳ್ಳಗಳ ಪುನರುಜ್ಜೀವನ, ಕಲುಷಿತ ನೀರಿನ ಶುದ್ಧೀಕರಣ, ತಂತ್ರಜ್ಞಾನ ಅಧಾರಿತ ನೀರಿನ ನೈರ್ಮಲ್ಯೀಕರಣ, ಜಲ ಸಂರಕ್ಷಣೆ, ಸುಸ್ಥಿರ ಕುಡಿಯುವ ನೀರು ಪೂರೈಕೆ ಮ್ತು ಜಲ ಸಂರಕ್ಷಣೆಯಲ್ಲಿ ಸಮುದಾಯವನ್ನು ಸೇರಿಸಿಕೊಳ್ಳುವುದು.
ಸುಜಲಾಂ ಭಾರತ್ ಯೋಜನೆಯಲ್ಲಿ ನೀತಿ ನಿರೂಪಕರು, ಕ್ಷೇತ್ರಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ನೀರಿನ ಭದ್ರತೆ ಎಂದರೆ ಕೇವಲ ಪರಿಸರ ಅಥವಾ ಆರ್ಥಿಕ ವಿಚಾರ ಮಾತ್ರವಲ್ಲ, ಇದು ಘನತೆ, ಆರೋಗ್ಯ ಮತ್ತು ಸಾಮಾಜಿಕ ಗುಣಮಟ್ಟದ ಪ್ರತೀಕವಾಗಿದೆ. ಸಮುದಾಯವು ಸ್ವಚ್ಛ ನೀರನ್ನು ಪಡೆದಾಗ ಘನತೆ, ಆರೋಗ್ಯ ಮತ್ತು ಸಾಮಾಜಿಕ ಸಮಾನತೆ ಸಿಕ್ಕಿದಂತಾಗುತ್ತದೆ. ವಿಶೇಷವಾಗಿ ಕುಡಿಯುವ ನೀರಿನ ಜವಾಬ್ದಾರಿಯನ್ನು ಕುಟುಂಬದಲ್ಲಿ ಹೊತ್ತುಕೊಳ್ಳುವ ಮಹಿಳೆಯರ ಘನತೆಯನ್ನು ಹೆಚ್ಚಿಸಿದಂತಾಗುತ್ತದೆ.
ಗಮನಿಸಿ; UPI ವಹಿವಾಟಿನಲ್ಲಿ 7 ಬದಲಾವಣೆ
ನೀರಿನ ಪೂರೈಕೆ ಉತ್ತಮವಾಗಿ ರೂಪುಗೊಂಡಾಗ ಜನಜೀವನದ ಗುಣಮಟ್ಟ ವೃದ್ಧಿಸುತ್ತದೆ. ಪೌಷ್ಟಿಕಾಂಶ ಕೂಡ ಹೆಚ್ಚು ದೊರೆಯುತ್ತದೆ. ರೈತರಿಗೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಕೃಷಿ ಕುಟುಂಬಗಳ ಆದಾಯವೂ ಹೆಚ್ಚುತ್ತದೆ. ಮಕ್ಕಳ ಶಿಕ್ಷಣಕ್ಕೆ ಉಪಯೋಗವಾಗುತ್ತದೆ. ಜಲ ರಕ್ಷಣೆಯ ನಿಟ್ಟಿನಲ್ಲಿ ಸಮುದಾಯ ಹೊಂದಿರುವ ಪರಂಪರಾನುಗತ ಉಪಕ್ರಮಗಳನ್ನು, ಪದ್ಧತಿಗಳನ್ನೂ ಕೂಡ ಬಳಸಿಕೊಳ್ಳಲಾಗುವುದು.
ಕಳೆದ ವರ್ಷ ಗುಜರಾತಿನ ಸೂರತ್‌ನಲ್ಲಿ " ಜಲ ಸಂಚಯ್ ಜನ್ ಭಾಗಿದಾರಿ ಉಪಕ್ರಮʼವನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಪ್ರಧಾನಿ ನರೇಂದ್ರ ಮೋದಿಯವರು ಇಂಥ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ಮಹತ್ವವನ್ನು ವಿವರಿಸಿದ್ದರು. ಜಲ ಶಕ್ತಿ ಅಭಿಯಾನ (ಜೆಎಸ್‌ಎ) ಮತ್ತು ಜಲ ಸಂಚಯ್ ಜನ್ ಭಾಗಿದಾರಿ (ಜೆಎಸ್‌ಜೆಬಿ) ಅಡಿಯಲ್ಲಿ ಪ್ರಯತ್ನಗಳು ಮುಂದುವರಿದಿವೆ. ಅಂತರ್ಜಲ ಮಟ್ಟ ಹೆಚ್ಚಿಸಲು ಉಪಕ್ರಮಗಳು ಮುಂದುವರಿದಿವೆ. ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ಗಂಗಾ ನದಿ ಪಾತ್ರದಲ್ಲಿ ನದಿಯ ಪುಶ್ಚೇತನ ಕಾರ್ಯಕ್ರಮ ಗಳನ್ನು ಜಾರಿಗೊಳಿಸಲಾಗಿದೆ. ಜಲ ಜೀವನ್ ಮಿಶನ್ (ಜೆಜೆಎಂ) ಮತ್ತು ಸ್ವಚ್ಛ ಭಾರತ್ ಮಿಶನ್ (ಎಸ್‌ಬಿಎಂ) ಅಡಿಯಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ನದಿಗಳನ್ನು ಪುನಶ್ಚೇತನಗೊಳಿಸುವುದರಿಂದ ಬಂಜರು ಭೂ ಪ್ರದೇಶಗಳಿಗೆ ನೀರಿನ ಪೂರೈಕೆಯೂ ಆಗುತ್ತದೆ.
ಜಲ ಜೀವನ ಅಭಿಯಾನ ಅಡಿಯಲ್ಲಿ 15 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನಳ್ಳಿ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. 2019ರ ಆಗಸ್ಟ್ 15ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. 2028ರ ಒಳಗೆ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ನಳ್ಳಿ ನೀರಿನ ಸಂಪರ್ಕ ಒದಗಿಸುವ ಮಹತ್ತ್ವಾಕಾಂಕ್ಷೆ ಇದೆ. ಪ್ರತಿ ವ್ಯಕ್ತಿಗೆ ದಿನಕ್ಕೆ ಸರಾಸರಿ 55 ಲೀಟರ್ ನೀರು ಒದಗಿಸುವ ಗುರಿ ಇದೆ.
ನೀರಿನ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ
ಕೃತಕ ಬುದ್ಧಿಮತ್ತೆ (ಎಐ) ಅಧಾರಿತ ನೀರಿನ ನಿರ್ವಹಣೆಗೂ ಆದ್ಯತೆ ನೀಡಲಾಗುವುದು. ಡಿಜಿಟಲ್ ತಂತ್ರಜ್ಞಾನ ಬಳಸಿ ನೀರಾವರಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ನೀರಿನ ನಷ್ಟವನ್ನು, ಸೋರಿಕೆಯನ್ನು ತಪ್ಪಿಸಲಾಗುವುದು. ಒಳಚರಂಡಿ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳ ಬಳಕೆಗೆ ನೀಡಲಾಗುವುದು.
ರಾಜ್ಯಗಳಲ್ಲಿ ಮಳೆ ನೀರಿನ ಕೊಯ್ಲಿಗೆ ಆದ್ಯತೆ
ಪ್ರಧಾನ ಮಂತ್ರಿಯವರ ಸಾರಥ್ಯದಲ್ಲಿ ಆರಂಭವಾಗಿರುವ ಜಲ ಶಕ್ತಿ ಅಭಿಯಾನದಲ್ಲಿ ಮೂರು ಪ್ರಮುಖ ವಿಷಯಗಳು ಇವೆ: ಮಳೆ ನೀರಿನ ಕೊಯ್ಲು,ಸಾರ್ವಜನಿಕರ ಭಾಗವಹಿಸುವಿಕೆ ಅವುಗಳ ಲ್ಲೊಂದು. ಸಾರ್ವಜನಿಕ ಜನಜಾಗೃತಿಯನ್ನುಇದು ಒಳಗೊಂಡಿದೆ. ಎರಡನೆಯದಾಗಿ ಮಳೆ ನೀರನ್ನು ಹಿಡಿದಿಟ್ಟುಕೊ ಅಭಿಯಾನ. ಇದನ್ನು 2020ರಲ್ಲಿ ಆರಂಭಿಸಲಾಗಿತ್ತು. ರಾಜ್ಯಗಳಲ್ಲಿ ಮಳೆನೀರಿನ ಕೊಯ್ಲನ್ನು ಇದು ಉತ್ತೇಜಿಸುತ್ತದೆ. ಪ್ರಧಾನಮಂತ್ರಿ ಮೋದಿಯವರು ಜಲ ಸಂರಕ್ಷಣೆಗೆ ಸಂಬಂಧಿಸಿ ನಾಲ್ಕು ಆರ್ (RRRR)ಗಳನ್ನು ಪ್ರತಿಪಾದಿಸಿದ್ದಾರೆ. ಅವುಗಳೇನೆಂದರೆ- ರೆಡ್ಯೂಸ್, ರಿಯೂಸ್, ರಿಚಾರ್ಜ್ ಮತ್ತು ರಿಸೈಕಲ್. (ನೀರಿನ ಮಿತವ್ಯಯ, ಪುನರ್ಬಳಕೆ, ನೀರಿನ ಸಂಗ್ರಹಣೆ ಮತ್ತು ಮರು ಪೂರಣ).