ದೆಹಲಿಯಲ್ಲಿ ಮತ್ತೆ ಸ್ಫೋಟಕ್ಕೆ ನಡೆದಿತ್ತಾ ಸಂಚು? ಜೈಶ್ ಉಗ್ರ ಸೆರೆ, ಪಾಕ್ ISI ನಂಟಿನ ಸುಳಿವು
Delhi-NCR Terrorist Arrest: ಪಾಕಿಸ್ತಾನ ಮೂಲದ ಜೈಶೆ-ಎ-ಮೊಹಮ್ಮದ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಶಂಕಿತ ಕಾರ್ಯಕರ್ತನನ್ನು ದೆಹಲಿಯ ಪೊಲೀಸರು ಬಂಧಿಸಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪಿಯ ಜಾಲಕ್ಕೆ ಪಾಕಿಸ್ತಾನದ ಐಎಸ್‌ಐ ನಂಟು ಪತ್ತೆಯಾಗಿದ್ದು, ದೆಹಲಿ ಪೊಲೀಸರು ವಿಶೇಷ ಘಟಕದ ಮೂಲಕ ತನಿಖೆ ಆರಂಭಿಸಿದ್ದಾರೆ. ವಡೋದರಾದಲ್ಲಿ ಎಕೆ 47 ಸಮೇತ ಸಿಕ್ಕಿಬಿದ್ದ ಶಂಕಿತ ಉಗ್ರನಿಗೂ ಈತನಿಗೂ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ-ಎನ್‌ಸಿಆರ್‌ನಲ್ಲಿ ಜೈಶ್ ಉಗ್ರ ಸೆರೆ -
ನವದೆಹಲಿ, ನ. 28: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಶಂಕಿತ ಕಾರ್ಯಕರ್ತನನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಗುಪ್ತಚರ ಸಂಸ್ಥೆಗಳು ಬಂಧಿಸಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಮತಾಂತರಕ್ಕೆ ಪ್ರೇರೇಪಿಸಿ, ಉಗ್ರ ಕೃತ್ಯಗಳನ್ನು ನಡೆಸಲು ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಈತನನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯು ಸೋಶಿಯಲ್ ಮೀಡಿಯಾದಲ್ಲಿ ‘ಉಮರ್’ ಎಂಬ ಹೆಸರಿನಲ್ಲಿ ಸಕ್ರಿಯನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ ಹಸ್ತಾಂತರಿಸಲಾಗಿದೆ. ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಹಲವು ಯುವಕರ ಜೊತೆ ಸಂಪರ್ಕದಲ್ಲಿದ್ದು ಪ್ರಚೋದನೆ ನೀಡುತ್ತಿದ್ದ ಈತನ ಜಾಲಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ನಂಟು ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ವಾಯುಪಡೆ ನೆಲೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಜೈಶ್ ಉಗ್ರನ ಬಂಧನ; ಎಕೆ-47 ವಶಕ್ಕೆ
ಪಾಕ್ ಹ್ಯಾಂಡ್ಲರ್‌ಗಾಗಿ ಶೋಧ ಕಾರ್ಯ
ಆರೋಪಿ ಸಂಪರ್ಕದಲ್ಲಿದ್ದ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸದ್ಯ ಯಾರನ್ನೂ ಹೆಚ್ಚುವರಿಯಾಗಿ ಬಂಧಿಸಿಲ್ಲ. ಪಾಕಿಸ್ತಾನದಲ್ಲಿರುವ ಈತನ ಹ್ಯಾಂಡ್ಲರ್ ಪತ್ತೆಗೂ ಭದ್ರತಾ ಸಂಸ್ಥೆಗಳು ಶೋಧ ನಡೆಸಿವೆ. ಕಳೆದ ವರ್ಷ ಕೆಂಪುಕೋಟೆ ಸಮೀಪ ನಡೆದ ಸ್ಫೋಟದ ಮಾದರಿಯಲ್ಲೇ ದಾಳಿ ನಡೆಸಲು ಈ ಪಾಕ್ ಬೆಂಬಲಿತ ಉಗ್ರ ಮಾಡ್ಯೂಲ್ ಸಂಚು ರೂಪಿಸಿರಬಹುದು ಎಂಬ ಆತಂಕವನ್ನು ಗುಪ್ತಚರ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ದೆಹಲಿ-ಗುಜರಾತ್ ಜೈಶ್ ನಂಟಿನ ಕುರಿತು ತನಿಖೆ
ಶುಕ್ರವಾರ (ನ. 27) ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ವಡೋದರಾದಲ್ಲಿ ಬಂಧಿಸಿದ ಶಂಕಿತ ಜೈಶ್ ಉಗ್ರನಿಗೂ, ದೆಹಲಿಯಲ್ಲಿ ಸೆರೆಯಾದ ಆರೋಪಿಗೂ ಸಂಪರ್ಕವಿದೆಯೇ ಎಂಬುದನ್ನೂ ದೆಹಲಿ ಪೊಲೀಸ್ ವಿಶೇಷ ಘಟಕ ಪರಿಶೀಲಿಸುತ್ತಿದೆ. ಮೂಲತಃ ಅಸ್ಸಾಂನವನಾದ ಮೊಹಮ್ಮದ್ ಶಹರುಲ್ ಇಸ್ಲಾಂನನ್ನು ಶಂಕಿತನನ್ನು ಗುಜರಾತ್ ಎಟಿಎಸ್ ವಡೋದರಾ ಜಿಲ್ಲೆಯ ಜರೋದ್ ಪ್ರದೇಶದ ಬಸ್ ನಿಲ್ದಾಣದ ಬಳಿ ಬಂಧಿಸಿ, ಒಂದು ಎಕೆ-47 ರೈಫಲ್ ಮತ್ತು 23 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದೆ. ಶಸ್ತ್ರಾಸ್ತ್ರಗಳ ಮೂಲ, ಗುಜರಾತ್ ಜಾಲ ಮತ್ತು ಮದ್ದುಗುಂಡು ಯಾರಿಗೆ ತಲುಪಬೇಕಿತ್ತು ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಒಂದೇ ಜಾಲದ ಭಾಗವಾಗಿ ಇಬ್ಬರೂ ಕೆಲಸ ಮಾಡುತ್ತಿದ್ದರೇ ಎಂಬುದರ ಬಗ್ಗೆ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.