ವಾಯುಪಡೆ ನೆಲೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಜೈಶ್ ಉಗ್ರನ ಬಂಧನ; ಎಕೆ-47 ವಶಕ್ಕೆ
Terrorist Arrest: ಭಾರತೀಯ ವಾಯುಪಡೆ ನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಜೈಶ್-ಎ-ಮೊಹಮ್ಮದ್ ಉಗ್ರನೊಬ್ಬನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಬಂಧಿತನಿಂದ ಎಕೆ-47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಗ್ರಹ ಚಿತ್ರ -
ಗಾಂಧೀನಗರ: ಭಾರತೀಯ ವಾಯುಪಡೆ (IAF) ನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಜೈಶ್-ಎ-ಮೊಹಮ್ಮದ್ (JeM) ಉಗ್ರನೊಬ್ಬನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಬಂಧಿತನಿಂದ ಎಕೆ-47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ನಿವಾಸಿ 22 ವರ್ಷದ ಮೊಹಮ್ಮದ್ ಸಹರುಲ್ ಇಸ್ಲಾಂ ಕಬೀರುದ್ದೀನ್ ಎಂದು ಗುರುತಿಸಲಾಗಿದೆ.
ವಡೋದರಾದ ವಾಘೋಡಿಯಾ ತಾಲೂಕಿನ ಜರೋದ್ ಗ್ರಾಮದ ಬಳಿ ಶಂಕಿತ ಉಗ್ರನೊಬ್ಬ ಶಸ್ತ್ರಾಸ್ತ್ರಗಳೊಂದಿಗೆ ಓಡಾಡುತ್ತಿರುವ ಬಗ್ಗೆ ಗುಜರಾತ್ ಎಟಿಎಸ್ ಅಧಿಕಾರಿಗಳಿಗೆ ಖಚಿತ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು ಆರೋಪಿಯನ್ನು ಸುತ್ತುವರಿದು ಬಂಧಿಸಿದೆ. ಆರೋಪಿಯ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಎಕೆ-47 ಮಾದರಿಯ ಸ್ವಯಂಚಾಲಿತ ರೈಫಲ್, 23 ಜೀವಂತ ಗುಂಡುಗಳು, ಎರಡು ಖಾಲಿ ಮ್ಯಾಗಜೀನ್ಗಳು, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಾವುಟ, ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು ಮತ್ತು ನಗದು ಹಣ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ "ವಡೋದರಾದ ಭಾರತೀಯ ವಾಯುಪಡೆ ನಿಲ್ದಾಣದ ಮುಖ್ಯ ದ್ವಾರದ ಮೇಲೆ ಏಕಾಂಗಿ ದಾಳಿ ನಡೆಸಲು ಆರೋಪಿಗೆ ನಿರ್ದೇಶನ ನೀಡಲಾಗಿತ್ತು. ದಾಳಿಗೂ ಮುನ್ನ ಆರೋಪಿಯು ವಾಯುಪಡೆ ನೆಲೆಯ ಸುತ್ತಮುತ್ತ ಹಲವು ಬಾರಿ ಸಂಚರಿಸಿ ಪರಿಶೀಲನೆ ನಡೆಸಿದ್ದನು. ಆತನ ಮೊಬೈಲ್ ಫೋನ್ನಲ್ಲಿ ವಾಯುಪಡೆ ನೆಲೆಯ ಫೋಟೋಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ" ಎಂದು ತಿಳಿಸಿದ್ದಾರೆ.
ಪಾಕಿಸ್ತಾನಿ ಹ್ಯಾಂಡ್ಲರ್ಗಳ ನೇರ ಸಂಪರ್ಕ
ಪ್ರಾಥಮಿಕ ತನಿಖೆಯ ವೇಳೆ ಆರೋಪಿಯು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಹ್ಯಾಂಡ್ಲರ್ ಮುಫ್ತಿ ರಫೀಕ್ ಅಲಿಯಾಸ್ ಇಬ್ನ್ ಅಬ್ದುಲ್ಲಾ ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈತನನ್ನು ಉಗ್ರ ಸಂಘಟನೆಯತ್ತ ಆಕರ್ಷಿಸಲಾಗಿತ್ತು. ದಾಳಿ ನಡೆಸಲು ಗುಜರಾತ್ಗೆ ತೆರಳಲು, ಹೋಟೆಲ್ನಲ್ಲಿ ತಂಗಲು ಮತ್ತು ಮೊಬೈಲ್ ಫೋನ್ ಖರೀದಿಸಲು ಪಾಕಿಸ್ತಾನದ ಹ್ಯಾಂಡ್ಲರ್ ಆತನ ಬ್ಯಾಂಕ್ ಖಾತೆಗೆ 50 ಸಾವಿರ ರೂ. ಹಣವನ್ನು ವರ್ಗಾಯಿಸಿದ್ದನು. ವಾಯುಪಡೆ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಗಡಿ ದಾಟಿ ಪಾಕಿಸ್ತಾನಕ್ಕೆ ಪರಾರಿಯಾಗಲು ಆರೋಪಿ ಯೋಜನೆ ರೂಪಿಸಿದ್ದನು ಎಂಬ ಆಘಾತಕಾರಿ ಅಂಶ ವಿಚಾರಣೆಯಿಂದ ತಿಳಿದುಬಂದಿದೆ.
ಬಂಧಿತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆತನಿಗೆ ಸ್ಥಳೀಯವಾಗಿ ಯಾರಾದರೂ ಆಶ್ರಯ ನೀಡಿದ್ದಾರೆಯೇ ಹಾಗೂ ಶಸ್ತ್ರಾಸ್ತ್ರ ಪೂರೈಸಿದವರು ಯಾರು ಎಂಬ ಕುರಿತು ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.