ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: NIA ಕಸ್ಟಡಿಯಲ್ಲಿರುವ ತಹಾವ್ವುರ್‌ ರಾಣಾ ಬೇಡಿಕೆ ಇಟ್ಟ ಆ 3 ವಸ್ತುಗಳೇನು ಗೊತ್ತಾ?

Tahawwur Rana: ಮುಂಬೈ ತಾಜ್ ಹೊಟೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್‌ ರಾಣಾನ ವಿಚಾರಣೆ ಸತತ ಎರಡನೇ ದಿನವೂ ಮುಂದುವರಿದಿದೆ. 2008ರಲ್ಲಿ ನಡೆದ ಸಂಘಟಿತ ದಾಳಿಗಳ ಸರಣಿಯ ಸಂಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸತತ ಎರಡನೇ ದಿನವೂ ವಿಚಾರಣೆ ನಡೆಸಿತು. ಇದೀಗ ಈ ಉಗ್ರ ಮೂರು ವಸ್ತುಗಳಿಗೆ ಬೇಡಿಕೆ ಇಟ್ಟಿದ್ದಾನೆ.

NIA ಕಸ್ಟಡಿಯಲ್ಲಿರುವ ತಹಾವ್ವುರ್‌ ರಾಣಾನಿಂದ 3ವಸ್ತುಗಳಿಗೆ ಡಿಮ್ಯಾಂಡ್‌!

ನವದೆಹಲಿ: ಮುಂಬೈ ತಾಜ್ ಹೊಟೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ (terror attack) ಮಾಸ್ಟರ್ ಮೈಂಡ್ ತಹಾವ್ವುರ್‌ ರಾಣಾನ (Tahawwur Rana) ವಿಚಾರಣೆ ಸತತ ಎರಡನೇ ದಿನವೂ ಮುಂದುವರಿದಿದೆ. 2008ರಲ್ಲಿ ನಡೆದ ಸಂಘಟಿತ ದಾಳಿಗಳ ಸರಣಿಯ ಸಂಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency ) ಸತತ ಎರಡನೇ ದಿನವೂ ವಿಚಾರಣೆ ನಡೆಸಿತು. ತಹಾವ್ವುರ್‌ ರಾಣಾನನ್ನು ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯೊಳಗೆ ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದೆ. ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಿದ್ದಾರೆ.

ತಹಾವ್ವುರ್‌ ರಾಣಾನಿಗೆ ಯಾವುದೇ ವಿಶೇಷ ಸೌಲಭ್ಯ ಕಲ್ಪಿಸಲಾಗಿಲ್ಲ. ಆತನ ಕೋರಿಕೆಯ ಮೇರೆಗೆ ಕುರಾನ್ ಪ್ರತಿಯನ್ನು ನೀಡಲಾಗಿದೆ. ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿರುವ ಆತ ತನ್ನ ಸೆಲ್‌ನೊಳಗೆ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾನೆ ಎನ್ನಲಾಗಿದೆ. ರಾಣಾ ಧಾರ್ಮಿಕ ವ್ಯಕ್ತಿ. ನಾವು ಒದಗಿಸಿದ ಕುರಾನ್ ಪ್ರತಿಯನ್ನು ಆತ ಓದುತ್ತಿದ್ದಾನೆ. ತನ್ನ ಸೆಲ್‌ನಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕುರಾನ್ ಜೊತೆಗೆ ರಾಣಾ ಪೆನ್ನು ಮತ್ತು ಕಾಗದವನ್ನು ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ಆದರೂ ತನಗೆ ಹಾನಿ ಮಾಡಿಕೊಳ್ಳಲು ಪೆನ್ನು ಬಳಸದಂತೆ ನೋಡಿಕೊಳ್ಳಲು ಅಧಿಕಾರಿಗಳ ನಿಗಾದಲ್ಲಿ ಇರಿಸಲಾಗಿದೆ. ಅದನ್ನು ಮೀರಿ ಆತ ಬೇರೆ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ (DLSA) ಒದಗಿಸಿರುವ ವಕೀಲರನ್ನು ಪ್ರತಿ ದಿನ ಭೇಟಿ ಮಾಡಲು ರಾಣಾಗೆ ಅನುಮತಿ ನೀಡಲಾಗುತ್ತಿದೆ. ಇದರೊಂದಿಗೆ ಪ್ರತಿ 48 ಗಂಟೆಗಳಿಗೊಮ್ಮೆ ಆತನ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಉಳಿದಂತೆ ಬಂಧಿತ ಇತರ ವ್ಯಕ್ತಿಗಳನ್ನು ನೋಡಿಕೊಳ್ಳುವಂತೆಯೇ ಆತನನ್ನೂ ನಡೆಸಿಕೊಳ್ಳಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ದೃಢಪಡಿಸಿದ್ದಾರೆ.

ಇದನ್ನೂ ಓದಿ: Tahawwur Rana: ಮುಂಬೈ ದಾಳಿಯಲ್ಲಿ ದುಬೈ ವ್ಯಕ್ತಿಯ ಕೈವಾಡ?

ಅಮೆರಿಕದಿಂದ ಭಾರತಕ್ಕೆ ರಾಣಾನನ್ನು ಕರೆದುಕೊಂಡು ಬಂದ ಬಳಿಕ ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಆತನನ್ನು ತನಿಖಾ ಸಂಸ್ಥೆಗೆ 18 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ. ಅನಂತರ ಶುಕ್ರವಾರ ಬೆಳಗ್ಗೆ ಆತನನ್ನು ಎನ್ಐಎ ಪ್ರಧಾನ ಕಚೇರಿಗೆ ಕರೆತರಲಾಗಿದೆ.

ತಹಾವ್ವುರ್‌ ರಾಣಾ ವಿಚಾರಣೆಯನ್ನು ಎರಡನೇ ದಿನವೂ ಮುಂದುವರಿಸಲಾಗಿದೆ. ಸುಮಾರು 16 ವರ್ಷಗಳ ಹಿಂದೆ ದೇಶವನ್ನು ಬೆಚ್ಚಿಬೀಳಿಸಿದ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆತನ ಪಾತ್ರದ ನಿಖರ ಮಾಹಿತಿ ಕಲೆ ಹಾಕಲು ಎನ್ಐಎ ತಂಡ ಪ್ರಯತ್ನಿಸುತ್ತಿದೆ. ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿರುವ ದಾವೂದ್ ಗಿಲಾನಿ ಪ್ರಸ್ತುತ ಅಮೆರಿಕದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತ ಮತ್ತು ರಾಣಾ ನಡುವಿನ ಸಂಭಾಷಣೆ ಕರೆಗಳು ರಾಣಾ ಸಂಚಿನಲ್ಲಿ ಭಾಗಿಯಾಗಿರುವ ಸುಳಿವು ನೀಡಿತ್ತು.

ಮುಂಬೈ ದಾಳಿಗೆ ಮುನ್ನ ರಾಣಾ ಭೇಟಿಯಾದ ಜನರ ಬಗ್ಗೆಯೂ ಆತನಲ್ಲಿ ಪ್ರಶ್ನಿಸಲಾಗುತ್ತಿದೆ. ವಿಶೇಷವಾಗಿ ದುಬೈ ವ್ಯಕ್ತಿಯೊಬ್ಬನಿಗೆ ಮುಂಬೈ ದಾಳಿಯ ಬಗ್ಗೆ ಮೊದಲೇ ತಿಳಿದಿತ್ತು ಎನ್ನಲಾಗುತ್ತಿದೆ. ಅಲ್ಲದೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಐಎಸ್‌ಐ ಮತ್ತು ದಾಳಿಗಳನ್ನು ನಡೆಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಜೊತೆಗಿನ ಸಂಪರ್ಕದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ರಾಣಾ ವಿಚಾರಣೆ ವೇಳೆ ಸಂಪೂರ್ಣ ಮಾಹಿತಿಯನ್ನು ನೀಡಿದರೆ ಮುಂಬೈ ದಾಳಿಯ ಬಗ್ಗೆ ಹೊಸ ವಿವರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.