Tejashwi Yadav: ರಾಜಕೀಯ ಜಂಟಾಟದ ನಡುವೆ ರಸ್ತೆ ಮಧ್ಯೆ ಸ್ಟೆಪ್ ಹಾಕಿದ ತೇಜಸ್ವಿ ಯಾದವ್; ರಾಜಕೀಯದ ಹೃತಿಕ್ ರೋಷನ್ ಎಂದ ಫ್ಯಾನ್ಸ್
Bihar Elections 2025: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರಕ್ಕೆ ತಯಾರಾಗಿವೆ. ಈ ಮಧ್ಯೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

ತೇಜಸ್ವಿ ಯಾದವ್ -

ಪಾಟ್ನಾ: ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ (Bihar Elections 2025) ನಡೆಯಲಿದ್ದು, ಅಖಾಡ ನಿಧಾನಕ್ಕೆ ಬಿಸಿಯೇರುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರದಲ್ಲಿ ನಿರತವಾಗಿವೆ. ಈ ಮಧ್ಯೆ ಬಿಡುವಿಲ್ಲದ ಪ್ರಚಾರದಿಂದ ಕೊಂಚ ಬ್ರೇಕ್ ಪಡೆದ ರಾಷ್ಟ್ರೀಯ ಜನತಾ ದಳ (Rashtriya Janata Dal-RJD)ದ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿದ್ದಾರೆ. ಒಂದಷ್ಟು ಯುವಕರ ಗುಂಪಿನೊಂದಿಗೆ ಸೇರಿ ರೀಲ್ಸ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಇತ್ತೀಚೆಗೆ ಸಾರ್ವಜನಿಕ ಬಳಕೆಗೆ ತೆರೆದುಕೊಂಡ ಪಾಟ್ನಾದಲ್ಲಿರುವ ಮರೀನ್ ಡ್ರೈವ್ ಎಕ್ಸ್‌ಪ್ರೆಸ್ ವೇಯಲ್ಲಿ ತೇಜಸ್ವಿ ಯಾದವ್ ಅವರಿಗೆ ಒಂದಷ್ಟು ಯುವಕರ ಗುಂಪು ಡ್ಯಾನ್ ಸ್ಟೆಪ್ ಹೇಳಿ ಕೊಟ್ಟಿದೆ. ಅವರು ಹೇಳಿದಂತೆ ತೇಜಸ್ವಿ ಯಾದವ್ ಸ್ಟೆಪ್ ಹಾಕಿದ್ದಾರೆ. ಹಿನ್ನೆಲೆಯಲ್ಲಿ ಕೆಲವರು ಹೃತಿಕ್ ರೋಷನ್ ಎಂದು ಕೂಗಿದ್ದಾರೆ. ಸದ್ಯ ಈ ವಿಡಿಯೊ ನೋಡಿ ತೇಜಸ್ವಿ ಅವರ ಅನುಯಾಯಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ರೋಹಿಣಿ ಆಚಾರ್ಯ ಹಂಚಿಕೊಂಡ ವಿಡಿಯೊ ಇಲ್ಲಿದೆ:
दिल तो बच्चा ही है जी ... मस्ती टाइम @ पटना मरीन ड्राइव
— Rohini Acharya (@RohiniAcharya2) September 2, 2025
@iHrithik pic.twitter.com/TxelXmsSPb
ಈ ಸುದ್ದಿಯನ್ನೂ ಓದಿ: Tejashwi Yadav: ಬಿಹಾರ ಸಿಎಂ ಅಭ್ಯರ್ಥಿಯಾಗಿ ಘೋಷಿಸಿಕೊಂಡ ತೇಜಸ್ವಿ ಯಾದವ್!
ವಿಪಕ್ಷ 16 ದಿನಗಳ ಕಾಲ ಹಮ್ಮಿಕೊಂಡಿದ್ದ ʼವೋಟರ್ ಅಧಿಕಾರ ಯಾತ್ರಾʼ ಪೂರ್ಣಗೊಂಡ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ ತೇಜಸ್ವಿ ಯಾದವ್ ಒಂದಷ್ಟು ಹೊತ್ತು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಹೃತಿಕ್ ರೋಷನ್‌ನಂತೆ ಸ್ಟೆಪ್ ಹಾಕಲು ಯತ್ನಿಸಿದ್ದಾರೆ. ತೇಜಸ್ವಿ ಯಾದವ್ ಅವರ ಸಹೋದರಿ ರೋಹಿಣಿ ಆಚಾರ್ಯ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಇದು ನೆಟ್ಟಿಗರ ಗಮನ ಸೆಳೆದಿದೆ. ʼʼಮಸ್ತಿ ಟೈಮ್ʼʼ ಎನ್ನುವ ಕ್ಯಾಪ್ಶನ್ ನೀಡಿ ಈ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೊದಲ್ಲಿ ತೇಜಸ್ವಿ ತಮ್ಮ ಅನುಯಾಯಿಗಳೊಂದಿಗೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ.
ಮೆಚ್ಚುಗೆ ಜತೆ ಟೀಕೆ
ಆರ್‌ಜೆಡಿ ಬೆಂಬಲಿಗರು ವಿಡಿಯೊಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಉಳಿದವರು ಟೀಕಿಸಿದ್ದಾರೆ. "ಚುನಾವಣಾ ಸಮಯದಲ್ಲಿ ಇಂತಹ ವಿಡಿಯೊಗಳಲ್ಲಿ ಕಾಣಿಸಿಕೊಳ್ಳುವುದು ಸೂಕ್ತವಲ್ಲ. ನೀವು ಪ್ರಶಾಂತ್ ಅವರ ಯಾವುದೇ 'ಮೋಜಿನʼ ವಿಡಿಯೊ ನೋಡಿದ್ದೀರಾ? ನಾಯಕನ ಘನತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ʼʼತಮ್ಮ ಭವಿಷ್ಯದ ಕೆಲಸಕ್ಕಾಗಿ ತೇಜಸ್ವಿ ತರಬೇತಿ ಪಡೆಯುತ್ತಿದ್ದಾರೆʼʼ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಒಂದುವೇಳೆ ಪ್ರತಿಯೊಬ್ಬರು ರಸ್ತೆಯಲ್ಲಿ ಕಾರು ನಿಲ್ಲಿಸಿ ಈ ರೀತಿ ರೀಲ್ಸ್ ಮಾಡಿದರೆ ಏನಾಗಬಹುದು ಎಂದು ಊಹಿಸಿ. ಯಾವಾಗಲೂ ಕಾನೂನುಬಾಹಿರ ಕೆಲಸಗಳನ್ನು ಮಾಡಿ ನಮ್ಮ ಹೃದಯ ಮಕ್ಕಳ ರೀತಿ ಎಂದು ಹೇಳುತ್ತಾರೆ. ರಸ್ತೆಯ ಮಧ್ಯದಲ್ಲಿ ರೀಲ್ಸ್ ಮಾಡಲು ಮರೀನ್ ಡ್ರೈವ್ ಇರೋದಾ?ʼʼ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವೋಟರ್ ಅಧಿಕಾರ ಯಾತ್ರಾಕ್ಕೆ ತೆರೆ
ಚುನಾವಣಾ ಆಯೋಗದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ನೇತೃತ್ವದಲ್ಲಿ ವಿಪಕ್ಷ ಬಿಹಾರದಲ್ಲಿ ಹಮ್ಮಿಕೊಂಡಿದ್ದ ವೋಟರ್ ಆಧಿಕಾರ ಯಾತ್ರಾ ಆಗಸ್ಟ್ 17ರಿಂದ ಸೆಪ್ಟೆಂಬರ್ 1 ತನಕ ನಡೆಯಿತು. ಈ ಯಾತ್ರೆ 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರದಲ್ಲಿ 1,300 ಕಿ.ಮೀ. ಹಾದು ಹೋಯಿತು. ಸಸಾರಾಂನಲ್ಲಿ ಆರಂಭವಾದ ಯಾತ್ರೆ ಪಾಟ್ನಾದಲ್ಲಿ ಕೊನೆಗೊಂಡಿತು.