PM Modi: ಜನಾಂಗೀಯ ಹಿಂಸಾಚಾರದ ಬಳಿಕ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ; ಯಾವಾಗ?
Narendra Modi: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಅವರು ಹೊಸ ಬೈರಾಬಿ- ಸೈರಾಂಗ್ ರೈಲ್ವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಐಜ್ವಾಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

-

ಇಂಫಾಲ: ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಸೆಪ್ಟೆಂಬರ್ ಎರಡನೇ ವಾರದಲ್ಲಿ ಹಿಂಸಾಚಾರ ಪೀಡಿತ ಮಣಿಪುರಕ್ಕೆ (Violence hit Manipur) ಭೇಟಿ ನೀಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರು ಮಿಜೋರಾಂನಲ್ಲಿ (Mizoram) ವಿವಿಧ ಅಭಿವೃದ್ಧಿ ಯೋಜನೆಗಳನ್ನು (Development projects) ಉದ್ಘಾಟಿಸಲಿದ್ದಾರೆ. 2023ರಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಅನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ (PM Modi) ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಿಜೋರಾಂ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಅವರು ಹೊಸ ಬೈರಾಬಿ- ಸೈರಾಂಗ್ ರೈಲ್ವೆಯನ್ನು ಉದ್ಘಾಟಿಸಲು ಮೊದಲು ಮಿಜೋರಾಂಗೆ ಭೇಟಿ ನೀಡಲಿದ್ದಾರೆ ಎಂದು ಐಜ್ವಾಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ 51.38 ಕಿಲೋಮೀಟರ್ ಉದ್ದದ ರೈಲು ಮಾರ್ಗವು ಕೇಂದ್ರದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿದ್ದು, ಇದು ಈಶಾನ್ಯ ಪ್ರದೇಶದಾದ್ಯಂತ ಸಂಪರ್ಕ ಮತ್ತು ಆರ್ಥಿಕ ಏಕೀಕರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೊಸ ರೈಲು ಮಾರ್ಗವು ಅಸ್ಸಾಂನ ಸಿಲ್ಚಾರ್ ಪಟ್ಟಣದ ಮೂಲಕ ಐಜ್ವಾಲ್ ಅನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
2023ರ ಮೇಯಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಅನಂತರ ಪ್ರಧಾನಿ ಮಣಿಪುರಕ್ಕೆ ಐಜ್ವಾಲ್‌ನಿಂದ ವಿಮಾನದಲ್ಲಿ ಬರಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿರುವುದಾಗಿ ಮಿಜೋರಾಂ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿಯವರ ಭೇಟಿಯ ಅಂತಿಮ ಪ್ರಯಾಣ ವೇಳಾಪಟ್ಟಿ ಇನ್ನೂ ತಮಗೆ ತಲುಪಿಲ್ಲ ಎಂದು ಅವರು ಹೇಳಿದರು. ಆದರೂ ಇಂಫಾಲ್‌ನ ಅಧಿಕಾರಿಗಳು ಭೇಟಿಯನ್ನು ದೃಢೀಕರಿಸಿಲ್ಲ.
ಪ್ರಧಾನಿ ಅವರ ಭೇಟಿಗೆ ಸಿದ್ಧತೆಗಳನ್ನು ಪರಿಶೀಲಿಸಲು ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ಸೋಮವಾರ ವಿವಿಧ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಭದ್ರತಾ ಕ್ರಮಗಳು, ಸಂಚಾರ ನಿರ್ವಹಣೆ, ಸ್ವಾಗತ ಮತ್ತು ರಸ್ತೆ ಅಲಂಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಇದನ್ನೂ ಓದಿ: Viral Video: ಮಲಯಾಳಂ ಮಾತನಾಡಿ ಗಮನ ಸೆಳೆದ ಪೋಲೆಂಡ್ ಮಹಿಳೆ
ಐಜ್ವಾಲ್‌ನ ಲಮ್ಮೌಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ನೌಕರರು, ರೈತರು ಮತ್ತು ವಿವಿಧ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡುವ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಾಲಾಗಿದೆ.