ಭಯೋತ್ಪಾದನೆಗೆ ಹಣಕಾಸು ನೆರವು: ಕಾಶ್ಮೀರದ 3 ಕಡೆಗಳಲ್ಲಿ ದಾಳಿ, ಡಿಜಿಟಲ್ ಉಪಕರಣ ವಶಕ್ಕೆ
Terror Funding Case: ಜಮ್ಮು ಕಾಶ್ಮೀರದ ಶ್ರೀನಗರ, ಗಂದರ್‌ಬಲ್ ಮತ್ತು ಅನಂತನಾಗ್ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಜಮ್ಮು-ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ ವಿಭಾಗವು ದಾಳಿ ನಡೆಸಿತು. ಅಲ್ಲದೆ ಶ್ರೀನಗರದ ಶಾಲ್ಟೆಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಕರ್ಸಾರ್ ಪ್ರದೇಶದಲ್ಲಿರುವ ರಿಯಾಜ್ ಅಹ್ಮದ್ ಅವರ ನಿವಾಸದಲ್ಲೂ ಪರಿಶೀಲನೆ ನಡೆಸಲಾಯಿತು.
ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಂದ ದಾಳಿ -
ಶ್ರೀನಗ, ಜೂ. 27: ಶನಿವಾರ (ಜೂನ್ 27) ಬೆಳಗಿನ ಜಾವ ಸಂಯೋಜಿತ ಕಾರ್ಯಾಚರಣೆ ನಡೆಸಿದ ಜಮ್ಮು-ಕಾಶ್ಮೀರ (Jammu-Kashmir) ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ ವಿಭಾಗವು ಶ್ರೀನಗರ, ಗಂದರ್‌ಬಲ್ ಮತ್ತು ಅನಂತನಾಗ್ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು. ಈ ವೇಳೆ ಕಾನೂನುಬಾಹಿರ ಚಟುವಟಿಕೆಗಳ ತಡೆ (Unlawful Activities Act) ಕಾಯ್ದೆಗೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿ ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಿಐಕೆ ಅಧಿಕಾರಿಗಳು, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಇತರ ಕಾನೂನುಬಾಹಿರ ಸಂಬಂಧಿತ ಚಟುವಟಿಕೆಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ, ಕಣಿವೆಯಾದ್ಯಂತ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆಗಳನ್ನು ಆರಂಭಿಸಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ ತಂಡವು ಶ್ರೀನಗರದ ಶಾಲ್ಟೆಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಕರ್ಸಾರ್ ಪ್ರದೇಶದಲ್ಲಿರುವ ರಿಯಾಜ್ ಅಹ್ಮದ್ ಅವರ ನಿವಾಸದ ಮೇಲೂ ದಾಳಿ ನಡೆಸಿತು. ರಿಯಾಜ್ ಅಹ್ಮದ್ ಮೂಲತಃ ಶ್ರೀನಗರದ ಮಹಾರಾಜ್ ಗಂಜ್‌ನ ದಲಾಲ್ ಮೊಹಲ್ಲಾ ನಿವಾಸಿಯಾಗಿದ್ದು, ಕಳೆದ 16 ವರ್ಷಗಳಿಂದ ಹೊಕರ್ಸಾರ್‌ನಲ್ಲಿ ವಾಸಿಸುತ್ತಿದ್ದಾರೆ. ದಾಳಿಯ ವೇಳೆ ಸಿಐಕೆ ಅಧಿಕಾರಿಗಳು ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದರು.
ಅದೇ ಸಮಯದಲ್ಲಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನಿಸಾರ್ ಅಹ್ಮದ್ ನೇತೃತ್ವದ ಮತ್ತೊಂದು ಸಿಐಕೆ ತಂಡವು ಗಂಡೇರ್ಬಲ್ ಜಿಲ್ಲೆಯ ಲಾರ್‌ನ ಚೌಂಟ್ವಾಲಿವಾರ್‌ನಲ್ಲಿರುವ ಸೈಯದ್ ಕಲಂದರ್ ಶಾ ಅವರ ನಿವಾಸವನ್ನು ಶೋಧಿಸಿತು. ಮನೆಯನ್ನು ಶೋಧಿಸುವುದರ ಜತೆಗೆ ಬ್ಯಾಂಕ್ ದಾಖಲೆಗಳನ್ನು ಸಹ ಪರಿಶೀಲಿಸಿತು.
ಮೂರನೇ ತಂಡವು ಅನಂತನಾಗ್ ಜಿಲ್ಲೆಯ ವೆರಿನಾಗ್‌ನ ನೌಗಾಂವ್ ಪ್ರದೇಶದಲ್ಲಿರುವ ಗುಲ್ಜಾರ್ ಅಹ್ಮದ್ ರಾಥರ್ ಅವರ ನಿವಾಸದ ಮೇಲೆ ದಾಳಿ ನಡೆಸಿತು. ಅಧಿಕಾರಿಗಳ ಮಾಹಿತಿ ಪ್ರಕಾರ, ರಾಥರ್ 2012ರಿಂದ ಸ್ಥಳೀಯ ಫಾಲಿ ಮಸೀದಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಶೋಧ ಕಾರ್ಯಾಚರಣೆಗಳ ವೇಳೆ ಹಲವು ಡಿಜಿಟಲ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀನಗರದ ಜೆಐಸಿ-ಸಿಐಕೆ (JIC-CIK) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 07/2023ಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆದಿದೆ.