ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bomb threat: ಸಿಎಂ ಡಿ.ಕೆ. ಶಿವಕುಮಾರ್ ನಿವಾಸ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಆಟೋ ಚಾಲಕನ ಫೋನ್‌ನಿಂದ ಕರೆ ಮಾಡಿದ ಆರೋಪಿ ಅರೆಸ್ಟ್

ಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಇರಿಸಿರುವುದಾಗಿ ಅಪರಿಚಿತನೊಬ್ಬ ಬೆದರಿಕೆ ಕರೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕನ ಫೋನ್ ಮೂಲಕ ಪೊಲೀಸರೊಂದಿಗೆ ಮಾತನಾಡಿದ ಅನಾಮಿಕ ವ್ಯಕ್ತಿ ಹುಸಿ ಬೆದರಿಕೆ ಹಾಕಿದ್ದಾನೆ.

ಸಿಎಂ ಡಿ.ಕೆ. ಶಿವಕುಮಾರ್ ನಿವಾಸ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ!

-

Prabhakara R
Prabhakara R Nov 27, 2026 3:07 PM

ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ (Bomb threat) ಹಾಕಿದ ಘಟನೆ ನಡೆದಿದೆ. ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದ ಕಾರ್ತಿಕ್ ಎಂಬಾತ ಆಟೋ ಚಾಲಕನನ್ನು ಸಿಎಂ ನಿವಾಸದ ಮುಂದಿನ ಬ್ಯಾರಿಕೇಡ್ ಬಳಿ ಬರುವಂತೆ ತಿಳಿಸಿದ್ದಾನೆ. ನಿಗದಿತ ಸ್ಥಳಕ್ಕೆ ಬಂದ ಆಟೋ ಚಾಲಕ ಭಗವಂತರಾಯ ಅವರು ಕಾರ್ತಿಕ್‌ಗೆ ಕರೆ ಮಾಡಿ ತಾವು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ವೇಳೆ ಅಲ್ಲಿದ್ದ ಪೊಲೀಸರಿಗೆ ಫೋನ್ ನೀಡುವಂತೆ ಕಾರ್ತಿಕ್ ಹೇಳಿದ್ದು, ಪೊಲೀಸರೊಂದಿಗೆ ಮಾತನಾಡಿದ ಆತ ಸಿಎಂ ಮನೆ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ಸಿಎಂ ಬೆಂಗಾವಲು ವಾಹನ ಸಂಚರಿಸುವಾಗ ಸ್ಫೋಟವಾಗುತ್ತದೆ ಎಂದೂ ಹೇಳಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಸದಾಶಿವನಗರ ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಆರೋಪಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಈ ಹಿಂದೆಯೂ ಹಲವು ಬೆದರಿಕೆ ಕರೆಗಳನ್ನು ಮಾಡಿದ್ದ ಎನ್ನಲಾಗಿದೆ.

ನವೆಂಬರ್ 7ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 'ನಮ್ಮ ಯಾತ್ರಿ' ಆಟೋ ಓಡಿಸುತ್ತಿದ್ದ ಭಗವಂತರಾಯನ್ ಅವರಿಗೆ, ಕಾರ್ತಿಕ್ ಎಂಬ ಹೆಸರಿನ ವ್ಯಕ್ತಿಯಿಂದ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಬುಕ್ಕಿಂಗ್ ಬಂದಿತ್ತು. ಬುಕ್ಕಿಂಗ್ ಮಾಡಿದ ವ್ಯಕ್ತಿ ಸಿಎಂ ನಿವಾಸದ ಸಮೀಪದ ಪಿಕಪ್ ಲೊಕೇಶನ್ ಹಂಚಿಕೊಂಡಿದ್ದ. ಆ ಸ್ಥಳಕ್ಕೆ ತಲುಪಿದ ಚಾಲಕ, ಪ್ರಯಾಣಿಕನಿಗೆ ಕರೆ ಮಾಡಿದಾಗ, ತಾನು ಸಿಎಂ ಮನೆಯಲ್ಲಿದ್ದು, ಹೊರಗಿನ ಬ್ಯಾರಿಕೇಡ್ ಬಳಿ ಇರುವ ಪೊಲೀಸರಿಗೆ ಫೋನ್ ನೀಡುವಂತೆ ಆತ ಸೂಚಿಸಿದ್ದಾನೆ.

ಚಾಲಕ ಭಗವಂತರಾಯನ್ ಅವರು ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮೊಬೈಲ್ ನೀಡಿದಾಗ, ಕರೆ ಕಡಿತಗೊಳಿಸುವ ಮುನ್ನ ಅಪರಿಚಿತ ವ್ಯಕ್ತಿ ಸಿಎಂ ಮನೆ ಮತ್ತು ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಮೊದಲು ಆಟೋವನ್ನು ತಪಾಸಣೆ ನಡೆಸಿ, ನಂತರ ಸಿಎಂ ನಿವಾಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ಕೈಗೊಂಡರು. ಪರಿಶೀಲನೆಯ ಬಳಿಕ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ದೃಢಪಟ್ಟಿದೆ.

ಸದ್ಯ ಆಟೋ ಚಾಲಕ ಭಗವಂತರಾಯನ್ ನೀಡಿದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.