ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಕೇಂದ್ರ ಬಜೆಟ್ 2026–27ರಲ್ಲಿ ರೈತರು, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮೀನುಗಾರಿಕೆ ವಲಯ ಅಭಿವೃದ್ಧಿಗೆ 500 ಅಮೃತ ಸರೋವರಗಳ ಯೋಜನೆ, ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ಕಾರ್ಯಕ್ರಮಗಳು ಹಾಗೂ ಕೃಷಿಗೆ ಬಹುಭಾಷಾ AI ಆಧಾರಿತ ಮಾಹಿತಿ ಉಪಕರಣ ಘೋಷಿಸಲಾಗಿದೆ.

ಮೀನುಗಾರಿಕೆ, ಪಶುಸಂಗೋಪನೆಗೆ ಉತ್ತೇಜನ; ಸಬ್ಸಿಡಿ ಕಡಿತ ಘೋಷಣೆ

2026ರ ಕೇಂದ್ರ ಬಜೆಟ್‌ನಲ್ಲಿ ಕೃಷಿ, ಮಿನುಗಾರಿಕೆ ಆದ್ಯತೆ. -

Profile
Sushmitha Jain Feb 1, 2026 8:25 PM

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಭಾನುವಾರ ಲೋಕಸಭೆಯಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್(Union Budget) ಮಂಡಿಸಿದ್ದು, ರೈತರು, ಪಶುಸಂಗೋಪನೆ ಕ್ಷೇತ್ರ ಹಾಗೂ ಪಶುವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೆಂಬಲ ನೀಡುವ ಯೋಜನೆಗಳನ್ನು ಘೋಷಿಸಿದ್ದಾರೆ. ಜೊತೆಗೆ, ಮಹಿಳೆಯರ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ಬಲಪಡಿಸುವುದಕ್ಕೂ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಿದ್ದಾರೆ.


ತಮ್ಮ 9ನೇ ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ಧಿಗಾಗಿ ದೇಶಾದ್ಯಂತ 500 ಜಲಾಶಯಗಳು ಅಥವಾ ಅಮೃತ ಸರೋವರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ, ಪಶುಸಂಗೋಪನೆ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಹಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಹೌದು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕೃಷಿ ವಲಯವೇ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಈ ಹಿನ್ನೆಲೆ ರೈತರ ಆದಾಯವನ್ನು ಹಂತ ಹಂತವಾಗಿ ಹೆಚ್ಚಿಸುವತ್ತ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್ 2026 ರೈತರಿಗೆ ಮಹತ್ವದ ಉಡುಗೊರೆ ನೀಡಿದ್ದು, ಆದಾಯ ವೃದ್ಧಿಗೆ ನೆರವಾಗುವ ಹಲವು ಯೋಜನೆಗಳನ್ನು ಘೋಷಿಸಿದೆ. ಆದರೆ ಇತ್ತ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿರುವುದು ಗಮನ ಸೆಳೆಯುತ್ತದೆ.

Union Budget: "ಈ ಬಜೆಟ್​ 2047 ರ ವಿಕಸಿತ ಭಾರತಕ್ಕೆ ಅಡಿಪಾಯ"; ವಿತ್ತ ಸಚಿವೆಯನ್ನು ಹೊಗಳಿದ ಮೋದಿ

ತೆಂಗು ಬೆಳೆಯುವ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು, ತೆಂಗಿನಕಾಯಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯ ಮೂಲಕ 10 ಮಿಲಿಯನ್ ತೆಂಗು ಬೆಳೆಗಾರರು ಸೇರಿದಂತೆ ಸುಮಾರು 30 ಮಿಲಿಯನ್ ಜನರಿಗೆ ನೇರ ಪ್ರಯೋಜನ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಹಾಗೇ ಸಬ್ಸಿಡಿ ವೆಚ್ಚವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2026–27ರ ಆರ್ಥಿಕ ವರ್ಷದಲ್ಲಿ ಆಹಾರ, ರಸಗೊಬ್ಬರ ಹಾಗೂ ಇಂಧನ ವಲಯಗಳಿಗೆ ನೀಡಲಾಗುವ ಸಬ್ಸಿಡಿಯನ್ನು ಶೇಕಡಾ 4.47ರಷ್ಟು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಇದರ ಪರಿಣಾಮವಾಗಿ ಒಟ್ಟು ಸಬ್ಸಿಡಿ ವೆಚ್ಚವು 4,10,495 ಕೋಟಿ ರೂಪಾಯಿಗೆ ಸೀಮಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ 2025–26ರ ಸಾಲಿನಲ್ಲಿ ಈ ವೆಚ್ಚ 4,29,735 ಕೋಟಿ ರೂಪಾಯಿಯಾಗಿತ್ತು.

Union Budget 2026: ಅತಿ ಚಿಕ್ಕ ಅವಧಿಯ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್


ಇದಲ್ಲದೆ, ಕರಾವಳಿ ಪ್ರದೇಶಗಳಲ್ಲಿ ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮ ಜಾರಿಗೆ ಬರಲಿದೆ. 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಮಟ್ಟದ ಪ್ರೀಮಿಯಂ ಬ್ರ್ಯಾಂಡ್‌ಗಳಾಗಿ ರೂಪಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇಳುವರಿ ಕಡಿಮೆಯಾಗಿರುವ ಹಳೆಯ ತೋಟಗಳ ನವೀಕರಣ ಹಾಗೂ ಹೆಚ್ಚಿನ ಸಾಂದ್ರತೆಯ ಕೃಷಿಗೆ ಸಹಾಯಧನ ನೀಡಲಾಗುವುದು.


ವಾಲ್‌ನಟ್, ಬಾದಾಮಿ ಮತ್ತು ಪೈನ್ ನಟ್ಸ್‌ಗಳ ಕೃಷಿ ವಿಸ್ತರಣೆಗೆ ಯುವಜನರನ್ನು ಆಕರ್ಷಿಸುವ ಉದ್ದೇಶದಿಂದ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಲು ಒತ್ತು ನೀಡಲಾಗಿದೆ. ರೈತರಿಗೆ ಕೃಷಿ ಮಾಹಿತಿ, ಮಾರುಕಟ್ಟೆ ದರಗಳು ಹಾಗೂ ಹವಾಮಾನ ಮುನ್ಸೂಚನೆಗಳನ್ನು ಅವರದೇ ಭಾಷೆಯಲ್ಲಿ ತಲುಪಿಸುವ ಬಹುಭಾಷಾ AI ಆಧಾರಿತ ಕೃಷಿ ಉಪಕರಣವನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.


ಗ್ರಾಮೀಣ ಮಹಿಳೆಯರ ಆದಾಯ ವೃದ್ಧಿಗಾಗಿ, ಮಹಿಳಾ ನೇತೃತ್ವದ ಉದ್ಯಮಗಳಿಗೆ ನೆರವಾಗುವಂತೆ ಸ್ವಸಹಾಯ ಉದ್ಯಮಿ (SHE) ಮಾರ್ಟ್‌ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನೂ ಬಜೆಟ್ ಒಳಗೊಂಡಿದೆ.