ಗ್ರಾಮೀಣಾಭಿವೃದ್ಧಿಗೆ ವಿಬಿ ಜಿ ರಾಮ್ ಜಿ ಕಾಯಿದೆ ಸಹಕಾರಿ
ಕೇಂದ್ರ ಸರಕಾರ ಜಾರಿಗೊಳಿಸಿರುವ ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಶನ್ (ಗ್ರಾಮೀಣ್) ವಿಬಿ-ಜಿ ರಾಮ್ ಜಿ ಎಂಬ ಹೊಸ ಕಾಯಿದೆಯು ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಿ. ಈ ಯೋಜನೆಯ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸಾಂದರ್ಭಿಕ ಚಿತ್ರ. -
- ಶಾಲಿನಿ, ಬೆಂಗಳೂರು
ಕೇಂದ್ರ ಸರಕಾರ ಜಾರಿಗೊಳಿಸಿರುವ ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಅಜೀವಿಕಾ ಮಿಶನ್ (ಗ್ರಾಮೀಣ್) ವಿಬಿ-ಜಿ ರಾಮ್ ಜಿ ಎಂಬ ಹೊಸ ಕಾಯಿದೆಯು (VB-G RAM G Bill) ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಿದೆ. ಅತ್ಯಂತ ಪಾರದರ್ಶಕತೆ, ಉತ್ತರದಾಯಿತ್ವ, ಉತ್ತಮ ಕಾರ್ಮಿಕ ನೀತಿ, ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶವನ್ನು ಇದು ಒಳಗೊಂಡಿದೆ.
ವಿಬಿ-ಜಿ ರಾಮ್ ಜಿ ಅಡಿಯಲ್ಲಿ 60 ದಿನಗಳ ಕಾಲ ಕೆಲಸಗಳನ್ನು ತಡೆ ಹಿಡಿಯಬಹುದು. ದೇಶದಲ್ಲಿ ಬಿತ್ತನೆ ಮತ್ತು ಕೊಯ್ಲಿನ ಸಂದರ್ಭ ರೈತರಿಗೆ ಕೆಲಸಗಾರರ ಕೊರತೆ ಆಗಬಾರದು ಎಂಬುದೇ ಈ ಸಕಾರಾತ್ಮಕ ಬದಲಾವಣೆಗೆ ಕಾರಣ. ಹಿಂದೆಲ್ಲ ಬಿತ್ತನೆ, ಕೊಯ್ಲಿನ ಸಂದರ್ಭ ನರೇಗಾ ಕೆಲಸಕ್ಕೆ ಕಾರ್ಮಿಕರು ಹೋಗುತ್ತಿದ್ದುದರಿಂದ ಸಣ್ಣ ಪುಟ್ಟ ರೈತರಿಗೆ ಕಾರ್ಮಿಕರೇ ಸಿಗುತ್ತಿರಲಿಲ್ಲ. ಇದರಿಂದ ಅವರಿಗೆ ಭಾರಿ ಸಮಸ್ಯೆಯಾಗುತ್ತಿತ್ತು. ಆದರೆ ಈ ಸಮಸ್ಯೆ ಬಗೆಹರಿಸಲು ಕಾಯಿದೆಯಲ್ಲಿ 60 ದಿನಗಳ ಕಾಲ ಕೆಲಸಗಳನ್ನು ತಡೆಹಿಡಿಯಬಹುದಾದ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಮ್ ರಮೇಶ್ ಅವರಿಗೆ, ವರ್ಷದಲ್ಲಿ ಕೃಷಿ ಬಿತ್ತನೆ ಮತ್ತು ಕೊಯ್ಲಿನ ಸೀಸನ್‌ನಲ್ಲಿ ಮೂರು ತಿಂಗಳು ಎಂಜಿ ನರೇಗಾ ಅಡಿಯಲ್ಲಿ ತಡೆ ಹಿಡಿಯಬೇಕು ಎಂದು ಕೋರಿದ್ದರು.
ಗಾಂಧೀಜಿಯವರ ಆಶಯಕ್ಕೆ ಪೂರಕವಾಗಿ, ಎಂಜಿ ನರೇಗಾ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಎಂದು ಬದಲಿಸಲಾಗಿದೆ. ವಿಕಸಿತವಾಗುತ್ತಿರುವ ಭಾರತದ ಪ್ರಕ್ರಿಯೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯೂ ಸಕ್ರಿಯವಾಗಿ ಇರಬೇಕು ಮತ್ತು ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಹೆಸರನ್ನು ಬದಲಾಯಿಸಲಾಗಿದೆ.
ನರೇಗಾ ಬದಲು ಜಿ ರಾಮ್ ಜಿ ಜಾರಿಗೆ ಖಂಡನೆ, ಬೆಂಗಳೂರಿನಲ್ಲಿ ಬಸವಣ್ಣ ಪಾರ್ಕ್: ಕ್ಯಾಬಿನೆಟ್ ನಿರ್ಣಯಗಳು ಇಲ್ಲಿವೆ
ವಿಬಿ-ಜಿ ರಾಮ್ ಜಿಯಲ್ಲಿ ಏನೆಲ್ಲ ಹೊಸ ಬದಲಾವಣೆ ತರಲಾಗಿದೆ? ಹಳೆಯ ನರೇಗಾದಲ್ಲಿ ಫಲಾನುಭವಿಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತರಿ ಸಿಗುತ್ತಿತ್ತು. ಆದರೆ ವಿಬಿ-ಜಿ ರಾಮ್ ಜಿಯಲ್ಲಿ 125 ದಿನಗಳ ಖಾತರಿ ಉದ್ಯೋಗ ಸಿಗಲಿದೆ. ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲಿದೆ. ನೀರಾವರಿಗೆ ಕೆಲಸಗಳಿಗೆ ಆದ್ಯತೆ, ಗ್ರಾಮೀಣ ರಸ್ತೆ, ಮಾರುಕಟ್ಟೆ, ಪರಿಸರ ರಕ್ಷಣೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ. ರೈತರಿಗೆ ಕೊಯ್ಲಿನ ಸಮಯದಲ್ಲಿ ಕೃಷಿಕಾರ್ಮಿಕರ ಲಭ್ಯತೆ ಹೆಚ್ಚಲಿದೆ. ಕಾರ್ಮಿಕರಿಗೆ ಸಂಬಳದಲ್ಲಿ ಶೇ. 25ರಷ್ಟು ಹೆಚ್ಚಳವಾಗಲಿದೆ. ಡಿಜಿಟಲ್ ಸಂಬಳ ಪಾವತಿ ಆಗುವುದರಿಂದ ಅಕ್ರಮ, ಸೋರಿಕೆ ಸಮಸ್ಯೆ ಇರುವುದಿಲ್ಲ. ಇದರಿಂದ ಗ್ರಾಮೀಣ ಜನರ ಆದಾಯ ನಿಶ್ಚಿತವಾಗಿ ಹಚ್ಚಲಿದೆ. ಗಾಂಧೀಜಿ ಅವರ ಆಶಯಕ್ಕೆ ಇದು ಪೂರಕವಾಗಿದೆ. ರೈತರಿಗೂ, ಕೃಷಿ ಕಾರ್ಮಿಕರು ಇಬ್ಬರಿಗೂ ಅನುಕೂಲಕರ. ಎಂಜಿನರೇಗಾದಲ್ಲಿ ಮಾಡಬೇಕಾದ ಕೆಲಸಗಳ ಹಲವು ಕೆಟಗರಿಗಳು ಮತ್ತು ಸೀಮಿತ ಕಾರ್ಯತಂತ್ರಗಳಿಂದ ವ್ಯವಸ್ಥೆ ಸಂಕೀರ್ಣವಾಗಿತ್ತು. ಈಗ ಆದ್ಯತೆಯ 4 ವಲಯಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.
ಯೋಜನೆಯ ಫಂಡಿಂಗ್ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮೊದಲು ಅನ್ ಸ್ಕಿಲ್ಡ್ ಕಾರ್ಮಿಕರಿಗೆ ಮಾತ್ರ ಕೇಂದ್ರ ಸರಕಾರ 100% ಸಂಬಳ ಕೊಡುತ್ತಿತ್ತು. ವಿಬಿ-ಜಿ ರಾಮ್ ಜಿಯಲ್ಲಿ 60 ಪರ್ಸೆಂಟ್ ಕೇಂದ್ರ ಮತ್ತು 40 ಪರ್ಸೆಂಟ್ ರಾಜ್ಯ ಸರಕಾರಗಳು ಕೊಡಬೇಕು. ಇದು ಒಳ್ಳೆಯ ನಿರ್ಧಾರ. ಇದರಿಂದ ಯೋಜನೆಯ ಪರಿಣಾಮಕಾರಿ ಜಾರಿಯಲ್ಲಿ ರಾಜ್ಯ ಸರಕಾರಗಳಿಗೂ ಜವಾಬ್ದಾರಿ ಹಂಚಿಕೆಯಾಗುತ್ತದೆ. ಅವುಗಳ ವಿತ್ತೀಯ ಶಿಸ್ತು ಸುಧಾರಿಸುತ್ತದೆ. ವಿಕಸಿತ್ ಗ್ರಾಮ ಪಂಚಾಯತ್ ಪ್ಲಾನ್ ಮೂಲಕ ಯೋಜನೆಯ ಪ್ಲಾನಿಂಗ್ ವಿಕೇಂದ್ರೀಕರಣವಾಗಲಿದೆ. ಯೋಜನೆಯ ಉತ್ಪಾದಕತೆ ಹೆಚ್ಚಳಕ್ಕೆ ಇದು ಕಾರಣವಾಗಲಿದೆ. ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವೇ ನೂರು ಪರ್ಸೆಂಟ್ ಫಂಡ್ ನೀಡಲಿದೆ. ಹಾಗೆಯೇ ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಿಗೆ 90:10 ಅನುಪಾತದಲ್ಲಿ ಫಂಡಿಂಗ್ ನಡೆಯಲಿದೆ.
ರಾಜ್ಯ ಸರಕಾರಗಳಿಗೆ ಎಷ್ಟು ಫಂಡ್ ನೀಡಬೇಕು ಎಂಬ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ. ಹೊಸ ಬದಲಾವಣೆಯಿಂದ ಗ್ರಾಮ ಪಂಚಾಯತ್‌ಗಳ ಗ್ರಾಮಸಭೆಯ ಅಧಿಕಾರ ಪ್ರಬಲವಾಗಲಿದೆ. ವಿಕಸಿತ ಗ್ರಾಮ ಪಂಚಾಯತ್ ಪ್ಲಾನ್ ಅನ್ನು ಮುಂಬರುವ ದಿನಗಳಲ್ಲಿ ಕಾಣಬಹುದು.
ಹಳೆಯ ನರೇಗಾ ಯೋಜನೆಯಲ್ಲೂ ಕೇಂದ್ರ ಸರಕಾರ ಶೇ. 75ರಷ್ಟು ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸುತ್ತಿತ್ತು. ಶೇ. 25ರಷ್ಟು ರಾಜ್ಯ ಸರಕಾರಗಳು ನೀಡುತ್ತಿತ್ತು. ಕೇಂದ್ರ ಸರಕಾರ ಅನ್ ಸ್ಕಿಲ್ಡ್ ಕಾರ್ಮಿಕರಿಗೆ ಮಾತ್ರ ಶೇ. 100ರಷ್ಟು ಸಂಬಳ ಕೊಡುತ್ತಿತ್ತು ಎಂಬುದನ್ನು ಗಮನಿಸಬಹುದು. ಚಿದಂಬರಂ ಕೂಡ ಒಂದಷ್ಟು ಹಣ ರಾಜ್ಯಗಳೂ ನೀಡಬೇಕು ಎಂದು ಬಯಸಿದ್ದರು. ಯೋಜನೆಯಲ್ಲಿ ಹಣದ ಸೋರಿಕೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರಕಾರಗಳೂ ಫಂಡಿಂಗ್ ನಲ್ಲಿ ಭಾಗವಹಿಸುವುದು, ಜವಾಬ್ದಾರಿ ವಹಿಸುವುದು ಉತ್ತಮ. ಸ್ಥಳೀಯವಾಗಿ ಅಗತ್ಯ ಇರುವ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಯನ್ನು ಸಮರ್ಥವಾಗಿ ಬಳಸಬಹುದು. ರಸ್ತೆಗಳು, ಗೋದಾಮುಗಳು, ಮಾರುಕಟ್ಟೆಗಳ ಸೌಕರ್ಯಗಳು ಅಭಿವೃದ್ಧಿಯಾದರೆ ರೈತರ ಆದಾಯವೂ ಹೆಚ್ಚುತ್ತದೆ. ವಿಕಸಿತ್ ಗ್ರಾಮ ಪಂಚಾಯತ್ ಪ್ಲಾನ್ ಎಂಬ ಪರಿಕಲ್ಪನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಕೆಲಸಗಳು ನಡೆಯಲಿವೆ. ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತವಾಗಲಿದೆ. ಪಿಎಂ ಗತಿ ಶಕ್ತೊ ರಾಷ್ಟ್ರೀಯ ಯೋಜನೆಗೂ ಲಿಂಕ್ ಆಗಲಿದೆ. ಹೀಗಾಗಿ ಇದು ಹೆಚ್ಚು ಉತ್ಪಾದಕತೆಯನ್ನು ತಾನಾಗಿಯೇ ಗಳಿಸಿಕೊಳ್ಳಲಿದೆ.
ಬಡತನದ ಪ್ರಮಾಣದಲ್ಲಿ ಕುಸಿತ
ಗ್ರಾಮೀಣ ಭಾಗದ ಬಡತನದ ಪ್ರಮಾಣ 2011-12ರಲ್ಲಿ ಶೇ. 25.7ರಷ್ಟು ಇದ್ದರೆ 2023-24ರ ವೇಳೆಗೆ ಶೇ. 4.86ಕ್ಕೆ ಇಳಿದಿದೆ. ಆದ್ದರಿಂದ ಅಭಿವೃದ್ಧಿ ಆಧಾರಿತ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ. ಜಾಬ್ ಕಾರ್ಡ್‌ಗಳ ವ್ಯಾಲಿಡಿಟಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲಾಗಿದೆ. ಇದೂ ಒಳ್ಳೆಯದೇ. ಏಕೆಂದರೆ ಮೃತಪಟ್ಟಿರುವ ಅಥವಾ ಗೈರು ಹಾಜರಾಗಿರುವ ಕಾರ್ಮಿಕರ ಜಾಬ್ ಕಾರ್ಡ್‌ಗಳನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳದಂತೆ ಇದು ತಡೆಯುತ್ತದೆ.
ಬ್ಯಾಂಕ್ ಖಾತೆಗೆ ನೇರವಾಗಿ ಹಣ
ಗ್ರಾಮೀಣ ಭಾಗದಲ್ಲಿ ಜನರಿಗೆ ಖಾತರಿಯ ಉದ್ಯೋಗ, ವೇತನದ ಜತೆಗೆ ಉತ್ಪಾದಕ ಆಸ್ತಿಗಳ ಸೃಷ್ಟಿಯಾಗುವುದು ಎಂದರೆ ಆರ್ಥಿಕ ಪ್ರಗತಿಗೂ ಕಾರಣವಾಗಲಿದೆ. ನೀರಾವರಿಗೆ ಆದ್ಯತೆ ನೀಡುವುದು ಕೂಡ ಹಲವು ಆಯಾಮಗಳಲ್ಲಿ ಲಾಭದಾಯಕ. ಅಂತರ್ಜಲದ ಮಟ್ಟ ಸುಧಾರಿಸಲಿದೆ. ಸ್ಥಳೀಯವಾಗಿ ಜೀವನೋಪಾಯಕ್ಕೆ ಕೆಲಸ ಸಿಕ್ಕಿದರೆ ನಗರಗಳಿಗೆ, ಪಟ್ಟಣಗಳಿಗೆ ಹಳ್ಳಿಗರ ವಲಸೆಯೂ ಕಡಿಮೆಯಾಗುತ್ತದೆ. ಈ ಹಿಂದೆ ಕೆಲಸಗಾರರಿಗೆ ಸಕಾಲದಲ್ಲಿ ವೇತನ ಬಟವಾಡೆ ಆಯಿತೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಅನುಕೂಲ ಇದ್ದಿರಲಿಲ್ಲ. ಕೇವಲ 76 ಲಕ್ಷ ಕೆಲಸಗಾರರಿಗೆ ಮಾತ್ರ ಆಧಾರ್ ಸೀಡಿಂಗ್ ಮೂಲಕ ದೃಢೀಕರಣವಾಗುತ್ತಿತ್ತು. ಇದು ಸೋರಿಕೆಗೆ ಕಾರಣವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನರೇಗಾದ ನಕಲಿ ಫಲಾನುಭವಿಗಳನ್ನು ನಿರ್ಮೂಲನೆಗೊಳಿಸಲಾಗಿದೆ. ಹೀಗಿದ್ದರೂ ಈಗ ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಕೆಲಸಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ.
ವಿಬಿ ಜಿ ರಾಮ್ ಜಿ: ಭಾರತದ ಗ್ರಾಮಾಭಿವೃದ್ಧಿಯ ಬೆನ್ನೆಲುಬು
ನಿಸ್ಸಂದೇಹವಾಗಿ ಇವತ್ತಿನ ಭಾರತ ಇಪ್ಪತ್ತು ವರ್ಷಗಳ ಹಿಂದಿನದ್ದಲ್ಲ. ಎಂಜಿನರೇಗಾ ಒಂದು ಸೇಫ್ಟಿ ವಾಲ್ವ್ ಆಗಿತ್ತು. ಖಾಸಗಿ ಉದ್ಯೋಗಗಳು ಸಿಗದಿದ್ದಾಗ ಖಾತರಿಯ ವೇತನ ಇರುವ ಕೆಲಸದ ವ್ಯವಸ್ಥೆ ಕಲ್ಪಿಸುವುದು ಉದ್ದೇಶವಾಗಿತ್ತು. 2005ರಲ್ಲಿ ಬ್ಯಾಂಕ್ ಖಾತೆಗಳು ಕಡಿಮೆ ಇತ್ತು. ಡಿಜಿಟಲ್ ಟ್ರಾನ್ಸ್ ಫರ್ ಕಲ್ಪನೆಯಲ್ಲಿತ್ತು. ಆದರೆ ಈಗ ಬ್ಯಾಂಕ್ ಖಾತೆ ಇಲ್ಲದ ಮನೆ ಇರಲಿಕ್ಕಿಲ್ಲ. 2029ರ ತನಕ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸುವ ಪಡಿತರ ವ್ಯವಸ್ಥೆ ಇದೆ. 45 ಕೋಟಿ ಜನರಿಗೆ ನೇರ ನಗದು ವಿತರಣೆ ಅನುಕೂಲ ಇದೆ. ಈಗ ಗ್ರಾಮೀಣ ಭಾರತದಲ್ಲಿ ಕೇವಲ ಬಡತನ ನಿವಾರಣೆಯ ರಿಲೀಫ್ ಮಾತ್ರವಲ್ಲದೆ, ಉತ್ಪಾದಕತೆ, ಆಸ್ತಿ ಸೃಷ್ಟಿ ಮತ್ತು ಕೃಷಿ ಕ್ಷೇತ್ರದ ವಾಸ್ತವ ಸ್ಥಿತಿಗತಿ-ಅಗತ್ಯಗಳಿಗೆ ಹೊಂದಿಕೆಯಾಗುವ ಯೋಜನೆ ಬೇಕಿದೆ. ಆದ್ದರಿಂದ ಬದಲಾವಣೆಯ ಅಗತ್ಯವಿತ್ತು.