ನೌಕಾಪಡೆಯ 48ನೇ ಉಪ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ ಅಧಿಕಾರ ಸ್ವೀಕಾರ
Vice Admiral Ajay Kochhar: ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ ಭಾರತೀಯ ನೌಕಾಪಡೆಯ 48ನೇ ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನಲ್ಲಿ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ (ಸಂಗ್ರಹ ಚಿತ್ರ) -
ನವದೆಹಲಿ, ಮೇ 30: ಪಿವಿಎಸ್‌ಎಂ, ಎವಿಎಸ್‌ಎಂ, ಎನ್‌ಎಂ ಪುರಸ್ಕೃತ ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ (Vice Admiral Ajay Kochhar) ಭಾರತೀಯ ನೌಕಾಪಡೆಯ (Indian Navy) 48ನೇ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ, ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial) ಪುಷ್ಪಗುಚ್ಛ ಇಡುವ ಮೂಲಕ ದೇಶದ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.
ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಅಜಯ್ ಕೊಚ್ಚರ್ 1988ರ ಜುಲೈ 1ರಂದು ಭಾರತೀಯ ನೌಕಾಪಡೆಗೆ ನಿಯೋಜಿತರಾದರು. ಗನ್ನರಿ ಮತ್ತು ಕ್ಷಿಪಣಿ ವ್ಯವಸ್ಥೆಗಳ ತಜ್ಞರಾಗಿರುವ ಅವರು, 37 ವರ್ಷಗಳಿಗಿಂತಲೂ ಹೆಚ್ಚು ಅವಧಿಯ ವಿಶಿಷ್ಟ ನೌಕಾಪಡೆ ಸೇವೆಯಲ್ಲಿ ವಿವಿಧ ಕಮಾಂಡ್, ಕಾರ್ಯಾಚರಣಾ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಇಲ್ಲಿದೆ ಪೋಸ್ಟ್:
Vice Admiral Ajay Kochhar, PVSM, AVSM, NM assumed charge as the 48th Vice Chief of the Naval Staff #VCNS on #29May 2026.
— SpokespersonNavy (@indiannavy) May 29, 2026
He paid homage to the bravehearts by laying a wreath at the National War Memorial, New Delhi.
Commissioned into the #IndianNavy on 01 July 1988, the Flag… pic.twitter.com/yeedSP1Mqx
ಅವರು ಭಾರತೀಯ ನೌಕಾಪಡೆಯ ಐಎನ್ಎಸ್ ನಾಶಕ್, ಐಎನ್ಎಸ್ ವಿಭೂತಿ ಮತ್ತು ಐಎನ್ಎಸ್ ಕಿರ್ಪಾನ್ ಹಡಗುಗಳಿಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಐಎನ್ಎಸ್ ಫ್ರಿಗೇಟ್ ತ್ರಿಕಾಂಡ್‌ನ ಮೊದಲ ಕಮಾಂಡಿಂಗ್ ಅಧಿಕಾರಿ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಮಾನವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಮಾದಿತ್ಯಗೂ ಕಮಾಂಡ್ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ, ಈ ವಿಮಾನವಾಹಕ ನೌಕೆಯ ವಾಯುಪಡೆಯ (Air Wing) ಏಕೀಕರಣ ಮತ್ತು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಗಳಲ್ಲಿದೆ ವಿಭಿನ್ನ ಸೆಲ್ಯೂಟ್
ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜು, ಗೋವಾದ ನೇವಲ್ ವಾರ್ ಕಾಲೇಜು ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಿಂದ ಪದವೀಧರರಾದ ಅವರು, ನೌಕಾಪಡೆ ಪ್ರಧಾನ ಕಚೇರಿಯಲ್ಲಿ ಪ್ರಮುಖ ಕಾರ್ಯತಂತ್ರ ಮತ್ತು ನೀತಿ ರೂಪಿಸುವ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ನೌಕಾ ಯೋಜನೆಗಳಲ್ಲಿ ಜಂಟಿ ನಿರ್ದೇಶಕರಾಗಿ, ಸಿಬ್ಬಂದಿ ಆವಶ್ಯಕತೆಗಳ ನಿರ್ದೇಶಕ ಮತ್ತು ಡಿಎಸ್‌ಸಿಟಿಯ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಪಶ್ಚಿಮ ನೌಕಾ ಕಮಾಂಡ್‌ನ ಮುಖ್ಯಸ್ಥರಾಗಿ 2024ರ ಮೇ 25ರಂದು ಅಧಿಕಾರ ವಹಿಸಿಕೊಂಡಿದ್ದರು. ಅಸಾಧಾರಣ ನಾಯಕತ್ವ ಮತ್ತು ಅತ್ಯಂತ ಉನ್ನತ ಮಟ್ಟದ ಪ್ರಶಂಸನೀಯ ಸೇವೆಗಾಗಿ ಅವರಿಗೆ 2022ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು 2026ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಯಿತು.
ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನಲ್ಲಿ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು.