ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾದ ಸುವೇಂದು ಅಧಿಕಾರಿ; ಪ್ರಮಾಣ ವಚನಕ್ಕೆ ಕ್ಷಣಗಣನೆ
West Bengal CM Oath Ceremony: ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಗೆಲುವನ್ನು ಸಾಧಿಸಿರುವ ಬಿಜೆಪಿ, ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿಯನ್ನು ಆಯ್ಕೆ ಮಾಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯಲಿದೆ.
ಸಂಗ್ರಹ ಚಿತ್ರ -
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಐತಿಹಾಸಿಕ ಗೆಲುವನ್ನು ಸಾಧಿಸಿರುವ ಬಿಜೆಪಿ, ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿಯನ್ನು (Suvendu Adhikari) ಆಯ್ಕೆ ಮಾಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಈ ಉನ್ನತ ಮಟ್ಟದ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಎನ್‌ಡಿಎಯ ಹಲವಾರು ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಬ್ರಿಗೇಡ್ ಪೆರೇಡ್ ಮೈದಾನಕ್ಕೆ ಆಗಮಿಸಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ರಾಜನಾಥ್ ಸಿಂಗ್ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ವಾರ್ಷಿಕೋತ್ಸವದ ದಿನದಂದೇ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.
ನಿನ್ನೆ ಸಿಎಂ ಘೋಷಣೆ ಬಳಿಕ ಮಾತನಾಡಿದ್ದ ಅಮಿತ್ ಶಾ, "ಪಶ್ಚಿಮ ಬಂಗಾಳ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ, ಸುವೇಂದು ಅಧಿಕಾರಿ ಅವರ ಹೆಸರನ್ನು ನಾನು ಘೋಷಿಸುತ್ತೇನೆ" ಎಂದು ಹೇಳಿದರು. “ನಾನು ಸುಬೇಂದು ಅವರನ್ನು ಬಹುಕಾಲದಿಂದ ತಿಳಿದಿದ್ದೇನೆ. ಅವರು ಹೋರಾಟಗಾರರು. ಆಡಳಿತದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಟಿಎಂಸಿಯನ್ನು ಪ್ರತಿಯೊಂದು ಹಂತದಲ್ಲೂ ಎದುರಿಸಿದ್ದಾರೆ. ನಮ್ಮ ತಂಡದೊಂದಿಗೆ ಅವರು ಬಂಗಾಳದಲ್ಲಿ ಉತ್ತಮ ಆಡಳಿತ ನೀಡುವರು ಎಂಬ ವಿಶ್ವಾಸ ನನಗಿದೆ. ಅವರು ನಡೆಸಿದ ಹೋರಾಟ ಈಗ ಫಲ ನೀಡಿದೆ. 321ಕ್ಕೂ ಹೆಚ್ಚು ಕಾರ್ಯಕರ್ತರ ತ್ಯಾಗ ಇಂದು ಸಾರ್ಥಕವಾಗಿದೆ ಎಂದು ಅಮಿತ್ ಶಾ ಹೇಳಿದರು. ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ, ಕೇಂದ್ರ ವೀಕ್ಷಕರಾಗಿ ನೇಮಕಗೊಂಡಿದ್ದರು.
ನಂದಿಗ್ರಾಮದಿಂದ ನಬನ್ನದವರೆಗೆ: ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಲು ಕಾರಣವಾದ ಪ್ರಮುಖ ಹಂತಗಳು
ಸಿಎಂ ಆಗಿ ಆಯ್ಕೆಯಾದ ಬಳಿಕ ಅಧಿಕಾರಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಆರ್ ಎನ್ ರವಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲರು ಇಂದು ಕೋಲ್ಕತ್ತಾದಲ್ಲಿ ಬ್ರಿಗೇಡ್ ಆಟದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದರು.