ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ; ಬಿಜೆಪಿಗೆ ಐತಿಹಾಸಿಕ ಗೆಲುವಿನ ನಿರೀಕ್ಷೆ
ವಿಧಾನ ಸಭಾ ಚುನಾವಣಾ ಫಲಿತಾಂಶಕ್ಕಾಗಿ ಪಶ್ಚಿಮ ಬಂಗಾಳವು ಕಾತರದಿಂದ ಕಾಯುತ್ತಿದೆ. ಒಂದೆಡೆ ತೃಣಮೂಲ ಕಾಂಗ್ರೆಸ್ ಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆಯಾಗಿದ್ದರೆ, ಇನ್ನೊಂದೆಡೆ ಬಿಜೆಪಿಗೆ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದಾಗಿ ಹೆಚ್ಚಿನ ಮತದಾರರಿಗೆ ಮತದಾನ ಮಾಡಲಾಗದೇ ಇರುವುದು ಟಿಎಂಸಿಗೆ ಆತಂಕ ಉಂಟು ಮಾಡಿದ್ದರೆ, ಭಾರಿ ಪ್ರಮಾಣದಲ್ಲಿ ಮತದಾನವಾಗಿರುವುದು ಬಿಜೆಪಿಗೆ ಗೆಲುವಿನ ಭರವಸೆಯನ್ನು ಕೊಟ್ಟಿದೆ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ದೇಶವೇ ಈಗ ಪಶ್ಚಿಮ ಬಂಗಾಳದತ್ತ (west bengal) ದೃಷ್ಟಿ ನೆಟ್ಟಿದೆ. ಕಾರಣ 2026ರ ವಿಧಾನ ಸಭಾ ಚುನಾವಣಾ (West Bengal Assembly election) ಫಲಿತಾಂಶ (election result). ತೃಣಮೂಲ ಕಾಂಗ್ರೆಸ್ (Trinamool Congress) ನ ಭದ್ರಕೋಟೆಯನ್ನು ಭೇದಿಸಲು ಬಿಜೆಪಿಗೆ (BJP) ಸಾಧ್ಯವಾಗುವುದೋ ಇಲ್ಲವೋ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ಸೋಮವಾರ ನಡೆಯುವ ಮತ ಎಣಿಕೆಗೆ ಕೇವಲ ಟಿಎಂಸಿ ಮತ್ತು ಬಿಜೆಪಿಗೆ ಮಾತ್ರವಲ್ಲ ದೇಶದ ಎಲ್ಲಾ ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಇಲ್ಲಿ ಒಂದೆಡೆ ತೃಣಮೂಲ ಕಾಂಗ್ರೆಸ್ ಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆಯಲ್ಲಿದ್ದರೆ ಇನ್ನೊಂದೆಡೆ ಬಿಜೆಪಿಗೆ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ಹಲವು ತಿಂಗಳಿನಿಂದ ನಡೆದ ಚುನಾವಣಾ ಕಾರ್ಯಗಳು ಈಗ ಅಂತಿಮಗೊಳ್ಳುವ ನಿರೀಕ್ಷೆಯಲ್ಲಿದೆ. ಮತದಾನಕ್ಕೂ ಮೊದಲೇ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದಾಗಿ ಈ ಬಾರಿ ಹೆಚ್ಚಿನ ಮತದಾರರಿಗೆ ಮತದಾನ ಮಾಡಲಾಗದೇ ಇರುವುದು ಟಿಎಂಸಿಗೆ ಫಲಿತಾಂಶದ ಬಗ್ಗೆ ಆತಂಕ ಉಂಟು ಮಾಡಿದ್ದರೆ, ಭಾರಿ ಪ್ರಮಾಣದಲ್ಲಿ ಮತದಾನವಾಗಿರುವುದು ಬಿಜೆಪಿಗೆ ಗೆಲುವಿನ ಭರವಸೆಯನ್ನು ಕೊಟ್ಟಿದೆ.
ಪಂಚ ರಾಜ್ಯಗಳ ಆಡಳಿತ ಯಾರ ಕೈಗೆ? ನಾಳೆ ಭವಿಷ್ಯ ನಿರ್ಧಾರ
ಸೋಮವಾರ ಬೆಳಗ್ಗೆ 8 ಗಂಟೆಗೆ ಇವಿಎಂಗಳು ತೆರೆಯುತ್ತಿದ್ದಂತೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಉತ್ಸಾಹದಿಂದ ಇದನ್ನು ವೀಕ್ಷಿಸಲಿವೆ. 2021ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಮತ್ತೆ ರಾಜ್ಯದಲ್ಲಿ ನೆಲೆಯೂರಲು ಸಾಧ್ಯವಾಗಬಹುದೇ ಎನ್ನುವ ಕುತೂಹಲ ಅವರದ್ದಾಗಿದೆ.
294 ವಿಧಾನ ಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ,ಮತ ಎಣಿಕೆ ಕಾರ್ಯ ಭಾರಿ ಭದ್ರತೆಯೊಂದಿಗೆ 77 ಕೇಂದ್ರಗಳಲ್ಲಿ ಸೋಮವಾರ ನಡೆಯಲಿದೆ. ಇದಾದ ಮೇಲೆ ಅಂತಿಮ ಫಲಿತಾಂಶ ಹೊರಬೀಳಲಿದೆ. ಚುನಾವಣಾ ಅಪರಾಧಗಳ ಕಾರಣದಿಂದ ದಕ್ಷಿಣ 24 ಪರಗಣ ಜಿಲ್ಲೆಯ ಸಂಪೂರ್ಣ ಫಾಲ್ಟಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗವು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಮೇ 21ರಂದು ಮತದಾನ ನಡೆದು ಮೇ 24ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಎರಡು ಹಂತದಲ್ಲಿ ನಡೆದಿರುವ ಬಂಗಾಳದ ಚುನಾವಣೆಯಲ್ಲಿ ಈ ಬಾರಿ ಶೇ. 92.47ರಷ್ಟು ಅಂದರೆ ಭಾರತ ಸ್ವಾತಂತ್ರ್ಯಗೊಂಡ ಮೇಲೆ ಮೊದಲ ಬಾರಿಗೆ ಅತ್ಯಧಿಕ ಮತದಾನವಾಗಿದೆ. ಚುನಾವಣಾ ಅಪರಾಧ ದೂರುಗಳು ಬಂದ ಹಿನ್ನೆಲೆಯಲ್ಲಿ ದಕ್ಷಿಣ 24 ಪರಗಣದ 15 ಮತಗಟ್ಟೆಗಳಲ್ಲಿ ಶನಿವಾರ ಮರು ಮತದಾನ ನಡೆದಿದ್ದು, ಶೇ. 87 ರಷ್ಟು ಮತದಾನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆ ವೇಳೆ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸುಮಾರು 2.5 ಲಕ್ಷಕ್ಕೂ ಹೆಚ್ಚು ಕೇಂದ್ರ ಅರೆಸೈನಿಕ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಪಡೆ ಇದರಲ್ಲಿ ಭಾಗಿಯಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತ್ಯಂತ ಕನಿಷ್ಠ ಚುನಾವಣಾ ಅಪರಾಧಗಳು ದಾಖಲಾಗಿವೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಳಿಕ ಸುಮಾರು 9 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಮತ ಎಣಿಕೆ ಕಾರ್ಯವನ್ನು ಶಾಂತಿಯುತ, ಪಾರದರ್ಶಕ ಮತ್ತು ಕ್ರಮಬದ್ಧ ರೀತಿಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಕೋಲ್ಕತ್ತಾದ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯಲಾಗಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದು, ಇದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಎಲ್ಲಾ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು 24/7 ಭದ್ರತೆ ಮತ್ತು ಸಿಸಿಟಿವಿ ಮೇಲ್ವಿಚಾರಣೆಯೊಂದಿಗೆ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದೆ.
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ನಾಳೆ ಘೋಷಣೆ: ಫಾಲ್ಟಾ ಕ್ಷೇತ್ರಕ್ಕಿಲ್ಲ ನಾಯಕನ ಆಯ್ಕೆ
ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಪ್ರೋಟೋಕಾಲ್ ಪ್ರಕಾರ ನಿಗಾ ಇರಿಸಬಹುದು. ಆದರೆ ಯಾವುದೇ ರೀತಿಯಲ್ಲಿ ಮತ ಪೆಟ್ಟಿಗೆ ತೆರೆದು ತಿರುಚಲು ಅವಕಾಶವಿಲ್ಲ ಎಂದು ಮತ್ತೊಬ್ಬ ಚುನಾವಣಾ ಸಮಿತಿ ಅಧಿಕಾರಿ ತಿಳಿಸಿದ್ದಾರೆ.