ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಧಾನಸಭಾ ಚುನಾವಣೆಗೆ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಮಹತ್ವದ ಬೆಳವಣಿಗೆ; ರಾಜ್ಯಪಾಲ ಆನಂದ್‌ ಬೋಸ್‌ ರಾಜೀನಾಮೆ

CV Ananda Bose: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯ ಕಾರಣ ಬಹಿರಂಗಗೊಂಡಿಲ್ಲ.

ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ್‌ ಬೋಸ್‌ ರಾಜೀನಾಮೆ

ಸಿ.ವಿ. ಆನಂದ್‌ ಬೋಸ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Mar 5, 2026 7:52 PM

ಕೋಲ್ಕತ್ತಾ, ಮಾ. 5: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ (West Bengal Assembly Elections 2026) ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಾರ್ಚ್‌ 5ರಂದು ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ (CV Ananda Bose) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ, ಟಿ.ಎಂ.ಸಿ. ನಾಯಕಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಮುಸುಕಿನ ಗುದ್ದಾಟದ ಮೂಲಕವೇ ಆನಂದ್‌ ಬೋಸ್‌ ದೇಶದ ಗಮನ ಸೆಳೆದಿದ್ದರು. ಸದ್ಯ ಬೋಸ್‌ ದೆಹಲಿಯಲ್ಲಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಆನಂದ್‌ ಬೋಸ್‌ ರಾಜೀನಾಮೆ ನೀಡಿದ್ದು ಏಕೆ ಎನ್ನುವುದು ಗೊತ್ತಾಗಿಲ್ಲ. ತೆರವಾಗಿರುವ ಬೋಸ್‌ ಸ್ಥಾನಕ್ಕೆ ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌. ರವಿ ಬರಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆರ್‌.ಎನ್‌. ರವಿ ಕೂಡ ಡಿ.ಎಂ.ಕೆ. ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು. ವಿಶೇಷ ಎಂದರೆ ತಮಿಳುನಾಡಿನಲ್ಲೂ ಸದ್ಯದಲ್ಲೇ ಚುನಾವಣೆ ನಡೆಯಲಿದೆ.

ಮಮತಾ ಬ್ಯಾನರ್ಜಿ ಎಕ್ಸ್‌ ಪೋಸ್ಟ್‌:



ಮಮತಾ ಬ್ಯಾನರ್ಜಿ ಹೇಳಿದ್ದೇನು?

ಬೋಸ್‌ ಅವರ ರಾಜೀನಾಮೆ ಅನಿರೀಕ್ಷಿತವಾಗಿತ್ತು ಎಂದು ಮಮತಾ ಬ್ಯಾನರ್ಜಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ʼʼಬೋಸ್‌ ಅವರ ರಾಜೀನಾಮೆಗೆ ಕಾರಣವೇನು ಎನ್ನುವುದು ಇದುವರೆಗೆ ನನಗೆ ತಿಳಿದಿಲ್ಲ. ಆದಾಗ್ಯೂ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ಕೆಲವು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಅವರು ಕೇಂದ್ರ ಕಡೆಯಿಂದ ಒತ್ತಡಕ್ಕೆ ಒಳಗಾಗಿದ್ದರೆ ಅಚ್ಚರಿ ಏನಿಲ್ಲ" ಎಂದು ಬರೆದುಕೊಂಡಿದ್ದಾರೆ.

"ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಆರ್.ಎನ್. ರವಿ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಈ ವಿಷಯದಲ್ಲಿ ಅವರು ಶಿಷ್ಟಾಚಾರದಂತೆ ನನ್ನೊಂದಿಗೆ ಸಮಾಲೋಚನೆ ನಡೆಸಿಲ್ಲ. ಇಂತಹ ಕ್ರಮಗಳು ಭಾರತದ ಸಂವಿಧಾನದ ಆಶಯವನ್ನೇ ಹಾಳು ಮಾಡುತ್ತವೆ. ಕೇಂದ್ರವು ಸಹಕಾರಿ ಒಕ್ಕೂಟದ ತತ್ವ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಗೌರವಿಸಬೇಕು. ರಾಜ್ಯಗಳ ಘನತೆಯನ್ನು ಕುಗ್ಗಿಸುವ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು" ಎಂದು ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಹಿನ್ನಡೆ; SIR ಪ್ರಕ್ರಿಯೆಗೆ ಯಾವುದೇ ಅಡೆತಡೆ ಒಡ್ಡದಂತೆ ಸುಪ್ರೀಂ ಎಚ್ಚರಿಕೆ

ಯಾರು ಈ ಬೋಸ್‌?

ಕೇರಳ ಮೂಲದ, 75 ವರ್ಷದ ಬೋಸ್‌ ಕೋಟ್ಟಯಂ ಜಿಲ್ಲೆಯ ಮಣ್ಣಾನಂನಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರ ಪಿ.ಕೆ. ವಾಸುದೇವನ್‌-ಪದ್ಮಾವತಿ ಅಮ್ಮ ದಂಪತಿಯ ಪುತ್ರ ಬೋಸ್‌ ಪ್ರಾಥಮಿಕ ಶಿಕ್ಷಣವನ್ನು ಮಣ್ಣಾನಂನಲ್ಲಿ ಪೂರೈಸಿದರು. ಎಲ್‌.ಎಸ್‌. ಲಕ್ಷ್ಮೀಯನ್ನು ವರಿಸಿದ ಬೋಸ್‌ ಅವರ ಪುತ್ರಿ ನಂದಿತಾ ಬೋಸ್‌ 2017ರಲ್ಲಿ ಮೃತಪಟ್ಟರು. ಆನಂದ್‌ ಬೋಸ್ ಅವರನ್ನು 2022ರ ನವೆಂಬರ್ 17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪಶ್ಚಿಮ ಬಂಗಾಳದ ಗವರ್ನರ್‌ ಆಗಿ ನೇಮಿಸಿದರು.

ವಿವಾದ

2024ರಲ್ಲಿ ಆನಂದ್‌ ಬೋಸ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿತ್ತು. ರಾಜ ಭವನದಲ್ಲಿ ಅವರು ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಅದಾಗ್ಯೂ ಬೋಸ್‌ ಈ ಆರೋಪವನ್ನು ನಿರಾಕರಿಸಿದ್ದರು. ಟಿ.ಎಂ.ಸಿ. ಬೆಂಬಲಿತ ಮಹಿಳೆ ಸುಳ್ಳು ದೂರು ನೀಡಿದ್ದಾರೆ ಎಂದು ಹೇಳಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.