ಆಲೂಗಡ್ಡೆ ರಾಶಿ ಉಳಿಸಲು ಹೋದ ರೈತ ಸಿಡಿಲಿಗೆ ಬಲಿ
ಗುರುವಾರ ಸಂಜೆ ವೇಳೆಗೆ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣ ವಾಗಿತ್ತು. ಸುಮಾರು 7 ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು ಹಾಗೂ ಮಿಂಚು ತೀವ್ರ ಗೊಂಡಿತ್ತು. ಇದೇ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾರಾಯಣ ಸ್ವಾಮಿ ಅವರ ಮೇಲೆ ಏಕಾಏಕಿ ಸಿಡಿಲು ಬಡಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಬಳಿಕ ಮೃತಪಟ್ಟಿದ್ದಾರೆ
-
ಶಿಡ್ಲಘಟ್ಟ: ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಗುಡುಗು-ಮಿಂಚು ಸಹಿತ ಮಳೆಯ ನಡುವೆ ಸಂಭವಿಸಿದ ಸಿಡಿಲು ದುರಂತದಲ್ಲಿ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ ಗ್ರಾಮದ ನಾರಾಯಣಸ್ವಾಮಿ (52) ಮೃತರು.
ಕೃಷಿಯನ್ನೇ ಅವಲಂಬಿಸಿಕೊಂಡಿದ್ದ ಅವರು ತಮ್ಮ ತೋಟದಲ್ಲಿ ಬೆಳೆದಿದ್ದ ಆಲೂಗಡ್ಡೆ ರಾಶಿಯನ್ನು ಮಳೆಯಿಂದ ರಕ್ಷಿಸಲು ತೆರಳಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ
ಗುರುವಾರ ಸಂಜೆ ವೇಳೆಗೆ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣ ವಾಗಿತ್ತು. ಸುಮಾರು 7 ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು ಹಾಗೂ ಮಿಂಚು ತೀವ್ರ ಗೊಂಡಿತ್ತು. ಇದೇ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾರಾಯಣ ಸ್ವಾಮಿ ಅವರ ಮೇಲೆ ಏಕಾಏಕಿ ಸಿಡಿಲು ಬಡಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಬಳಿಕ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮಾಹಿತಿ ಪಡೆದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸ ಲಾಗಿದೆ. ಮೃತ ನಾರಾಯಣಸ್ವಾಮಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.
ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ ಮತ್ತು ಸಿಡಿಲು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ರೈತರು ಮಳೆ-ಮಿಂಚಿನ ಸಂದರ್ಭಗಳಲ್ಲಿ ಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.