Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಯಲ್ಲಿ 1 ಬದಲಾವಣೆ ಸೂಚಿಸಿದ ಎನ್‌ಡಿಎ ಮಿತ್ರಪಕ್ಷ ಟಿಡಿಪಿ; ಏನದು?
TDP: ಪ್ರತಿ ಪಕ್ಷಗಳ ವಿರೋಧದ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬುಧವಾರ (ಏ. 2) ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಮಸೂದೆಗೆ ಬೆಂಬಲ ನೀಡಿರುವ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ 1 ಪ್ರಮುಖ ಬದಲಾವಣೆಯನ್ನು ಸೂಚಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಚಂದ್ರಬಾಬು ನಾಯ್ಡು.

ಹೊಸದಿಲ್ಲಿ: ಪ್ರತಿ ಪಕ್ಷಗಳ ವಿರೋಧದ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬುಧವಾರ (ಏ. 2) ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill)ಯನ್ನು ಮಂಡಿಸಿದೆ. ಈ ಮಧ್ಯೆ ಮಸೂದೆಗೆ ಬೆಂಬಲ ನೀಡಿರುವ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಾರ್ಟಿ (TDP) 1 ಪ್ರಮುಖ ಬದಲಾವಣೆಯನ್ನು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವ ಅಂಶದ ಬಗ್ಗೆ ಪಕ್ಷ ಎತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
"ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕೆಂದು ಪಕ್ಷವು ಆಗ್ರಹಿಸುತ್ತಿದೆ" ಎಂದು ಟಿಡಿಪಿ ಮೂಲವೊಂದು ತಿಳಿಸಿದೆ. ಅದನ್ನು ಹೊರತುಪಡಿಸಿ, ವಕ್ಫ್ ಮಂಡಳಿಗಳಲ್ಲಿ ಮಹಿಳೆಯರ ಸೇರ್ಪಡೆ ಸೇರಿದಂತೆ ಮಸೂದೆಗೆ ತಿದ್ದುಪಡಿ ತರುವ ಇತರ ಎಲ್ಲ ಅಂಶಗಳನ್ನು ತೆಲುಗು ದೇಶಂ ಪಕ್ಷ ಬೆಂಬಲಿಸಿದ್ದು, ಇದನ್ನು ಕ್ರಾಂತಿಕಾರಕ ಬದಲಾವಣೆ ಎಂದು ಬಣ್ಣಿಸಿದೆ.
ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಟಿಡಿಪಿ ನಾಯಕ ಪ್ರೇಮ್ ಕುಮಾರ್ ಜೈನ್ ಹೇಳಿದ್ದೇನು?
#WATCH | Hyderabad, Telangana | On Waqf Amendment Bill, Telugu Desam Party (TDP) national spokesperson Prem Kumar Jain says, "The whole Muslim community is waiting for the Waqf Amendment Bill to be tabled...Our party will support it. Chandrababu Naidu has already mentioned that… pic.twitter.com/2kBk7TqJDQ
— ANI (@ANI) April 1, 2025
ಈ ಸುದ್ದಿಯನ್ನೂ ಓದಿ: Waqf Bill: ವಕ್ಫ್ ವಿಧೇಯಕ: ಮಿಥ್ಯೆಗಳೇನು? ಸತ್ಯಗಳೇನು? ತಪ್ಪು ಕಲ್ಪನೆ ಇಲ್ಲಿ ಹೋಗಲಾಡಿಸಿ
ಏ. 1ರಂದು ಎಲ್ಲ ಸಂಸದರಿಗೆ 3 ಹಂತದ ವಿಪ್ ಜಾರಿ ಮಾಡಿದ ಪಾರ್ಟಿ, ಮಸೂದೆಯ ಬಗ್ಗೆ ಚರ್ಚೆ ನಡೆಯುವ ಏ. 2ರಂದು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿತು. "ಟಿಡಿಪಿ ತನ್ನ ಎಲ್ಲ ಸಂಸದರಿಗೆ 3 ಸಾಲಿನ ವಿಪ್ ಜಾರಿ ಮಾಡಿದ್ದು, ಏ. 2ರಂದು ಲೋಕಸಭೆಯಲ್ಲಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದೆʼʼ ಎಂದು ಪಕ್ಷದ ಪ್ರಕಟಣೆ ತಿಳಿಸಿತ್ತು.
ಟಿಡಿಪಿ ಮುಖ್ಯಸ್ಥರೂ ಆದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಪಕ್ಷದ ಮುಖಂಡರು ಮಂಗಳವಾರ ಮಧ್ಯರಾತ್ರಿಯವರೆಗೆ ಸಭೆ ಆಯೋಜಿಸಿ ಮಸೂದೆಯ ಬಗ್ಗೆ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಸ್ಲಿಂ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಮಂಗಳವಾರ ಟಿಡಿಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಕುಮಾರ್ ಜೈನ್ ಅವರು, ಪಕ್ಷವು ವಕ್ಫ್ ಮಸೂದೆಯನ್ನು ಬೆಂಬಲಿಸುತ್ತದೆ ಎಂದು ದೃಢಪಡಿಸಿದರು. ಜತೆಗೆ ಚಂದ್ರಬಾಬು ನಾಯ್ಡು ಮುಸ್ಲಿಮರ ಪರವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು. "ನಾವು ಮುಸ್ಲಿಮ್ ಸಮುದಾಯದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇವೆ ಎಂದು ಚಂದ್ರಬಾಬು ನಾಯ್ಡು ಈಗಾಗಲೇ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಮುಸ್ಲಿಮರ ಪರವಾಗಿದ್ದಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಸ್ಲಿಮರಿಗೆ ಭರವಸೆ ನೀಡಿದ್ದ ಚಂದ್ರಬಾಬು ನಾಯ್ದು
ಮಾರ್ಚ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರು ತಮ್ಮ ಪಕ್ಷವು ಮುಸ್ಲಿಮ್ ಸಮುದಾಯದ ಅನುಕೂಲಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು. ಜತೆಗೆ ರಾಜ್ಯದಲ್ಲಿನ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು. "ಟಿಡಿಪಿ ಆಡಳಿತದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ದೊರೆತಿದೆ. ಎನ್‌ಡಿಎ ಅಧಿಕಾರದಲ್ಲಿದ್ದರೆ ಮುಸ್ಲಿಮರು ಎಲ್ಲ ರೀತಿಯ ಸೌಲಭ್ಯ ದೊರೆಯಲಿದೆ" ಎಂದು ಅವರು ಹೇಳಿದ್ದರು.