Andhra Pradesh Stampede: 12 ಜನರನ್ನು ಬಲಿ ಪಡೆದ ಆಂಧ್ರ ಪ್ರದೇಶ ಕಾಲ್ತುಳಿತಕ್ಕೆ ಕಾರಣವೇನು? ಇಲ್ಲಿದೆ ಇಂಚಿಂಚು ಮಾಹಿತಿ
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಶನಿವಾರ ಮತ್ತು ಏಕಾದಶಿ ಏಕಕಾಲಕ್ಕೆ ಬಂದಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದು ಅಪಘಾತಕ್ಕೆ ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಏಕಾದಶಿಯಂದು ಜನ ಸಂದಣಿ ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಿರಲಿಲ್ಲ. ಹೀಗಾಗಿ ಭಕ್ತರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ -
Ramesh B
Nov 1, 2025 3:56 PM
ಅಮರಾವತಿ, ನ. 1: ದೇಶದಲ್ಲಿ ಮತ್ತೊಂದು ಕಾಲ್ತುಳಿತ ಪ್ರಕರಣ ವರದಿಯಾಗಿದೆ (Andhra Pradesh Stampede). ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 1ರಂದು ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಶನಿವಾರ ಏಕಾದಶಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದು ಅಪಘಾತಕ್ಕೆ ಕಾರಣವಾಯ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಚೇರಿ, ʼʼಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ. ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಈ ಅವಘಡ ಸಂಭವಿಸಿದೆ. ಏಕಕಾಲಕ್ಕೆ ಭಕ್ತರು ಸೇರಿದ್ದರಿಂದ ದುರಂತ ನಡೆದಿದೆʼʼ ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Virat Kohli: ಆರ್‌ಸಿಬಿ ಕಾಲ್ತುಳಿತ ದುರಂತದ ಬಳಿಕ ಭಾರತಕ್ಕೆ ಕೊಹ್ಲಿ ಮೊದಲ ಭೇಟಿ
ಮಿನಿ ತಿರುಪತಿ
ಮಿನಿ ತಿರುಪತಿ ಎಂದು ಕರೆಯಲ್ಪಡುವ ಈ ಖಾಸಗಿ ದೇವಸ್ಥಾನದ ಕೆಲಸ ಇನ್ನೂ ನಡೆಯುತ್ತಿದೆ. ಇಲ್ಲಿ ಹೊರ ಹೋಗಲು ಪ್ರತ್ಯೇಕ ಬಾಗಿಲಿಲ್ಲ. ಒಳ ಹೋಗಲು ಮತ್ತು ಹೊರ ಹೋಗಲು ಒಂದೇ ಬಾಗಿಲು ಇರುವುದು ದುರಂತ ಮುಖ್ಯ ಕಾರಣ ಎನ್ನಲಾಗಿದೆ. ಮೂಲಗಳ ಪ್ರಕಾರ 80 ವರ್ಷದ ಮುಕುಂದ ಪಾಂಡ ಎನ್ನುವುವವರು ತಮ್ಮ ಜಾಗದಲ್ಲಿ ವೆಂಕಟೇಶ್ವರ ದೇಗುಲವನ್ನು ನಿರ್ಮಿಸಿದ್ದಾರೆ. ಕೇವಲ 4 ತಿಂಗಳ ಹಿಂದೆಯಷ್ಟೇ ಈ ದೇಗುಲ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ತಿರುಮಲದ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಇದನ್ನು ನಿರ್ಮಿಸಿರುವುದರಿಂದ ಮಿನಿ ತಿರುಪತಿ ಎಂದು ಕರೆಯಲಾಗುತ್ತದೆ.
''ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದ್ವಾರವಿದ್ದು, ಕಿರಿದಾದ ಹಾದಿಯ ಪಕ್ಕದಲ್ಲಿ ಕಂಬಿಗಳಿವೆ. ಏಕಾದಶಿ ಪೂಜೆಗಾಗಿ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ದುರಂತ ಸಂಭವಿಸಿದ್ದು ಇಲ್ಲಿಯೇʼʼ ಎಂದು ಸ್ಥಳೀಯರು ಹೇಳಿದ್ದಾರೆ.
ಆಂಧ್ರ ಪ್ರದೇಶದ ಸಚಿವ ಅನಮ್ ರಾಮನಾರಾಯಣ ರೆಡ್ಡಿ ಅವರ ಎಕ್ಸ್ ಪೋಸ್ಟ್:
శ్రీకాకుళం జిల్లాలో తొక్కిసలాట జరిగిన కాశీబుగ్గ వెంకటేశ్వర ఆలయం ప్రభుత్వ నిర్వహణలో లేదు. ఈ ప్రైవేట్ ఆలయం దేవాదాయ శాఖ ఆధీనంలో లేదు. హరిముకుంద్పండా అనే ఒక వ్యక్తి తనకు చెందిన 12 ఎకరాల సొంత భూమిలో తన సొంత నిధులతో నిర్మించిన ఒక ప్రైవేటు దేవాలయం. ఈ దేవాలయ సామర్థ్యం 2,000 నుంచి 3,000… pic.twitter.com/mFAkzgHeGM
— FactCheck.AP.Gov.in (@FactCheckAPGov) November 1, 2025
ಮಾಹಿತಿ ನೀಡಿರಲಿಲ್ಲ
ದೇವಸ್ಥಾನ ಆಡಳಿತ ಮಂಡಳಿ ಏಕಾದಶಿಯಂದು ಜನ ಸಂದಣಿ ಉಂಟಾಗಲಿದೆ ಎನ್ನುವ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಿರಲಿಲ್ಲ. ಹೀಗಾಗಿ ಭಕ್ತರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ. ʼʼಏಕಾದಶಿ ಮತ್ತು ಶನಿವಾರ ಏಕಕಾಲಕ್ಕೆ ಬಂದಿರುವುದು ವಿಶೇಷ. ಹೀಗಾಗಿ ವೆಂಕಟೇಶ್ವರನ ದರ್ಶನಕ್ಕೆ ಅಂದುಕೊಂಡಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನರನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾಲ್ತುಳಿತ ಉಂಟಾಗಿದೆʼʼ ಎಂದು ಸರ್ಕಾರ ಹೇಳಿದೆ.
ಆಂಧ್ರ ಪ್ರದೇಶದ ಸಚಿವ ಅನಮ್ ರಾಮನಾರಾಯಣ ರೆಡ್ಡಿ ಈ ಬಗ್ಗೆ ಮಾತನಾಡಿ, ದುರಂತ ಸಂಭವಿಸಿದ ದೇವಾಲಯವನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಈ ದೇವಾಲಯದ ಸಾಮರ್ಥ್ಯ ಕೇವಲ 2,000ರಿಂದ 3,000 ಜನರು ಮಾತ್ರ. ಶನಿವಾರ ಏಕಾದಶಿಯಾಗಿದ್ದರಿಂದ 25,000 ಜನರು ಏಕಕಾಲದಲ್ಲಿ ಆಗಮಿಸಿದರು. ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಜತೆಗೆ ಸರ್ಕಾರಕ್ಕೆ ಮಾಹಿತಿಯನ್ನೂ ಒದಗಿಸಿರಲಿಲ್ಲ. ಅಪಘಾತಕ್ಕೆ ಇದೇ ಕಾರಣ" ಎಂದು ಎಕ್ಸ್‌ನಲ್ಲಿ ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kumbhamela Stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ-ಸಿಎಂ ಯೋಗಿ ಫಸ್ಟ್ ರಿಯಾಕ್ಷನ್
2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಕಾಲ್ತುಳಿತ ಪ್ರಕರಣಕ್ಕೆ ಪ್ರದಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ.