ವಂದೇ ಭಾರತ್ ಸ್ಲೀಪರ್ ಟ್ರೈನ್ ಹೇಗಿದೆ? ಇದರೊಳಗೆ ಏನೆಲ್ಲ ಇದೆ? ವಿಡಿಯೊ ನೋಡಿ
Vande Bharat Sleeper Train: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ರೈಲಿನ ಒಳಾಂಗಣ ವಿಶೇಷವಾಗಿದ್ದು, ಆರಾಮದಾಯಕ ಪ್ರಯಾಣಕ್ಕಾಗಿ ತಾಂತ್ರಿಕ ಸೌಲಭ್ಯಗಳು ಮತ್ತುಅನೇಕ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸದ್ಯ ರೈಲನ್ನು ಪರಿಚಯಿಸುವ ವಿಡಿಯೊ ಹೊರಬಿದ್ದಿದೆ.
ಸಂಗ್ರಹ ಚಿತ್ರ -
ನವದೆಹಲಿ, ಜ. 4: ಇದುವರೆಗೆ ಕುಳಿತುಕೊಳ್ಳಬಹುದಾದ ವಂದೇ ಭಾರತ್ ಎಕ್ಸ್‌ಪ್ರೆಸ್‍ನಲ್ಲಿ ಸಂಚರಿಸಿದ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ವಂದೇ ಭಾರತ್ ಸ್ಲೀಪರ್ ಕೋಚ್ ಅನ್ನು ಸದ್ಯದಲ್ಲೇ ಲೋಕಾರ್ಪಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnaw) ರೈಲನ್ನು ಪರೀಕ್ಷಿಸುತ್ತಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಶಾಲವಾದ ಆಸನ, ಅಡ್ಜಸ್ಟ್ ಮಾಡಬಹುದಾದ ರೈಲಿನ ಕಿಟಕಿಗಳು, ಸುಂದರವಾದ ವಾಶ್ ಬೇಸಿನ್‌ಗಳು ಸೇರಿದಂತೆ ವಂದೇ ಭಾರತ್ ಸ್ಲೀಪರ್ ಕೋಚ್‍ನಲ್ಲಿ ಹಲವು ಸೌಲಭ್ಯಗಳನ್ನು ವಿಡಿಯೊದಲ್ಲಿ ವಿವರಿಸಲಾಗಿದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ (Vande Bharat Sleeper Train) ಸುಧಾರಿತ ಸೌಲಭ್ಯಗಳು ಇರುತ್ತವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
16 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೀಘ್ರದಲ್ಲೇ ಕೋಲ್ಕತ್ತಾ–ಗುವಾಹಟಿ ಮಾರ್ಗದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ವೇಳೆ ಒಂದು ರೈಲು ಗುವಾಹಟಿಗೆ ತೆರಳಿದರೆ, ಮತ್ತೊಂದು ರೈಲು ಕೋಲ್ಕತ್ತಾಕ್ಕೆ ತೆರಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಂ ಮೋದಿ ಉದ್ಘಾಟಿಸಿದ ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ
ಇದಲ್ಲದೆ ಅಂಧ ಪ್ರಯಾಣಿಕರ ಅನುಕೂಲಕ್ಕಾಗಿ ಸೀಟ್ ಸಂಖ್ಯೆಗಳನ್ನು ಲೇಬಲ್ ಮಾಡಲು ಬ್ರೈಲ್ ಲಿಪಿಯನ್ನು ಬಳಸಲಾಗಿದೆ. ಇದಲ್ಲದೆ ಈ ರೈಲು ಇನ್ನಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈ ರೈಲಿನಲ್ಲಿ ಹಲವು ಅತ್ಯಾಧುನಿಕ ಸೌಲಭ್ಯಗಳಿದ್ದು, ಉತ್ತಮ ಕುಶನ್ ವ್ಯವಸ್ಥೆಯೊಂದಿಗೆ ಎರ್ಗೊನಾಮಿಕ್ ವಿನ್ಯಾಸದ ಬರ್ತ್‌ಗಳು, ಸುಗಮ ಸಂಚಾರಕ್ಕೆ ಸ್ವಯಂಚಾಲಿತ ಬಾಗಿಲುಗಳು, ಉನ್ನತ ಸಸ್ಪೆನ್ಶನ್ ಹಾಗೂ ಹೊರಗಿನ ಶಬ್ಧ ಕೇಳಿಸದಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಉತ್ತಮ ಪ್ರಯಾಣ ಸೌಕರ್ಯ, ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಟಾಕ್‌ಬ್ಯಾಕ್ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಡಿಸ್ಇನ್‌ಫೆಕ್ಟಂಟ್ ತಂತ್ರಜ್ಞಾನ ಸೇರಿದಂತೆ ಅನೇಕ ವೈಶಿಷ್ಟ್ಯಗಳು ಇದರಲ್ಲಿವೆ.
ವಂದೇ ಭಾರತ್ ರೈಲಿನ ವೈಶಿಷ್ಟ್ಯ ಸಾರುವ ವಿಡಿಯೊ ಇಲ್ಲಿದೆ:
Middle & low-income families की next-generation सवारी…
— Ashwini Vaishnaw (@AshwiniVaishnaw) January 3, 2026
🚆Vande Bharat Sleeper pic.twitter.com/kTDXxW2k85
ಇತ್ತೀಚೆಗೆ, ರೈಲ್ವೆ ಸುರಕ್ಷತಾ ಆಯುಕ್ತರ ಮೇಲ್ವಿಚಾರಣೆಯಲ್ಲಿ ರೈಲು ತನ್ನ ಅಂತಿಮ ಹೈ-ಸ್ಪೀಡ್ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿತು. ಅದರ ನಂತರ ರೈಲ್ವೆ ಸಚಿವರು ಕೋಲ್ಕತ್ತಾ ಮತ್ತು ಗುವಾಹಟಿ ನಡುವೆ ಅಧಿಕೃತವಾಗಿ ಚಾಲನೆ ನೀಡುವುದಾಗಿ ಘೋಷಿಸಿದರು.
ರೈಲಿನ ಸಂಚಾರ ಸ್ಥಿರತೆ, ಕಂಪನ ವರ್ತನೆ, ಬ್ರೇಕಿಂಗ್ ಕಾರ್ಯಕ್ಷಮತೆ, ತುರ್ತು ಬ್ರೇಕಿಂಗ್ ವ್ಯವಸ್ಥೆಗಳು, ಸುರಕ್ಷತಾ ವ್ಯವಸ್ಥೆಗಳು ಸೇರಿದಂತೆ ಇತರ ಮಹತ್ವದ ತಾಂತ್ರಿಕ ಅಂಶಗಳನ್ನು ಒಳಗೊಂಡ ಸಮಗ್ರ ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ, ಊಟ ಸೇರಿದಂತೆ 3 ಎಸಿ ಬುಕಿಂಗ್ ಶುಲ್ಕ ಸುಮಾರು 2,300 ರುಪಾಯಿ, 2 ಎಸಿ ಸುಮಾರು 3,000 ರುಪಾಯಿ ಮತ್ತು 1 ಎಸಿ ಸುಮಾರು 3,600 ರುಪಾಯಿ ಆಗಿರಲಿದೆ. ಈ ಶುಲ್ಕಗಳನ್ನು ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರೈಲಿನಲ್ಲಿ 3 ಎಸಿ ವಿಭಾಗದ 11 ಕೋಚ್‌ಗಳು, 2 ಎಸಿ ವಿಭಾಗದ 4 ಕೋಚ್‌ಗಳು ಮತ್ತು 1 ಎಸಿ ವಿಭಾಗದ 1 ಕೋಚ್‌ಗಳಿವೆ. ಒಟ್ಟು 823 ಬರ್ತ್‌ಗಳಲ್ಲಿ 3 ಎಸಿ ವಿಭಾಗದಲ್ಲಿ 611, 2 ಎಸಿ ವಿಭಾಗದಲ್ಲಿ 188 ಮತ್ತು 1 ಎಸಿ ವಿಭಾಗದಲ್ಲಿ 24 ಬರ್ತ್‌ಗಳಿವೆ.