ಕೆಲಸಕ್ಕೆ ಅಪ್ಲೈ ಮಾಡಿದ್ದು 2005ರಲ್ಲಿ; ಅಪಾಯಿಂಟ್‌ಮೆಂಟ್ ಲೆಟರ್ ಕೈಸೇರಿದ್ದು ರಿಟೈರ್ಡ್ ಆಗುವಾಗ!
ಸರ್ಕಾರಿ ಕೆಲಸ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ? ಅಂತಹ ಕೆಲಸ ಸಿಕ್ಕರೆ ಕುಟುಂಬಕ್ಕೆ ಬಹಳ ಸಂತೋಷದ ಕ್ಷಣವಾಗಿರುತ್ತದೆ. ಕೇರಳಂನ ಈ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿರುವುದು ನಿರಾಸೆ ತಂದಿದೆ. ಅರೆ... ಇದೇನಿದು ಎಲ್ಲರೂ ಸರ್ಕಾರಿ ಕೆಲಸ ಅಂದ್ರೆ ಹಾತೊರೆಯುತ್ತಾರೆ ಅಂಥದ್ರಲ್ಲಿ ಇವರದ್ದೇನು ವರಸೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ...
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಮೇ 31: ಸರ್ಕಾರಿ ಕೆಲಸ ಎಂದರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ? ಅಂತಹ ಕೆಲಸ ಸಿಕ್ಕವರಿಗೆ ಮಾತ್ರವಲ್ಲ ಕುಟುಂಬಸ್ಥರಿಗೂ ಸಂತಸವಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳಂನ (Keralam) ಈ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಕೆಲಸ (Government Job) ಸಿಕ್ಕಿರುವುದು ನಿರಾಸೆ ತಂದಿದೆ. ಕಾರಣವೇನು ಗೊತ್ತಾ? ಇನ್ನೇನು ಕೆಲಸದಿಂದ ನಿವೃತ್ತಿಯಾಗಬೇಕು ಎನ್ನುವ ಸಮಯದಲ್ಲಿ ಉದ್ಯೋಗ ದೊರೆತಿದೆ. 2005ರಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 21 ವರ್ಷಗಳ ನಂತರ ನೇಮಕಾತಿ ಪತ್ರ ದೊರೆತಿದೆ!
ಮಲಪ್ಪುರಂ ಜಿಲ್ಲೆಯ ಕಾಳಿಕಾವು ಮೂಲದ ಅಬ್ದುಲ್ ಮಜೀದ್ ಅವರಿಗೆ ಕಳೆದ ತಿಂಗಳು ಕೇರಳ ಸಾರ್ವಜನಿಕ ಸೇವಾ ಆಯೋಗದಿಂದ (PSC) ಅರೆಕಾಲಿಕ ಕಿರಿಯ ಅರೇಬಿಕ್ ಶಿಕ್ಷಕ ನೇಮಕಾತಿ ಪತ್ರ ಬಂದಿದೆ. ಇದನ್ನು ನೋಡಿದ ಅವರು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಮಜೀದ್ 2005ರಲ್ಲಿ ಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಅವರು ಆಯ್ಕೆಯಾದ ರ‍್ಯಾಂಕ್ ಪಟ್ಟಿಯ ಕಾಲಾವಧಿ 2008ರಲ್ಲಿ ಮುಕ್ತಾಯಗೊಂಡಿತ್ತು.
ʼʼಸರ್ಕಾರಿ ಉದ್ಯೋಗ ನನ್ನ ಕನಸಾಗಿತ್ತು. ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ನೇಮಕಾತಿಗಾಗಿ ಭರವಸೆಯಿಂದ ಕಾಯುತ್ತಿದ್ದೆ. ಆದರೆ ಆಗ ನೇಮಕಾತಿ ನಡೆದಿರಲಿಲ್ಲʼʼ ಎಂದು ಮಜೀದ್ ಹತಾಶರಾಗಿ ಹೇಳಿದರು. ಈ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ ಭರವಸೆಯನ್ನೇ ಬಿಟ್ಟುಬಿಟ್ಟಿದ್ದರು. ಆದರೀಗ 60ನೇ ವರ್ಷದ ಆಸುಪಾಸಿನಲ್ಲಿರುವ ಅವರಿಗೆ ನೇಮಕಾತಿ ಪತ್ರ ಬಂದಿರುವುದು ಅಚ್ಚರಿ ಮೂಡಿಸಿದೆ.
ಶಾಲಾ ಬಾಲಕಿಯರಿಗೆ ದೊರೆಯಲಿದೆ 3 ದಿನಗಳ ಮುಟ್ಟಿನ ರಜೆ
“ಪಿಎಸ್‌ಸಿ ಸಲಹೆ ನೀಡಲು 18 ವರ್ಷಗಳು ಬೇಕಾಯಿತು. ನೇಮಕಾತಿ ಎಷ್ಟರ ಮಟ್ಟಿಗೆ ವಿಳಂಬವಾಯಿತು ಎಂದರೆ ನಾನು ಆ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕಳೆದುಕೊಂಡಿದ್ದೇನೆ” ಎಂದು ಮಜೀದ್ ಹೇಳಿದರು.
ನಿಯಮಗಳ ಪ್ರಕಾರ, ಸಲಹಾ ಮೆಮೊ ಸ್ವೀಕರಿಸಿದ ನಂತರ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮೂರು ತಿಂಗಳೊಳಗೆ ಉದ್ಯೋಗಕ್ಕೆ ಸೇರಬೇಕಾಗಿತ್ತು. ಆದರೆ ಮಜೀದ್ ಅವರ ಎಸ್‌ಎಸ್‌ಎಲ್‌ಸಿ ಪುಸ್ತಕದಲ್ಲಿ ಜನ್ಮ ದಿನಾಂಕವು 1966ರ ಮೇ 27 ಎಂದು ದಾಖಲಾಗಿದ್ದು, ಅವರು ಈಗಾಗಲೇ ನಿಗದಿತ ನಿವೃತ್ತಿ ವಯಸ್ಸನ್ನು ಮೀರಿರುವುದರಿಂದ ನೇಮಕಾತಿಗೆ ಅರ್ಹರಾಗಿರುವುದಿಲ್ಲ.