ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Vs America : ರಷ್ಯಾದಿಂದ ತೈಲ ಖರೀದಿಸಬೇಡಿ ; ಭಾರತಕ್ಕೆ ಅಮೆರಿಕ ಒತ್ತಡ, ದೇಶದಲ್ಲಿ ಹೆಚ್ಚಾಗುತ್ತಾ ಪೆಟ್ರೋಲ್‌, ಡಿಸೇಲ್‌ ಬೆಲೆ?

ಭಾರತ ಹಾಗೂ ಅಮೆರಿಕದ ನಡುವೆ ತೆರಿಗೆ ಯುದ್ಧ ನಡೆಯುತ್ತಿದೆ. ಭಾರತದ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ. ಆಗಸ್ಟ್‌ 1 ರಂದು ಶೇ 25 ರಷ್ಟು ಸುಂಕ ವಿಧಿಸಿದ್ದ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕೆ ದಂಡನಾತ್ಮಕವಾಗಿ ಮತ್ತೆ ಹೆಚ್ಚುವರಿ ಶೇಕಡ 25ರಷ್ಟು ಸುಂಕ ವಿಧಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿ; ಭಾರತಕ್ಕೆ ಅಮೆರಿಕ ಒತ್ತಡ, ಮುಂದೇನಾಗಲಿದೆ?

Vishakha Bhat Vishakha Bhat Aug 10, 2025 2:39 PM

ನವದೆಹಲಿ: ಭಾರತ ಹಾಗೂ ಅಮೆರಿಕದ ನಡುವೆ ತೆರಿಗೆ ಯುದ್ಧ (America Tax on India) ನಡೆಯುತ್ತಿದೆ. ಭಾರತದ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆದೇಶ ನೀಡಿದ್ದಾರೆ. ಆಗಸ್ಟ್‌ 1 ರಂದು ಶೇ 25 ರಷ್ಟು ಸುಂಕ ವಿಧಿಸಿದ್ದ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕೆ ದಂಡದ ರೂಪವಾಗಿ ಮತ್ತೆ ಹೆಚ್ಚುವರಿ ಶೇಕಡ 25ರಷ್ಟು ಸುಂಕ ವಿಧಿಸಿದ್ದಾರೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದ್ದು, ರಷ್ಯಾ-ಉಕ್ರೇನ್ ಯುದ್ಧ ಆರಂಭದಿಂದಲೂ ರಷ್ಯಾದ ಕಚ್ಚಾ ತೈಲದ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದೀಗ ಈ ಕುರಿತು ಅಮೆರಿಕದ ಕಣ್ಣು ಕೆಂಪಾಗಿದ್ದು, ರಷ್ಯಾದಿಂದ ತೈಲ ಖರೀದಿಸಿದರೆ ಇನ್ನೂ ಹೆಚ್ಚಿನ ಸುಂಕವನ್ನು ವಿಧಿಸಿದೆ. ಗಮನಾರ್ಹವಾಗಿ ಭಾರತದ ಮೇಲೆ ಮಾತ್ರ ಈ ದಂಡನಾ ಸುಂಕ ವಿಧಿಸಿದ್ದು, ರಷ್ಯಾದಿಂದ ತೈಲ ಖರೀದಿಸುವ ಚೀನಾ ಮತ್ತು ಟರ್ಕಿಯಂಥ ದೇಶಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ತೆರಿಗೆ ಆದೇಶದಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಚರ್ಮ, ರಾಸಾಯನಿಕ, ಪಾದರಕ್ಷೆ, ಹರಳು ಮತ್ತು ಆಭರಣ, ಜವಳಿ ಮತ್ತು ಸಿಗಡಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಜೊತೆಗೆ ಕಂಬಳಿ (52.9%), ಸಿದ್ಧ ಉಡುಪು (ಶೇಕಡ 63.9), ಜವಳಿ (ಶೇ. 59), ವಜ್ರ, ಚಿನ್ನ ಮತ್ತು ಇತರ ಉತ್ಪನ್ನಗಳ ರಫ್ತಿನ ಮೇಲೆ (ಶೇ. 52.1) ಹೆಚ್ಚಿನ ಸುಂಕ ಬೀಳಲಿದೆ. ಆಗಸ್ಟ್‌ 7 ರಿಂದ ಶೇ 25 ರಷ್ಟು ಸುಂಕ ಜಾರಿಗೆ ಬಂದರೆ, ಹೆಚ್ಚುವರಿ ಸುಂಕ ಆಗಸ್ಟ್ 27ರಿಂದ ಜಾರಿಯಾಗಲಿದೆ.

ಭಾರತಕ್ಕೆಷ್ಟು ನಷ್ಟ?

ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ನೀತಿಯಿಂದ ಭಾರತಕ್ಕೆ ಹೊಡೆತವಾದರೂ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅಮೆರಿಕಕ್ಕೆ ಸೆಡ್ಡು ಹೊಡೆದಿದೆ. ತೆರಿಗೆ ನೀತಿ ಕುರಿತು ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ಯಾವುದೇ ಬೆಲೆ ತೆರಲೂ ಸಿದ್ಧವಿದೆ ಎಂದು ಹೇಳಿದ್ದಾರೆ. ಭಾರತ ಯಾರಿಗೂ ತಲೆ ಬಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದರು. ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆ. ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅಮೆರಿಕದ ಗೊಡ್ಡು ಬೆದರಿಕೆಗೆ ಭಾರತ ಹೆದರುವುದಿಲ್ಲ ಎಂದು ಅವರು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

Tax

ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಿದರೆ ಏನಾಗುತ್ತೆ?

ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು 2022 ರಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್‌ ರಷ್ಯಾ ಯುದ್ಧ ಆರಂಭವಾದಾಗ, ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ್ದವು. ಆ ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಗೆ ಆರಂಭಿಸಿತ್ತು. ಇದರ ಪರಿಣಾಮ ಭಾರತದ ಒಟ್ಟು ತೈಲ ಆಮದಿನಲ್ಲಿ 2020ರಲ್ಲಿ ಕೇವಲ ಶೇ. 1.7ರಷ್ಟು ಇದ್ದ ರಷ್ಯಾದ ಪಾಲು 2025ರ ವೇಳೆಗೆ ಶೇ. 35.1ಕ್ಕೆ ಜಿಗಿದಿತ್ತು. 2025 ರಿಂದ ಭಾರತ ಒಟ್ಟು, ಒಟ್ಟು 245 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಕಚ್ಚಾ ತೈಲದಲ್ಲಿ 88 ಎಂಎಂಟಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

ಇದೀಗ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಿದರೆ, ಭಾರತವು ಇತರ ದೇಶಗಳಿಂದ ದುಬಾರಿ ಬೆಲೆಗೆ ತೈಲವನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದ ತೈಲದ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬರಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಭಾರತ ಕೇವಲ ಪ್ರಮುಖ ತೈಲ ಆಮದುದಾರ ರಾಷ್ಟ್ರವಲ್ಲ. ಇದು ಸಂಸ್ಕರಣಾ ಶಕ್ತಿ ಕೇಂದ್ರವಾಗಿದೆ. ಖರೀದಿಸುವ ರಷ್ಯಾದ ಕಚ್ಚಾ ತೈಲದ ಒಂದು ಭಾಗವನ್ನು ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನವಾಗಿ ಪರಿವರ್ತಿಸಿ ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗೆ ರಫ್ತು ಮಾಡಲಾಗುತ್ತದೆ. ಭಾರತವು ತನ್ನ ರಷ್ಯಾದ ಖರೀದಿಗಳನ್ನು ಕಡಿಮೆ ಮಾಡಿದರೆ, ಆ ಸಂಸ್ಕರಿಸಿದ ಇಂಧನ ರಫ್ತು ಕಡಿಮೆಯಾಗಬಹುದು.

ಭಾರತ ಇದ್ದಕ್ಕಿದ್ದಂತೆ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರೆ, ಅದರ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಏಕಾಏಕಿ ಹಣದುಬ್ಬರ ಉಂಟಾಗಬಹುದು ಹಾಗೂ ಇಂಧನ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗಿ, ರಾಜಕೀಯ ಒತ್ತಡವೂ ಉಂಟಾಗಬಹುದು. ಇದನ್ನು ಸರಿದೂಗಿಸಲು ಭಾರತವು ದೇಶೀಯ ತೈಲ ಉತ್ಪಾದನೆ ಮತ್ತು ಪರಿಶೋಧನೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕಾಗುತ್ತದೆ, ಜೊತೆಗೆ ಮಧ್ಯಪ್ರಾಚ್ಯ, ಗಯಾನಾ ಮತ್ತು ಕೆನಡಾದಂತಹ ಇತರ ದೇಶಗಳಿಂದ ತೈಲ ಆಮದಿಗೆ ಒತ್ತು ನೀಡಬೇಕಾಗುತ್ತದೆ.

ಅಮೆರಿಕ vs ಭಾರತ

ಈ ಹಿಂದೆಯೂ ಹಲವು ಬಾರಿ ಅಮೆರಿಕ ಭಾರತಕ್ಕೆ ನಿಷೇಧಗಳನ್ನು ಹೇರಿತ್ತು. ಭಾರತ ಮೇ 1998 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಆಪರೇಷನ್ ಶಕ್ತಿ ಎಂಬ ಹೆಸರಿನಲ್ಲಿ ನಡೆದಿದ್ದ ಈ ಕಾರ್ಯಾಚರಣೆಯು ಹಲವಾರು ದೇಶಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದಕ್ಕೆ ಅಮೆರಿಕ ಸುಮಾರು 200ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿತ್ತು. ಅಷ್ಟೇ ಅಲ್ಲದೆ ಕೆಲ ವರ್ಷಗಳ ಹಿಂದೆಯೂ ಭಾರತದ ಹಲವು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಇದೀಗ ಮತ್ತೆ ಸುಂಕ ನೀತಿ ಮೂಲಕ ಭಾರತವನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ.

ಪುಟಿನ್‌ ಭಾರತ ಭೇಟಿ

ಸುಂಕ ಯುದ್ಧ ನಡೆಯುತ್ತಿರುವಾಗಲೇ ಭಾರತ ಹಾಗೂ ರಷ್ಯಾದ ಬಾಂಧವ್ಯವನ್ನು ಹೆಚ್ಚಿಸುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ರಷ್ಯಾ ಈಗಾಗಲೇ ಪುಟಿನ್ ಭಾರತ ಭೇಟಿಯ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದ್ದು, ದಿನಾಂಕ ಘೋಷಣೆಯಾಗಬೇಕಿದೆ.