Dowry Harassment: ಇವರೆಂಥಾ ನೀಚರು? ವಿಷ ಸರ್ಪದ ಜೊತೆ ಸೊಸೆಯನ್ನು ಕೂಡಿ ಹಾಕಿದ ಅತ್ತೆ-ಮಾವ!
Woman Accuses Husband: ವರದಕ್ಷಿಣೆಗಾಗಿ ಸೊಸೆಗೆ ಅತ್ತೆ-ಮಾವ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸೊಸೆಯನ್ನು ಕೋಣೆಯಲ್ಲಿ ಕೂಡಿಹಾಕಿ ಹಾವನ್ನು ಛೂ ಬಿಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಸೊಸೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

-

ಕಾನ್ಪುರ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ (Uttar Pradesh) ವರದಕ್ಷಿಣೆ ಕಿರುಕುಳಕ್ಕೆ (Dowry Harassment) ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ಇದೇ ರೀತಿಯ ಆರೋಪವೊಂದು ಕೇಳಿಬಂದಿದೆ. ವರದಕ್ಷಿಣೆಗಾಗಿ ಅತ್ತೆ-ಮಾವ ವಿಷಪೂರಿತ ಹಾವನ್ನು ಇದ್ದ ಕೋಣೆಯಲ್ಲಿ ಸೊಸೆಯನ್ನು ಕೂಡಿ ಹಾಕಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೇಳಿಬಂದಿದೆ. ವರದಕ್ಷಿಣೆ ತಂದಿಲ್ಲವೆಂದು ಅತ್ತೆ-ಮಾವ ತನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಮಹಿಳೆ (woman) ಆರೋಪಿಸಿದ್ದಾರೆ.
ವಿಷಪೂರಿತ ಸರ್ಪವು ಮಹಿಳೆಗೆ ಕಚ್ಚಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ, ವರದಿಯ ಪ್ರಕಾರ, ಸೆಪ್ಟೆಂಬರ್ 18 ರಂದು ಕೋಣೆಯಲ್ಲಿ ಹಾವನ್ನು ಬಿಡಲಾಗಿತ್ತು. ನಂತರ ಮಹಿಳೆಯನ್ನು ಅದೇ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಹಾವು ಕಡಿತಕ್ಕೊಳಗಾದ ನಂತರ, ಮಹಿಳೆಯು ತನ್ನ ಅಕ್ಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕಾಗಿಮಿಸಿದ ಅವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಇನ್ನು ಹಾವು ಕಚ್ಚಿದ ಬಗ್ಗೆ ತನ್ನ ಅತ್ತೆ-ಮಾವಂದಿರಿಗೆ ತಿಳಿಸಿದ್ದೆ. ಆದರೆ, ಹಲವಾರು ಬಾರಿ ಮನವಿ ಮಾಡಿದರೂ ಅವರು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಮಹಿಳೆ ನೋವಿನಿಂದ ಅಳುತ್ತಿದ್ದರೆ, ಆಕೆಯ ಅತ್ತೆ-ಮಾವ ಹೊರಗೆ ನಿಂತು ನಗುತ್ತಿದ್ದರು ಎಂದು ಆಕೆಯ ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮೂರನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿ; ಇಲ್ಲಿದೆ ನೋಡಿ ವಿಡಿಯೋ
ಮಹಿಳೆಯು 2021 ರಲ್ಲಿ ವಿವಾಹವಾದರು. ಮದುವೆಯಾದ ಕೂಡಲೇ ಆಕೆಯ ಪತಿ ಮತ್ತು ಅತ್ತೆ-ಮಾವ 5 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿದರು. ಬೇಡಿಕೆ ಈಡೇರದಿದ್ದಾಗ ಹಲವು ಬಾರಿ ಆಕೆಯ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಆರಂಭದಲ್ಲಿ, ಕೋಣೆಯ ನವೀಕರಣಕ್ಕಾಗಿ 1.5 ಲಕ್ಷ ರೂ. ಕೇಳಿದಾಗ, ಮಹಿಳೆಯ ಪೋಷಕರು ಹಣವನ್ನು ನೀಡಿದರು. ಆದರೆ ನಂತರ ಅವರು ಹೆಚ್ಚಿನ ಹಣವನ್ನು ಕೇಳಲು ಪ್ರಾರಂಭಿಸಿದರು. ಆಕೆಯ ಪೋಷಕರು ಕೊಡದಿದ್ದಾಗ, ಅತ್ತೆ-ಮಾವ ಇಬ್ಬರೂ ಸೇರಿ ಮಹಿಳೆಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಸೊಸೆಯನ್ನು ಕೊಲ್ಲುವ ಸಲುವಾಗಿ ಮೊದಲೇ ಕೋಣೆಯಲ್ಲಿ ಹಾವನ್ನು ಇರಿಸಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಹಾವು ಕಡಿತದಿಂದ ವ್ಯಕ್ತಿ ಸಾವು
ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ 24 ವರ್ಷದ ಯುವಕನೊಬ್ಬ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ. ವಿಡಿಯೊ ಚಿತ್ರೀಕರಣ ಮಾಡುವಾಗ ಆ ವ್ಯಕ್ತಿಯು ತನ್ನ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡಿದ್ದ. ಬಹುಶಃ ರೀಲ್ಸ್‌ಗಾಗಿ ಮೋಜು ಮಾಡಲು ಹೋಗಿ ಈ ದುರಂತ ಸಂಭವಿಸಿರಬಹುದು ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಭಾನುವಾರ ಸಂಜೆ ಮೋರ್ನಾ ಗ್ರಾಮದ ಬಳಿ ಹಾವನ್ನು ಹಿಡಿದಿದ್ದಾನೆ ಎಂದು ಭೋಪಾ ಠಾಣಾ ಅಧಿಕಾರಿ ಓಂಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ದೃಢಪಡಿಸಿದ್ದಾರೆ. ಮೋಹಿತ್ ಕುತ್ತಿಗೆಗೆ ಹಾವು ಬಿಗಿದಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಂತರ ಹಾವನ್ನು ಹಿಡಿದು ಹತ್ತಿರದ ಕಾಡಿಗೆ ಬಿಡಲಾಯಿತು.