World Soil Day: ವಿಶ್ವ ಮಣ್ಣಿನ ದಿನ: ಸವೆತ ತಡೆದು ಮಣ್ಣನ್ನು ಸಂರಕ್ಷಿಸೋಣ
ಇಂದು ಮಾಲಿನ್ಯ, ಅರಣ್ಯ ನಾಶ, ಮತ್ತು ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಅತಿಯಾದ ಪ್ರಯೋಗದ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಹದಗೆಡುತ್ತಿದೆ. ಮಣ್ಣಿನ ಸವೆತವೂ ದಿನೇದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಣ್ಣಿನ ಹಾನಿಯನ್ನು ತಡೆಗಟ್ಟುವುದು, ಮಣ್ಣಿನ ಫಲವತ್ತತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ.
ವಿಶ್ವ ಮಣ್ಣು ದಿನ -
ಬೆಂಗಳೂರು: ನಮ್ಮ ಜೀವನಕ್ಕೆ ನೀರು, ಗಾಳಿ ಎಷ್ಟು ಅವಶ್ಯಕವೋ, ಮಣ್ಣೂ ಅಷ್ಟೇ ಅಗತ್ಯವಾಗಿದೆ. ಮಾನವ ಮಾತ್ರವಲ್ಲದೆ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಮಣ್ಣು ಆಧಾರ. ಆಹಾರ ಉತ್ಪಾದನೆ, ಪರಿಸರ ಸಮತೋಲನ ಮತ್ತು ಅನೇಕ ನೈಸರ್ಗಿಕ ಚಕ್ರಗಳಲ್ಲಿ ಮಣ್ಣು(Soil) ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ದುರುಪಯೋಗ, ಪ್ಲಾಸ್ಟಿಕ್ ಮಾಲಿನ್ಯ, ಕಾಡು ನಾಶ ಮತ್ತು ಹವಾಮಾನ ಬದಲಾವಣೆಯಿಂದ ಮಣ್ಣಿನ ಗುಣಮಟ್ಟವೇ ಹದಗೆಡುತ್ತಿದೆ. ಫಲವಾಗಿ ಮಣ್ಣಿನ ಫಲವತ್ತತೆ ಕುಗ್ಗಿ, ಮಣ್ಣಿನ ಸವೆತ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲೇ ಮಣ್ಣಿನ ಸಂರಕ್ಷಣೆಯ ಅಗತ್ಯತೆಯನ್ನು ಜಗತ್ತಿಗೆ ತಿಳಿಸಲು ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನ (World Soil Day) ಆಚರಿಸಲಾಗುತ್ತದೆ.
ಸುಸ್ಥಿರ ಭೂ ಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟುವ ಮಹತ್ವದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಈ ದಿನವನ್ನು ಮುಡಿಪಾಗಿಟ್ಟು ಇಟ್ಟಿದ್ದು, ವಿಶ್ವ ಮಣ್ಣಿನ ದಿನ ಪ್ರಾರಂಭ ಆಗಿದ್ದು ಹೇಗೆ..? ಮಹತ್ವ ಏನು..? ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ
ವಿಶ್ವ ಮಣ್ಣಿನ ದಿನದ ಇತಿಹಾಸ
ಜಾಗತಿಕ ಮಟ್ಟದಲ್ಲಿ ಮಣ್ಣಿನ ರಕ್ಷಣೆ ಹಾಗೂ ಮಹತ್ವದ ಕುರಿತು ಅರಿವು ಮೂಡಿಸಬೇಕೆಂಬ ಉದ್ದೇಶದಿಂದ 2002ರಲ್ಲಿ International Union of Soil Science (IUSS) ಮೊದಲ ಬಾರಿಗೆ ಡಿಸೆಂಬರ್ 05 ರಂದು ಮಣ್ಣಿನ ದಿನವಾಗಿ ಆಚರಿಸೋಣ ಎಂಬ ಸಲಹೆ ನೀಡಿತು.
ಮೊದಲ ಆಚರಣೆ ಯಾವಾಗ..?
ನಂತರ 2013ರಲ್ಲಿ FAO ಈ ಪ್ರಸ್ತಾಪವನ್ನು ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ ಮಂಡಿಸಿತು. ಎಲ್ಲ ಸದಸ್ಯ ರಾಷ್ಟ್ರಗಳ ಒಮ್ಮತದ ಬಳಿಕ, 2014ರ ಡಿಸೆಂಬರ್ 05ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು. ಆ ನಂತರ ಪ್ರತಿವರ್ಷ ಇದೇ ದಿನ ಜಾಗತಿಕ ಮಟ್ಟದಲ್ಲಿ ಮಣ್ಣಿ ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ಈ ಸುದ್ದಿಯನ್ನು ಓದಿ: Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ
ಮಣ್ಣಿನ ದಿನದ ಮಹತ್ವ ಏನು?
ಮಣ್ಣು ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲವಾದರೂ, ಅದಕ್ಕೆ ಪುನರುತ್ಥಾನವಾಗಲು ನೂರಾರು ವರ್ಷಗಳ ಕಾಲ ಬೇಕಾಗುತ್ತದೆ. ಅಲ್ಲದೇ ಮಣ್ಣೇ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ನೀಡುತ್ತಿದ್ದು, ನೀರನ್ನು ಶುದ್ಧಗೊಳಿಸಿ ಭೂಗರ್ಭ ಜಲಸಂಗ್ರಹಕ್ಕೆ ನೆರವಾಗುತ್ತದೆ. ತಾಪಮಾನ ಮತ್ತು ಅನಿಲ ಚಲನವಲನವನ್ನು ಇದು ನಿಯಂತ್ರಿಸುತ್ತಿದ್ದು,
ಆಹಾರ ಭದ್ರತೆ ಮತ್ತು ಮಾನವ ಆರೋಗ್ಯಕ್ಕೆ ಆಧಾರವಾಗಿದೆ.
ಆದರೆ ಮಣ್ಣಿನ ನಿರಂತರ ಹಾನಿ ಜಗತ್ತಿನ ಆಹಾರ ಭದ್ರತೆಗೂ ದೊಡ್ಡ ಸವಾಲಾಗುತ್ತಿದೆ. ಇದನ್ನು ತಡೆಯಲು ರೈತರು, ಸಾರ್ವಜನಿಕರು ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಈ ಕಾರಣದಿಂದ ವಿಶ್ವ ಮಣ್ಣಿನ ದಿನ ಮಣ್ಣಿನ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿ ಗುರುತಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ದಿನದಂದು ಕೃಷಿ ಇಲಾಖೆ, ಶಿಕ್ಷಣ ಸಂಸ್ಥೆಗಳು, ಪರಿಸರ ಸಂಘಟನೆಗಳು ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಮರ ನೆಡುವ ಅಭಿಯಾನ, ಜಾಗೃತಿ ರ್ಯಾಲಿ ಮುಂತಾದ ಮೂಲಕ ಮಣ್ಣಿನ ಉಳಿವಿಗೆ ಕರೆ ನೀಡುತ್ತಿವೆ.