2025 ಮುಗಿಯುವ ಮುನ್ನ ಭಾರತದ ಈ ರೋಮಾಂಚನಕಾರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
Year Ender 2025: ನಮ್ಮ ದೇಶ ಪ್ರಾಕೃತಿಕವಾಗಿ ವೈವಿಧ್ಯಮಯ ಪ್ರದೇಶಗಳನ್ನು ಹೊಂದಿದೆ. ಮನಮೋಹಕ ಬೀಚ್‌ಗಳು, ಸಾಹಸಪ್ರಿಯರನ್ನು ಸೆಳೆಯುವ ಟ್ರಕ್ಕಿಂಗ್ ಸ್ಥಳಗಳು, ಮನಃಶಾಂತಿಯನ್ನು ಬಯಸುವವರನ್ನು ಸೆಳೆಯುವ ಮನಮೋಹಕ ಕೂಲ್ ಸ್ಪಾಟ್‌ಗಳು, ಜಲಪಾತಗಳು... ಹೀಗೆ ನಮ್ಮ ದೇಶದಲ್ಲಿ ಒಂದು ಜನ್ಮದಲ್ಲಿ ಸುತ್ತಿ ಮುಗಿಸಲಾಗದಷ್ಟು ಪ್ರವಾಸಿ ತಾಣಗಳಿವೆ. ಈ ವರ್ಷ ಮುಗಿಯುವ ಮುನ್ನ ನೀವು ಭೇಟಿ ನೀಡಲೇಬೇಕಾದ 10 ಬೆಸ್ಟ್ ಡೆಸ್ಟಿನೇಷನ್‌ಗಳ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 8: 2025ಕ್ಕೆ ಬೈ ಬೈ ಹೇಳುವ ಸಮಯ (Year Ender 2025) ಬಂದಿದೆ. ಪ್ರವಾಸ ಪ್ರಿಯರು (Travel Lover) ಇಯರ್ ಎಂಡ್‌ಗೆ(Year End) ಒಂದೊಳ್ಳೆ ಟ್ರಿಪ್ ಗೆ ಪ್ಲ್ಯಾನ್(Trip Plan) ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಎಲ್ಲಿಗೆ ಹೋಗೋದು? ಹೇಗೆ ಹೋಗೋದು? ಎಂಬೆಲ್ಲ ಗೊಂದಲ ಕಾಡುತ್ತದೆ. ನಾವಿಲ್ಲಿ ನಿಮಗೆ ಬೆಸ್ಟ್ ಹಿಡನ್ ಡೆಸ್ಟಿನೇಷನ್ (Best Hidden Destination)ಗಳ ಮಾಹಿತಿ ಕೊಡುತ್ತಿದ್ದೇವೆ.
ನಮ್ಮ ದೇಶ ಪ್ರಾಕೃತಿಕವಾಗಿ ವೈವಿಧ್ಯಮಯ ಪ್ರದೇಶಗಳನ್ನು ಹೊಂದಿದೆ. ಮನಮೋಹಕ ಬೀಚ್, ಸಾಹಸಪ್ರಿಯರನ್ನು ಸೆಳೆಯುವ ಟ್ರಕ್ಕಿಂಗ್ ಸ್ಥಳ, ಮನಃಶಾಂತಿಯನ್ನು ಬಯಸುವವರಿಗೆ ಮನಮೋಹಕ ಕೂಲ್ ಸ್ಪಾಟ್, ಜಲಪಾತ...ಹೀಗೆ ನಮ್ಮ ದೇಶದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ 10 ಬೆಸ್ಟ್ ಡೆಸ್ಟಿನೇಷನ್ ಮಾಹಿತಿ ಇಲ್ಲಿದೆ.
ಝೀರೋ ವ್ಯಾಲಿ, ಅರುಣಾಚಲ ಪ್ರದೇಶ- ಇದು ಭೂಲೋಕದ ಸ್ವರ್ಗ
ತನ್ನ ಸುತ್ತ ಹಸಿರು ಪರ್ವತವನ್ನು ಹೊದ್ದು ನಿಂತಿರುವ ಮತ್ತು ಪೈನ್ ಮರಗಳಿಂದ ಅವೃತವಾಗಿರುವ, ಅಪಟಾನಿ ಬುಡಕಟ್ಟು ಸಂಸ್ಕೃತಿಯಿಂದ ಸಮೃದ್ಧವಾಗಿರುವ ಝೀರೋ ಕಣಿವೆ ಪ್ರಕೃತಿ ಪ್ರಿಯರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿನ ಶಾಂತ ಪರಿಸರ, ರೋಮಾಂಚನಕಾರಿ ಟ್ರೆಕ್ಕಿಂಗ್ ಸ್ಥಳಗಳು ಮತ್ತು ಸಾಂಸ್ಕೃತಿಕ ಹಬ್ಬಗಳು ನಿಮ್ಮ ವರ್ಷಾಂತ್ಯಕ್ಕೆ ಒಂದೊಳ್ಳೆ ಪ್ರವಾಸಿ ಅನುಭವವನ್ನು ನೀಡುತ್ತವೆ.
ತೀರ್ಥನ್ ಕಣಿವೆ, ಹಿಮಾಚಲ ಪ್ರದೇಶ- ಇಲ್ಲಿ ನದಿಗಳು ಪಿಸುಗುಡುತ್ತವೆ
ಮನಾಲಿ ಮತ್ತು ಶಿಮ್ಲಾದ ಜನನಿಬಿಡ ಪ್ರದೇಶದಿಂದ ದೂರವಿರುವ ತೀರ್ಥನ್ ಕಣಿವೆ ಪ್ರವಾಸಿ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಸ್ವಚ್ಛ ಸ್ಪಟಿಕದಂತೆ ಹರಿಯುವ ನದಿ, ಫಿಶಿಂಗ್ ಮಾಡಲು ಹೇಳಿ ಮಾಡಿಸಿದ ತಾಣಗಳು, ನಿಗೂಢ ಜಲಪಾತಗಳು ಮತ್ತು ಪ್ರಸಿದ್ಧ ಹಿಮಾಲಯನ್ ನ್ಯಾಷನಲ್ ಪಾರ್ಕ್ ನಿಮ್ಮ ವರ್ಷಾಂತ್ಯದ ಟೂರಿಂಗ್ ಪ್ಲ್ಯಾನ್ ಅನ್ನು ಪರ್ಫೆಕ್ಟ್ ಮಾಡೊದ್ರಲ್ಲಿ ಯಾವುದೇ ಸಂಶಯವಿಲ್ಲ.
ಮಜೌಲಿ, ಅಸ್ಸಾಂ-ವಿಶ್ವದ ಅತೀದೊಡ್ಡ ನದಿ ದ್ವೀಪ ಇಲ್ಲಿದೆ
ಈಶಾನ್ಯ ರಾಜ್ಯದ ಅಸ್ಸಾಂನಲ್ಲಿರುವ ಈ ಮನಮೋಹಕ ಮಜೌಲಿ ಕೇವಲ ಒಂದು ಪ್ರವಾಸಿ ಸ್ಥಳವಲ್ಲ, ಬದಲಿಗೆ ಪ್ರವಾಸಿ ಪ್ರಿಯರಿಗೆ ಮನಮೋಹಕ ಅನುಭವ. ವೈವಿಧ್ಯ ಅಸ್ಸಾಂ ಸಂಸ್ಕೃತಿ, ಬಿದಿರು ಮನೆಗಳು, ಸತ್ರಾಸ್ (ಸನ್ಯಾಸಿಗಳ ವಾಸಸ್ಥಳ) ಮತ್ತು ನಿಮ್ಮನ್ನು ಆಧ್ಯಾತ್ಮ ಲೋಕಕ್ಕೆ ಕರೆದೊಯ್ಯುವಂತಹ ಬ್ರಹ್ಮಪುತ್ರ ನದಿಯಲ್ಲಿನ ಮನೊಹರ ಸೂರ್ಯಾಸ್ತ...ಇವೆಲ್ಲವೂ ನಿಮ್ಮ ಮನಸ್ಸಿಗೆ ಮುದ ನೀಡುವ, ಶಾಂತತೆಯ ಅನುಭವವನ್ನು ನಿಮಗೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಧೋಲಾವೀರಾ, ಗುಜರಾತ್ – ಭಾರತದ ಪ್ರಾಚೀನ ನಗರಕ್ಕೆ ಸ್ವಾಗತ
ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ಸ್ಥಾನವನ್ನು ಪಡೆದಿರುವ ಧೊಲಾವೀರಾಕ್ಕೆ ನೀವೊಮ್ಮೆ ಭೇಟಿ ನೀಡಿದಲ್ಲಿ, ಅದು ನಿಮ್ಮನ್ನು 4,500 ವರ್ಷಗಳಷ್ಟು ಹಿಂದಿನ ಸಿಂಧೂ ನದಿ ನಾಗರಿಕತೆಗೆ ಕರೆದೊಯ್ಯುವುದು ನಿಶ್ಚಿತ. ಪ್ರಾಚೀನ ನಗರದ ಬೀದಿಗಳು, ಜಲಾಶಯಗಳು ಮತ್ತು ಇಲ್ಲಿನ ಸಂರಚನೆಗಳು ನಿಮಗೆ ಭಾರತದ ಸಮೃದ್ಧ ಪ್ರಾಚೀನತೆಯ ಟ್ರೈಲರನ್ನು ತೋರಿಸುವುದು ಖಂಡಿತ.
ವರ್ಕಳ, ಕೇರಳ – ಸ್ವರ್ಗಕ್ಕೆ ಮೂರೇ ಗೇಣು
ಗೋವಾದಲ್ಲಿರುವ ಮನಮೋಹಕ ಬೀಚ್‌ಗಳನ್ನು ಮೀರಿಸುವ ಸುಂದರ, ರುದ್ರ ರಮಣೀಯ ಬೀಚ್‌ಗಳು ಇರುವ ಸ್ಥಳವೇ ದೇವರ ನಾಡಾಗಿರುವ ಕೇರಳದ ವರ್ಕಳದಲ್ಲಿರುವ ಸುಂದರ ಕಡಲ ಕಿನಾರೆಗಳು. ಯೋಗ ಚಿಕಿತ್ಸೆ ಮತ್ತು ಆಯುರ್ವೇದಿಕ್ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಸ್ಥಳವೂ ಇದಾಗಿದೆ. ವರ್ಷಾಂತ್ಯಕ್ಕೆ ನಿಮ್ಮ ಮೈ-ಮನವನ್ನು ರಿಫ್ರೆಶ್ ಮಾಡಿಕೊಂಡು ಹೊಸ ವರ್ಷವನ್ನು ನವೋತ್ಸಾಹದಿಂದ ಬರಮಾಡಿಕೊಳ್ಳಲು ಇದೊಂದು ಪರ್ಫೆಕ್ಟ್ ಟೂರಿಂಗ್ ಪ್ಲೇಸ್ ಆಗಿದೆ.
ಪೊನ್ ಮುಡಿ, ಕೇರಳ – ದಕ್ಷಿಣದ ಸ್ವರ್ಣ ಶಿಖರ
ಗಾಳಿಯೊಡನೆ ಸಾಗುವ ಅನುಭವ ನೀಡುವ ದಾರಿಗಳು, ಮೇಘಾಚ್ಛಾದಿತ ವ್ಯೂ ಪಾಯಿಂಟ್ ಮತ್ತು ಸುತ್ತಲೂ ಸಮೃದ್ಧ ಹಸಿರು ತುಂಬಿರುವ ಹಿಲ್ ಸ್ಟೇಷನ್‌ಗಳಲ್ಲಿ ಒಂದಾಗಿರುವ ಪೊನ್ ಮುಡಿ ನಿಮ್ಮ ಮನಸ್ಸನ್ನು ಹಸಿರಾಗಿಸುವ ಪರ್ಫೆಕ್ಟ್ ಸ್ಥಳಗಳಲ್ಲಿ ಒಂದಾಗಿದೆ.
ಸಂಡಾಕ್ಫು, ಪಶ್ಚಿಮ ಬಂಗಾಲ – ದಿ ಸ್ಲೀಪಿಂಗ್ ಬುದ್ಧ ಟ್ರೆಕ್!
ಟ್ರಕ್ಕಿಂಗ್ ಪ್ರಿಯರು ನೀವಾಗಿದ್ದಲ್ಲಿ, ಪಶ್ಚಿಮ ಬಂಗಾಲದಲ್ಲಿರುವ ಈ ರಣರೋಚಕ ಸ್ಥಳವನ್ನು ನೀವು ಮಿಸ್ ಮಾಡಿಕೊಳ್ಳುವಂತಿಲ್ಲ! ವಿಶ್ವದ ನಾಲ್ಕು ಅತೀ ಎತ್ತರದ ಶಿಖರಗಳಿರುವ ಸ್ಥಳವೂ ಹೌದಿದು – ಅವೇ ಎವರೆಸ್ಟ್, ಕಾಂಚನಜುಂಗಾ, ಲೋಟ್ಸೆ ಮತ್ತು ಮಕಾಲು. ಇಲ್ಲಿರುವ ಸುಂದರ ಹಿಮಾಲಯದ ಗ್ರಾಮಗಳು ನಿಮ್ಮ ಟ್ರೆಕ್ಕಿಂಗ್ ಅನುಭವಕ್ಕೊಂದು ಹೊಸ ಮುಕುಟವನ್ನು ನೀಡುವುದು ಶತಃಸಿದ್ಧ.
ವೆಲಾಸ್, ಮಹಾರಾಷ್ಟ್ರ – ಇದು ಆಮೆಗಳ ಗ್ರಾಮ
ವಿಶಿಷ್ಟ ಪರಿಸರ ಸ್ನೇಹಿ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ವೆಲಾಸ್, ತನ್ನ ಆಲಿವ್ ರಿಡ್ಲಿ ಆಮೆ ಉತ್ಸವಕ್ಕೆ ಹೆಸರುವಾಸಿ. ಮರಿ ಆಮೆಗಳು ತಮ್ಮ ಪುಟ್ಟ ಪಾದಗಳೊಂದಿಗೆ ಸಮುದ್ರ ಪಯಣಕ್ಕೆ ಅಡಿಯಿಡುವ ಸುಂದರ ದೃಶ್ಯವನ್ನು ಪರಿಸರ ಪ್ರಿಯರು ಮಿಸ್ ಮಾಡ್ಕೊಳ್ಳೋ ಚಾನ್ಸೇ ಇಲ್ಲ!
ಗೋಕರ್ಣ, ಕರ್ನಾಟಕ – ಆಧ್ಯಾತ್ಮ ಸಾಧಕರಿಗಾಗಿರುವ ನಿಶ್ಯಬ್ದ ಬೀಚ್‌ಗಳು
ಓಂ ಬೀಚ್, ಕುಡ್ಲೆ ಬೀಚ್ ಮತ್ತು ಪ್ಯಾರಡೈಸ್ ಬೀಚ್‌ಗಳಂತ ಕಡಲ ಕಿನಾರೆಗಳನ್ನು ಹೊಂದಿರುವ ಗೋಕರ್ಣ, ನಮ್ಮ ರಾಜ್ಯದಲ್ಲಿರುವ ಹೆಮ್ಮೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಎಲ್ಲ ಜಂಜಾಟಗಳಿಂದ ಮುಕ್ತವಾಗಿ ಒಂದಷ್ಟು ಕಾಲ ನಿಮ್ಮ ಆತ್ಮವನ್ನು ಆಧ್ಯಾತ್ಮದ ದಾರಿಯಲ್ಲಿ ಸಾಗಿಸ ಬಯಸುವವರಿಗೆ ಇದೊಂದು ಬೆಸ್ಟ್ ಇಯರ್ ಎಂಡ್ ಡೆಸ್ಟಿನೇಷನ್ ಎಂದರೆ ತಪ್ಪಾಗಲಾರದು.