ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀರು ಹರಿಸುವ ಮಾತೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗು

Zero water, zero talks: ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಗುಡುಗಿದೆ. ಪಾಕಿಸ್ತಾನವು ಭಾರತದ ವಿರುದ್ಧದ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಶೂನ್ಯ ನೀರು, ಶೂನ್ಯ ಮಾತುಕತೆ ಎಂದು ಹರೀಶ್ ಪರ್ವತನೇನಿ ಖಡಕ್ ಆಗಿ ತಿಳಿಸಿದ್ದಾರೆ. ಪಾಕಿಸ್ತಾನವು ಒಪ್ಪಂದಗಳಿಗಿಂತ ಮಾನವ ಜೀವನವನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಭಾರತ

ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ -

Priyanka P
Priyanka P Mar 20, 2026 8:29 PM

ನವದೆಹಲಿ, ಮಾ. 20: ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಬಲವಾದ ಸಂದೇಶ ನೀಡಿದೆ. ಪಾಕಿಸ್ತಾನವು (Pakistan) ಭಾರತ ವಿರುದ್ಧದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ನೀರು ಹರಿಸುವ ಮತ್ತು ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಹರೀಶ್ ಪರ್ವತನೇನಿ ತಿಳಿಸಿದ್ದಾರೆ. ವಿಶ್ವ ಜಲದಿನಾಚರಣೆ ಕಾರ್ಯಕ್ರಮದಲ್ಲಿ, ಯುಎನ್‌ನಲ್ಲಿರುವ (United Nations) ಶಾಶ್ವತ ಪ್ರತಿನಿಧಿ ಆಗಿರುವ ಹರೀಶ್ ಪರ್ವತನೇನಿ ಈ ಖಡಕ್ ಸಂದೇಶ ರವಾನಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ.

ಪಾಕಿಸ್ತಾನವು ಒಪ್ಪಂದಗಳಿಗಿಂತ ಮಾನವ ಜೀವನವನ್ನು ಆಯ್ಕೆ ಮಾಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಹರೀಶ್ ಪರ್ವತನೇನಿ ಹೇಳಿದ್ದಾರೆ. ಭಾರತವು 65 ವರ್ಷಗಳ ಹಿಂದೆ ಸಿಂಧೂ ನದಿ ಒಪ್ಪಂದವನ್ನು ಸದ್ಭಾವನೆ, ಸೌಹಾರ್ದತೆ ಮತ್ತು ಸ್ನೇಹಭಾವದಿಂದ ಕೈಗೊಂಡಿತ್ತು ಎಂದು ಅವರು ಒತ್ತಿ ಹೇಳಿದ್ದಾರೆ. ದಶಕಗಳಲ್ಲಿ ಪಾಕಿಸ್ತಾನವು ಒಪ್ಪಂದವನ್ನು ಪದೇ ಪದೆ ಉಲ್ಲಂಘಿಸಿದೆ. ಮೂರು ಯುದ್ಧಗಳನ್ನು ನಡೆಸಿದೆ ಮತ್ತು ಭಾರತೀಯ ನಾಗರಿಕರ ವಿರುದ್ಧ ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದೆ ಎಂದು ಭಾರತ ಹೇಳಿದೆ.

ಕೆಂಪು ಕೋಟೆ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ನಂಟು ಬಹಿರಂಗ: ಮಹಿಳಾ ಭಯೋತ್ಪಾದನೆಯ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ

ಯುಎನ್‌ನಲ್ಲಿ ಮಾತನಾಡಿದ ಹರೀಶ್ ಪಹಲ್ಗಾಂ ದಾಳಿಯ ಕುರಿತು ವಿವರವಾಗಿ ತಿಳಿಸಿದ್ದಾರೆ. ಭದ್ರತಾ ಸಂಸ್ಥೆಗಳ ತನಿಖೆಯಲ್ಲಿ, ದಾಳಿಯ ಹಿಂದೆ ಲಷ್ಕರ್-ಇ-ತೈಬಾ ಸಂಘಟನೆಯ ಕೈವಾಡವಿದ್ದು, ಇಂಟರ್ ಸರ್ವಿಸ್ ಇಂಟಲಿಜೆನ್ಸ್‌ನಿಂದ ನೇರ ಬೆಂಬಲ ಇದ್ದುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಭಾರತವು ದೀರ್ಘಕಾಲ ಸಹನೆ ಮತ್ತು ಉದಾರತೆಯನ್ನು ತೋರಿದರೂ ಪಾಕಿಸ್ತಾನದ ವರ್ತನೆ ಬದಲಾಗಲಿಲ್ಲ. ಆದ್ದರಿಂದ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತವು ಈ ಒಪ್ಪಂದವನ್ನು ಸ್ಥಗಿತಗೊಳಿಸಿರುವುದು ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದ್ದು, ಇದರಿಂದ ಪಾಕಿಸ್ತಾನಕ್ಕೆ ಬಲವಾದ ಹೊಡೆತ ಬೀಳಲಿದೆ. ಆರ್ಥಿಕ ಹಾಗೂ ಕೃಷಿಯ ಮೇಲೆ ಪರಿಣಾಮಗಳು ಬೀರಲಿದೆ. ಹಿಂದಿನ ರಾಜತಾಂತ್ರಿಕ ಅಥವಾ ಸೈನಿಕ ಕ್ರಮಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಹೇಳಿದ್ದಾರೆ.

ಒಪ್ಪಂದಗಳ ಬಗ್ಗೆ ಮಾತನಾಡುವ ಮೊದಲು ಪಾಕಿಸ್ತಾನವು ಮಾನವ ಜೀವನದ ಪಾವಿತ್ರ್ಯವನ್ನು ಕಾಪಾಡಬೇಕು. ಜತೆಗೆ, ಪಾಕಿಸ್ತಾನವು ತನ್ನ ರಾಜಕೀಯ ನೀತಿಯ ಭಾಗವಾಗಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಭಾರತ ಒತ್ತಿ ಹೇಳಿದೆ.