P Chandrika Column: ಮರೆತುಹೋದ ಮಹಾನುಭಾವರು ರಾಗಿ ಲಕ್ಷ್ಮಣಯ್ಯ
‘ನಿಮ್ಮ ವೆಬ್‌ಸೈಟ್‌ನಲ್ಲಿ ಒಂದು ಲೋಪವಿದೆ; ಅದನ್ನು ತಿದ್ದಿಕೊಂಡರೆ ಮಾತ್ರ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ’ ಎಂದಿ ದ್ದರು! ಅಲ್ಲಿಗೆ ಹೋದವರಿಗೆ ಅಚ್ಚರಿ ‘ಯಾವ ಲೋಪ ನಮ್ಮಲ್ಲಿದೆ?’ ಎಂದು ಮಾತಾಡಿ ಕೊಳ್ಳುವಾಗ ಕಲಾಂ ಅವರು ‘ನಿಮ್ಮ ವೆಬ್‌ಸೈಟ್‌ನಲ್ಲಿ ರಾಗಿ ಲಕ್ಷ್ಮಣಯ್ಯ ಅವರ ಬಗ್ಗೆ ವಿವರಗಳು ಯಾಕಿಲ್ಲ? ಅವರು ದೇಶಕ್ಕೆ ಅತ್ಯುನ್ನತ ಕೊಡುಗೆಯನ್ನು ರಾಗಿ ತಳಿಗಳ ಅಭಿವೃದ್ಧಿಯ ಮೂಲಕ ನೀಡಿದ ಪ್ರಾತಃ ಸ್ಮರಣೀಯರು. ಅವರ ಬಗ್ಗೆ ನಿಮ್ಮ ವೆಬ್‌ಸೈಟ್‌ನಲ್ಲಿ ಸೇರ್ಪಡೆ ಆದರೆ ಮಾತ್ರ ನಾನು ಕಾರ್ಯ ಕ್ರಮಕ್ಕೆ ಬರುತ್ತೇನೆ’ ಎಂದರಂತೆ

ರಾಗಿ

Source : Vishwavani Daily News Paper
ಪಿ.ಚಂದ್ರಿಕಾ
ಲಕ್ಷ್ಮಣಯ್ಯ ಎನ್ನುವ ರಾಗಿಯ ಮೋಹಿ, ರಾಗಿಯ ವಿವಿಧ ತಳಿಗಳ ಕುರಿತು ಸಂಶೋಧನೆ ಮತ್ತು ಕೆಲಸವನ್ನು ಮಾಡದೆ ಹೋಗಿದ್ದಿದ್ದರೆ, ಇವತ್ತು ರಾಗಿ ನಮಗೆ ಇಷ್ಟು ಸುಲಭಕ್ಕೆ ದೊರಕುತ್ತಲೂ ಇರಲಿಲ್ಲ. ಅದರ ಬಳಕೆಯ ಬಗ್ಗೆ ಪೋಷಕಾಂಶಗಳ ಬಗ್ಗೆ ನಮಗೆ ತಿಳುವಳಿ ಕೆಯೂ ಇರುತ್ತಿರಲಿಲ್ಲ. ರಾಗಿ ಎನ್ನುವ ತೃಣಧಾನ್ಯವು, ಅದರ ತ್ರಿವಿಕ್ರಮ ರೂಪದಲ್ಲಿ ಪ್ರಕಟ ವಾಗಲಿಕ್ಕೆ ಎಲ್ಲಾ ರೀತಿಯ ಶ್ರಮ ಹಾಕಿದ ಲಕ್ಷ್ಮಣಯ್ಯ ಈ ಹೊತ್ತು ಕೃಷಿ ಜಗತ್ತು ನಮಿಸು ತ್ತಿದೆ. ಅವರು ಇಂಡಾ- ತಳಿಯ ಜತೆ ಹಲವು ರಾಗಿಯ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಒಂದು ತಳಿಗೆ ಅವರ ಗೌರವಾರ್ಥ ಹೆಸರಿಡಲಾಗಿದೆ. ಜನಸಾಮಾನ್ಯ ರಿಗೆ ಇಂದು ಸುಲಭ ವಾಗಿ ರಾಗಿ ದೊರಕುವಲ್ಲಿ ಲಕ್ಷ್ಮಣಯ್ಯ ಅವರ ಪರಿಶ್ರಮ ಅಪಾರ; ಆದರೂ, ಅವರಿಗೆ ದೊರಕ ಬೇಕಾದ ಗೌರವ, ಮನ್ನಣೆ ದೊರಕಿಲ್ಲ ಎಂಬುದೂ ಒಂದು ಕಹಿ ಸತ್ಯ. ಪ್ರತಿ ದಿನ ರಾಗಿ ತಿನ್ನುವ ನಮ್ಮ ರಾಜ್ಯದ ಜನರು ಮರೆ ತಿರುವ ಮಹಾನುಭಾವರು ಇವರು ಎನ್ನಬಹುದು! ಗೋಧಿಯ ತಳಿಗಳಲ್ಲಿ ಸಂಶೋಧನೆ ಮಾಡಿದವ ರಿಗೆ ನೊಬೆಲ್ ಪ್ರಶಸ್ತಿ ದೊರಕಿದೆ; ಅದೇ ರೀತಿ ರಾಗಿಯ ತಳಿಗಳ ಕುರಿತು ಮೊದಲ ಬಾರಿ ವ್ಯಾಪಕ ವಾಗಿ ಸಂಶೋಧನೆ ಮಾಡಿದ ಲಕ್ಷ್ಮಣಯ್ಯ ಅವರಿಗೂ ಸೂಕ್ತ ಗೌರವ ದೊರಕಬೇಕಾಗಿತ್ತು; ಇನ್ನಾದರೂ ದೊರ ಕಲಿ ಎಂಬುದು ರಾಗಿ ಪ್ರಿಯರ ಹಾರೈಕೆ.
ಕೃಷಿ ವಿಶ್ವ ವಿದ್ಯಾಲಯದಿಂದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಕಾರ್ಯ ಕ್ರಮಕ್ಕೆ ಕರೆಯಲು ಒಂದು ತಂಡ ದೆಹಲಿಗೆ ಹೋಗಿದ್ದರಂತೆ.
ಕೃಷಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ನ್ನು ನೋಡಿದ ಕಲಾಂ ಅವರು, ‘ನಿಮ್ಮ ವೆಬ್‌ಸೈಟ್‌ನಲ್ಲಿ ಒಂದು ಲೋಪವಿದೆ; ಅದನ್ನು ತಿದ್ದಿಕೊಂಡರೆ ಮಾತ್ರ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ’ ಎಂದಿ ದ್ದರು! ಅಲ್ಲಿಗೆ ಹೋದವರಿಗೆ ಅಚ್ಚರಿ ‘ಯಾವ ಲೋಪ ನಮ್ಮಲ್ಲಿದೆ?’ ಎಂದು ಮಾತಾಡಿಕೊಳ್ಳುವಾಗ ಕಲಾಂ ಅವರು ‘ನಿಮ್ಮ ವೆಬ್‌ಸೈಟ್‌ನಲ್ಲಿ ರಾಗಿ ಲಕ್ಷ್ಮಣಯ್ಯ ಅವರ ಬಗ್ಗೆ ವಿವರಗಳು ಯಾಕಿಲ್ಲ? ಅವರು ದೇಶಕ್ಕೆ ಅತ್ಯುನ್ನತ ಕೊಡುಗೆಯನ್ನು ರಾಗಿ ತಳಿಗಳ ಅಭಿವೃದ್ಧಿಯ ಮೂಲಕ ನೀಡಿದ ಪ್ರಾತಃ ಸ್ಮರಣೀಯರು. ಅವರ ಬಗ್ಗೆ ನಿಮ್ಮ ವೆಬ್‌ಸೈಟ್‌ನಲ್ಲಿ ಸೇರ್ಪಡೆ ಆದರೆ ಮಾತ್ರ ನಾನು ಕಾರ್ಯ ಕ್ರಮಕ್ಕೆ ಬರುತ್ತೇನೆ’ ಎಂದರಂತೆ.
ಅವರ ಮಾತನ್ನು ಕೇಳಿದ ಕೃಷಿ ವಿಜ್ಞಾನಿಗಳು ಬೆಂಗಳೂರಿಗೆ ಬಂದ ತಕ್ಷಣ ಕೃಷಿ ವಿವಿಯ ವೆಬ್ ಸೈಟ್‌ನಲ್ಲಿ ಲಕ್ಷ್ಮಣಯ್ಯ ನವರ ಬಗ್ಗೆ ವಿವರಗಳನ್ನು ಸೇರಿಸಿದ್ದರಂತೆ. ವಿಷಯ ತಿಳಿದ ಅಬ್ದುಲ್ ಕಲಾಂ ತುಂಬ ಖುಷಿಪಟ್ಟರು.
ಒಂದು ಕಾಲಕ್ಕೆ ನೆಲಮಂಗಲದಲ್ಲಿ ಬೆಳೆಯುತ್ತಿದ್ದ ರಾಗಿ ಇಡೀ ಮೈಸೂರು ಸಂಸ್ಥಾನಕ್ಕೆ ಸಾಕಾಗು ತ್ತಿತ್ತು. ಅಂಥಾ ಫಸಲು ಬರುತ್ತಿತ್ತು. ಜನಸಂಖ್ಯಾ ಸ್ಪೋಟದ ಹಿನ್ನೆಲೆಯಲ್ಲಿ ಧಾನ್ಯ ಬೆಳೆಯುವ ಪ್ರಮಾಣ ಅನಿವಾರ್ಯವಾಗಿ ಹೆಚ್ಚಾಯಿತು. ಅಕ್ಕಿ, ಗೋಧಿಗಳನ್ನು ಇಟ್ಟುಕೊಂಡು ಅನೇಕ ಪ್ರಯೋಗಗಳು ನಡೆಯುತ್ತಿತ್ತಾದರೂ, ರಾಗಿಯ ಬಗ್ಗೆ ವಿಶೇಷವಾದ ಅಧ್ಯಯನ, ತಳಿಗಳ ಅಭಿವೃದ್ಧಿ ಯ ಕಾರ್ಯ ನಡೆದಿರಲಿಲ್ಲ.
ಇದಕ್ಕೆ ಕಾರಣ ರಾಗಿಯ ಬಗ್ಗೆ ಇದ್ದ ಅವಜ್ಞೆ ಎಂದೇ ಹೇಳಬೇಕು. ರಾಗಿ ಲಕ್ಷ್ಮಣಯ್ಯನವರು ಈ ಕೆಲಸಕ್ಕೆ ಕೈ ಹಾಕದೇ ಹೋಗಿದ್ದಿದ್ದರೆ, ಇವತ್ತು ನಾವು ರಾಗಿಯ ಬೆಳೆಯಲ್ಲಿನ ಇಷ್ಟು ಫಸಲು ತೆಗೆ ಯಲು ಸಾಧ್ಯವೇ ಇರುತ್ತಿರಲಿಲ್ಲ.
ರಾಗಿಯನ್ನು ಪುರಾತನ ಕಾಲದಿಂದ ಬೆಳೆಯುತ್ತಾ ಬಂದಿದ್ದರೂ, ತಳಿಯ ಅಭಿವೃದ್ಧಿಗಾಗಿ ಹೆಚ್ಚಿನ ಆಸಕ್ತಿ ತೋರದಿದ್ದದ್ದರಿಂದ, ನೈಸರ್ಗಿಕವಾಗಿ ಹೊಂದಿಕೊಂಡು ಬೆಳೆಯಬಲ್ಲ ಈ ಬೆಳೆ ಒಂದು ಪೌಷ್ಠಿಕವಾದ ಧಾನ್ಯ ಎನ್ನುವುದನ್ನು ಮನಗಾಣದೇ ಹೋಗಿದ್ದರು. ರಾಗಿಯಲ್ಲಿ ಪೌಷ್ಠಿಕಾಂಶಗಳ ಪಟ್ಟಿಯನ್ನು ನೋಡಿದರೆ ಇದು ನಮಗೆ ಮನನವಾಗುತ್ತದೆ.
ಕರ್ನಾಟಕದಲ್ಲಿ 1913ರಿಂದ 1950ರ ವರೆಗೆ ಸುಮಾರು 37 ವರ್ಷಗಳ ಕಾಲ ರಾಗಿಯ ತಳಿಗಳ ಸಂಶೋಧನೆಯ ನಿಟ್ಟಿನಲ್ಲಿ ಯಾವ ರೀತಿಯ ಅಭಿವೃದ್ಧಿಯೂ ಕಾಣಲಿಲ್ಲ. 1950ರಲ್ಲಿ, ಅದೂ ರಾಗಿ ಲಕ್ಷ್ಮಣಯ್ಯನವರಿಂದಾಗಿ ರಾಗಿ ಪುನರುಜ್ಜೀವನವನ್ನು ಪಡೆಯಿತು. 1949ರಲ್ಲಿ ಅವರು ಬೀರೂರಿನ ಬೀಜೋತ್ಪಾದನಾ ಕೇಂದ್ರದಿಂದ ವರ್ಗಾವಣೆಯಾಗಿ ಮಂಡ್ಯದ ವಿಶ್ವೇಶ್ವರಯ್ಯ ನಾಲಾ ಕ್ಷೇತ್ರಕ್ಕೆ (ವಿ.ಸಿ. ಫಾರಂ)ಗೆ ಬಂದರು. ಉತ್ತಮ ರಾಗಿಯ ತಳಿಯನ್ನು ಅಭಿವೃದ್ಧಿಪಡಿಸಲು ನಿಸ್ವಾರ್ಥವಾಗಿ ದುಡಿದು ಮಾನವ ಜನಾಂಗದ ಹಸಿವಿನ ಸ್ಥಿತಿಗೆ ಉತ್ತರವನ್ನು ಹುಡುಕಿದರು.
ಅದನ್ನು ಬೆಳೆಗಾರರಿಗೆ ತಲುಪಿಸಿ ಹೆಚ್ಚು ಇಳುವರಿಯ ಮೂಲಕ ಆಹಾರ ಉತ್ಪಾದಕ ಶಕ್ತಿಯನ್ನು ಮೇಲಕ್ಕೆತ್ತಿ, ಕರ್ನಾಟಕವನ್ನು, ಭಾರತ ದಲ್ಲೇ ರಾಗಿ ಬೆಳೆಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದರು.
ರಾಗಿ ಆಯುವ ಕುಟುಂಬ
ಬಡ ದಲಿತ ಕುಟುಂಬವೊಂದರಲ್ಲಿ ಹುಟ್ಟಿದ ಲಕ್ಷ್ಮಣಯ್ಯನವರು, ತಮ್ಮ ಸುತ್ತಲೂ ಹರಡಿದ್ದ ರಾಗಿ ಯ ಹೊಲವನ್ನು ನೋಡುತ್ತಲೇ ಬೆಳೆದರು. ಬಡತನದ ಕಾರಣಕ್ಕೆ ತಾಯಿಯವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ರಾಗಿಯ ತೆನೆಯನ್ನು ಆಯುವ ಕೆಲಸಕ್ಕೆ ಮಕ್ಕಳಾಗಿದ್ದ ಲಕ್ಷ್ಮಣಯ್ಯನವರು ಹಾಗೂ ಅವರ ತಮ್ಮ ಇಬ್ಬರೂ ಹೋಗುತ್ತಿದ್ದರು. ಆ ಕಾಲಕ್ಕೆ ದಲಿತರಿಗೆ ಭೂಮಿಯ ಕನಸಲ್ಲ, ಹೆಸರನ್ನು ಹೇಳುವುದೂ ಅಸಾಧ್ಯದ ಮಾತಾಗಿತ್ತು. ಅಂಥಾ ಹೊತ್ತಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ
ಸಲುವಾಗಿ ರಾಗಿಯನ್ನು ಆಯುವ ಕೆಲಸ ಮಾಡುತ್ತಿದ್ದರು. ಮೈಸೂರಿನ ಹಾರೋಹಳ್ಳಿಯಲ್ಲಿ ಹುಟ್ಟಿದ ಲಕ್ಷ್ಮಣಯ್ಯನವರ ತಂದೆ ಚೋಟಯ್ಯ, ತಾಯಿ ಚನ್ನಮ್ಮ. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮಹಾರಾಜಾ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಪಾಸಾದರು.
ನಂತರ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಅವರು, ಭಾರತೀಯ ರೈಲ್ವೇ ಇಲಾಖೆಯಲ್ಲಿ ಮಾಡುತ್ತಿದ್ದ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಬೀರೂರಿನಲ್ಲಿದ್ದ ರಾಜ್ಯ ಕೃಷಿ ಇಲಾಖೆಯ ಬೀಜೋ ತ್ಪಾದನಾ ಕೇಂದ್ರದಲ್ಲಿ ವ್ಯವಸ್ಥಾಪಕ ಹುದ್ದೆಗೆ ಸೇರಿಕೊಂಡರು. ನಂತರ ಭತ್ತದ ತಳಿಗಳ ಮೇಲೆ ಸಂಶೋಧನಾ ಕೆಲಸವನ್ನು ಮಾಡಿದರೂ, ರಾಗಿಯ ಬಗ್ಗೆ ಅವರಿಗೆ ಇದ್ದ ಆಸಕ್ತಿ ಹೆಚ್ಚುತ್ತಲೇ ಹೋಯಿತು.
ಹಲವು ವರ್ಷಗಳ ಕಾಲ ಕೃಷಿ ವಿವಿಯಲ್ಲಿ ಕೆಲಸ ಮಾಡಿ 1982ರಲ್ಲಿ ಅಧಿಕೃತವಾಗಿ ನಿವೃತ್ತರಾದರು. ಆದರೆ, ಅವರ ರಾಗಿಯ ತಳಿಯ ಆವಿಷ್ಕರಣದ ಆಸಕ್ತಿಯಿಂದ ನಿವೃತ್ತಿಯಾಗಿರಲಿಲ್ಲ, ಬದಲಿ ಇನ್ನಷ್ಟು ಆಳದ ಬಂಧಕ್ಕೆ ಕಾರಣವಾಯಿತು. ಲಕ್ಷ್ಮಣಯ್ಯನವರು ಕೆಲಸಕ್ಕೆ ಸೇರಿದ ಹೊತ್ತಿನಲ್ಲಿ
ರಾಗಿಗೆ ಯಾವುದೇ ಪ್ರಾಮುಖ್ಯತೆ ದೊರೆತಿರಲಿಲ್ಲ. ಅದರ ಬಗ್ಗೆ ಅಧ್ಯಯನದ ಮಾತಿರಲಿ, ಆ ಧಾನ್ಯ ವನ್ನೇ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ತಮ್ಮ ಬಡತನ, ಹಸಿವು, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆ ತಾನಾಗೇ ತಾಯಿ ತೆನೆಯನ್ನು ಆರಿಸಲು ಕಳಿಸುತ್ತಿದ್ದ ಕಾರಣ ಗಳು ರಾಗಿಯ ಜೊತೆಗೆ ಲಕ್ಷ್ಮಣಯ್ಯನವರಿಗೆ ಭಾವನಾತ್ಮಕ ನಂಟನ್ನು ಬೆಸೆದಿತ್ತು.
ಹೀಗೆ ರಾಗಿಯನ್ನು ತಮ್ಮದನ್ನಾಗಿಸಿಕೊಂಡ ಲಕ್ಷ್ಮಣಯ್ಯನವರು ಅದರ ಗುಣಧರ್ಮಗಳನ್ನು ಅರ್ಥ ಮಾಡಿಕೊಂಡಿದ್ದರು. ಸ್ವಕೀಯ ಪರಾಗಸ್ಪರ್ಷದ ಬೆಳೆಯ ಜೊತೆ ಹೊಸ ಪ್ರಯೋಗಕ್ಕೆ ಇಳಿದರು. ಭೂಮಿಯೇ ಇಲ್ಲದಿದ್ದ ಲಕ್ಷ್ಮಣಯ್ಯನವರು ಕುಂಡಗಳಲ್ಲಿ ರಾಗಿಯನ್ನು ಬೆಳೆದು ತಮ್ಮ ಕನಸನ್ನು ನನಸು ಮಾಡಿಕೊಳ್ಳಬಯಸಿದ್ದರು. ಓದಿದ್ದು ಬಿಎಸ್ಸಿ ಪದವಿ. ಮಾಡುವ ಕೆಲಸ ಮಾತ್ರ ವಿಜ್ಞಾನಿ ಯದ್ದು.
ಇದು ಹೇಗೆ ಸಾಧ್ಯ? ಎನ್ನುವ ಅವಜ್ಞೆಯ ನಡುವೆಯೇ ಲಕ್ಷ್ಮಣಯ್ಯನವರ ಸಂಶೋಧನಾ ಕಾರ್ಯ ನಡೆಯುತ್ತಿತ್ತು. ಸ್ವಂತ ಆಸಕ್ತಿ ಮತ್ತು ಉತ್ಸಾಹಗಳು ಮಾತ್ರವೇ ಅವರ ಬಂಡವಾಳವಾಗಿತ್ತು.
ಪರಕೀಯ ಪರಾಗ ಸ್ಪರ್ಶ
ಲಕ್ಷ್ಮಣಯ್ಯ ಅವರ ಪದವಿಯ ಬಗ್ಗೆ ಅವಜ್ಞೆ ವ್ಯಕ್ತಪಡಿಸುವವರಿಗೆ ಅವರೊಳಗೆ ಹುದುಗಿದ್ದ ಈ ಇಚ್ಚಾಶಕ್ತಿಯ ನಿರೂಪ ಅರ್ಥವಾಗಲಿಲ್ಲ ಎನ್ನುವುದೂ ಅವರನ್ನು ಕಂಗೆಡಿಸಲಿಲ್ಲ. ನಿರಂತರ ಧ್ಯಾನದ ಹಾಗೆ, ರಾಗಿ ಎಂಬ ಧಾನ್ಯದ ಕುರಿತು ತಮ್ಮ ಕೆಲಸವನ್ನು ಮಾಡುತ್ತಲೇ ಹೋದರು. ಸ್ವಕೀಯ ಪರಾಗಸ್ಪರ್ಶದ ಈ ಧಾನ್ಯಕ್ಕೆ ಪರಕೀಯ ಪರಾಗ ಸ್ಪರ್ಶವನ್ನು ಮಾಡಿ, ಎರಡು ಬಗೆಯ ತಳಿಗಳ ಸಂಕರದಿಂದ ಹೊಸತಳಿಯನ್ನು ತಂದರು.
ಇದು ಸಾಧ್ಯವಾಗುತ್ತದೆ ಎನ್ನುವುದು ಅವರ ಅರಿವಿಗೆ ಬಂದ ತಕ್ಷಣ, ಅವರು‘ಇಂಡಾ-’ ರಾಗಿ ತಳಿಯ ಪ್ರಯೋಗಕ್ಕೆ ಅನುವಾದರು. ಪದವಿಯಿಲ್ಲದೆ, ಸಂಶೋಧನಾ ಸಾಮಗ್ರಿಗಳಿಲ್ಲದೆ, ಸಹಾಯಕರಿಲ್ಲದೆ, ನಿರಂತರ ಟೀಕೆಯನ್ನು ಎದುರಿಸುತ್ತಾ ಯಾರಿಗೂ ಬೇಡವಾದ ಈ ಕಪ್ಪು ಧಾನ್ಯವನ್ನು ಕನಸಿದವರು ಲಕ್ಷ್ಮಣಯ್ಯ.
ಹೀಗೆ ಹೊಸ ದಾರಿಯೊಂದು ಗೋಚರಿಸಿದ ತಕ್ಷಣ ಅವರಲ್ಲಿ ಉತ್ಸಾಹ ಮೂಡಿತು. ಬಿ. ರಾಚಯ್ಯ ನವರು ಮಂಡ್ಯದ ವಿ.ಸಿ. ಫಾರಂನಲ್ಲಿ ಅವರ ಈ ಪರಿಶ್ರಮವನ್ನು ಕಣ್ಣಾರೆ ಕಂಡಿದ್ದರಿಂದಲೋ ಏನೋ ಲಕ್ಷ್ಮಣಯ್ಯ ನವರ ಪ್ರಯೋಗಕ್ಕೆ ಬೆಂಬಲ ಸೂಚಿಸುವ ಹಾಗೆ, ಅವರಿಗೆ ಒಂದು ಪ್ರತ್ಯೇಕ ಶೆಡ್ ಮತ್ತು ಸಹಾಯಕರನ್ನು ಒದಗಿಸುವಂತೆ ಹೇಳಿದ್ದರು. ಇಂಡಾಫ್ ತಳಿ ಅಭಿವೃದ್ದಿ ರಾಗಿಯ ಮೂಲತಳಿಯ ಹುಡುಕಾಟದಲ್ಲಿದ್ದ ಲಕ್ಷ್ಮಣಯ್ಯನವರಿಗೆ, ರಾಗಿಯ ಮೂಲ ಆಫ್ರಿಕಾ ಎಂದು ಹೊಳೆದ ತಕ್ಷಣ ಅವರು ಆಫ್ರಿಕಾದ ಮೂಲತಳಿಯ ಜೊತೆ ಪ್ರಯೋಗಕ್ಕಿಳಿದರು.
ಅಲ್ಲಿಂದಲೇ ಬೀಜಗಳನ್ನು ತರಿಸಿ, 1964ರಲ್ಲಿ ಎರಡು ತಳಿಗಳನ್ನು ಸಂಕರಗೊಳಿಸುವುದರ ಮೂಲಕ ‘ಇಂಡಾ-’ ಎನ್ನುವ ತಳಿಯನ್ನು ಬಿಡುಗಡೆ ಮಾಡಿದರು. ಭಾರತದ ‘ಕಡ್ಡಿಮುರುಕ’ ರಾಗಿಗೆ ಆಫ್ರಿಕಾದ ರಾಗಿಯನ್ನು ಸಂಕರಗೊಳಿಸಿ ಹೆಚ್ಚು ಇಳುವರಿ ಕೊಡುವ ರಾಗಿಯನ್ನು ರೈತರಿಗೆ ಕೊಟ್ಟರು. ಅಲ್ಲಿಂದ ಮುಂದಕ್ಕೆ ಪ್ರಯೋಗದ ಮೇಲೆ ಪ್ರಯೋಗವನ್ನು ಮಾಡಿದ ಲಕ್ಷ್ಮಣಯ್ಯನವರು ಸಾಲು ಸಾಲಾಗಿ ಹೆಚ್ಚಿನ ಇಳುವರಿ ಕೊಡುವ ರಾಗಿಯ ತಳಿಗಳನ್ನು ಬಿಡುಗಡೆಗೊಳಿಸುತ್ತಲೇ ಬಂದರು.
ಅಷ್ಟರವರೆಗೆ ಎಕರೆಗೆ ಎರಡರಿಂದ ಮೂರು ಕ್ವಿಂಟಾಲ್ ಬೆಳೆಯುತ್ತಿದ್ದವರು, ಹೊಸ ತಳಿಯಿಂದಾಗಿ 15-20 ಕ್ವಿಂಟಾಲ್ ಬೆಳೆಯಲು ಸಾಧ್ಯವಾಯಿತು. ಈಗ ನೀರಾವರಿಯಲ್ಲಾದರೆ 25-30 ಕ್ವಿಂಟಾಲ್ ಕೂಡ ಬೆಳೆದು ತೋರಿಸಿದ ರೈತರಿದ್ದಾರೆ. 1951-64ರ ವರೆಗೆ ಅರುಣಾ, ಉದಯ, ಅನ್ನಪೂರ್ಣ, ಪೂರ್ಣ, ಕಾವೇರಿ, ಶಕ್ತಿ ಮುಂತಾದ ದೇಶೀಯ ತಳಿಗಳನ್ನು ಪರಿಚಯಿಸಿ ರಾಗಿಯ ಬೆಳೆಯಲ್ಲಿ ಶೇ. 50 ರಷ್ಟು ಹೆಚ್ಚಳವನ್ನು ಮಾಡಿದ್ದ ಲಕ್ಷ್ಮಣಯ್ಯನವರು ವಿವಿಧ ಹವಾಮಾನಕ್ಕೆ ಹೊಂದಿಕೊಳ್ಳುವ ಇಂಡಾಫ್ ತಳಿಗಳನ್ನು ಬಿಡುಗಡೆಗೊಳಿಸಿದರು.
ಈ ಸಂಕರ ತಳಿಗಳ ಕಾರಣಕ್ಕೆ ಮಹತ್ ಕ್ರಾಂತಿ ಆಗಿ ರಾಗಿಯ ಇತಿಹಾಸದ ಮಜಲುಗಳನ್ನೇ ಬದಲಿ ಸಿತು. ಇಷ್ಟಾಗಿಯೂ ಲಕ್ಷ್ಮಣಯ್ಯನವರು ಟೀಕೆಯನ್ನು ಎದುರಿಸದೇ ಹೋಗಲಿಲ್ಲ. ಇದು ಹೈಬ್ರೀಡ್, ಇದಕ್ಕೆ ರುಚಿಯಿಲ್ಲ ಎನ್ನುವ ಮಾತು ಗಳನ್ನು ಅವರು ಕೇಳಬೇಕಾಯಿತು. ಆದರೆ ಇದ್ಯಾವುದೂ ಅವರನ್ನು ಕಂಗೆಡಿಸಲಿಲ್ಲ ಮತ್ತು ಅದೆಲ್ಲವೂ ಸುಳ್ಳುಸುದ್ದಿ ಎನ್ನುವುದನ್ನು ರೈತರೇ ಪ್ರಮಾಣಿಸಿ ದರು. ಅವರಿಗೆ ಸಹಾಯಕರಿರಲಿಲ್ಲ. ಆದರೆ ರೈತರು ಅವರಿಗೆ ತಮ್ಮ ಬೆಳೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತಾ ಅವರ ಸಂಶೋಧನೆಯನ್ನು ಪೂರ್ಣಗೊಳಿಸುತ್ತಿದ್ದರು.
ಈಗ ಲಕ್ಷ್ಮಣಯ್ಯ ನವರ ಗೌರವಾರ್ಥ ಎಲ್-5 ಎಂದು ಒಂದು ರಾಗಿ ತಳಿಗೆ ಹೆಸರಿಡಲಾಗಿದೆ. ಆದರೆ ಈ ರೀತಿ ಒಂದು ಅಕ್ಷರದ ಬದಲು, ಆ ರಾಗಿ ತಳಿಗೆ ‘ಲಕ್ಷ್ಮಣಯ್ಯ -5’ ಎಂತಲೇ ಹೆಸರಿಡಬಹುದಿತ್ತಲ್ಲ? ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಅವರು ತಮ್ಮ ಜೀವಿತಾವಽಯಲ್ಲೇ ಎದುರಿಸಿ ದ್ದರು ಎಂದು ಡಾ ಅ ಶೇಷಾದ್ರಿ ಅಯ್ಯರ್‌ರವರು ಹೇಳುತ್ತಾರೆ. ಇದು ಲಕ್ಷ್ಮಣಯ್ಯನವರಿಗೆ ಹಲವು ಸ್ತರಗಳಲ್ಲಿ ಆಗಿರುವ ಅನ್ಯಾಯವನ್ನು ಹೇಳುವಂಥಾ ಮಾತುಗಳೇ ಆಗಿವೆ.
ನೊಬೆಲ್ ಪುರಸ್ಕಾರಕ್ಕೆ ಅರ್ಹರು!
ಈ ದೇಶದ ದೊಡ್ಡ ದುರಂತ ಎಂದರೆ ಇದೇ. ಸೆಲೆಬ್ರಿಟಿಗಳ ಅಬ್ಬರದ ಮಧ್ಯದಲ್ಲಿ ನಿಜವಾಗಿ ಜನೋ ಪಯೋಗಿ ಕೆಲಸ ಮಾಡಿದ ಮಹಾನ್ ಜ್ಞಾನಿಗಳನ್ನು ಪಕ್ಕಕ್ಕೆ ಇಡುತ್ತಲೆ ಬಂದಿದೆ. ರಾಗಿಯ ಬಗ್ಗೆ ಅಪಾರವಾಗಿ ಕೆಲಸ ಮಾಡಿ ತಳಿಯನ್ನು ಅಭಿವೃದ್ಧಿಪಡಿಸಿದ ಲಕ್ಷ್ಮಣಯ್ಯ ನವರಿಗೆ ಯಾವುದೇ ಗಮನಾರ್ಹ ಪ್ರಶಸ್ತಿ, ಪುರಸ್ಕಾರಗಳನ್ನು ಸರ್ಕಾರ ಕೊಡಲಿಲ್ಲ. ಸಮಾಜದ ಮನ್ನಣೆಯೂ ಸಿಗಲಿಲ್ಲ.
ಜಾತಿಯೆನ್ನುವ ಅಂಧ ಕಣ್ಣುಗಳಿಗೆ ಪ್ರತಿಭೆಯ ಮಹಾಪೂರ ಕಾಣಲೇ ಇಲ್ಲ. ಯಾರಿಂದಲೂ ಮಾಡ ಲಾಗದ ರಾಗಿಯ ಅಭಿವೃದ್ಧಿಯನ್ನು ಮಾಡಿದ ಲಕ್ಷ್ಮಣಯ್ಯನವರ ಸಾಧನೆಯನ್ನು ಅವರು ಬದುಕಿ ದ್ದಾಗಲೂ, ಸತ್ತ ನಂತರವೂ ಗುರುತಿಸಲೇ ಇಲ್ಲ. ರಾಗಿಯ ಕ್ರಾಂತಿಯ ಹರಿಕಾರರಾದ ಇವರಿಗೆ ನೊಬೆಲ್ ಬಹುಮಾನ ಬರಬೇಕಿತ್ತು. ಆದರೆ ವಿಪರ್ಯಾಸ ಎಂದರೆ ಬಿಳಿ ಬಣ್ಣದ ಗೋಧಿಯನ್ನು ಕುರಿತಾಗಿ ಸಂಶೋಧನೆ ನಡೆಸಿದ ತಳಿ ವಿಜ್ಞಾನಿ ನಾರ್ಮನ್ ಬೊರ್ಲಾಗ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು.
ವಿದೇಶಕ್ಕೆ ಹೋಗಲಿಲ್ಲ!
ಇಷ್ಟೆಲ್ಲಾ ತಳಿಗಳನ್ನು ತರಲು ನಿಮಗೆ ಹೇಗೆ ಸಾಧ್ಯವಾಯಿತು? ಎಂದು ಲಕ್ಷ್ಮಣಯ್ಯನವರನ್ನು
ಕೇಳಿದರೆ ಅವರು ಹೇಳುತ್ತಿದ್ದ ಮಾತು ‘ನಾನು ಯಾರ ಮೇಲೂ ಅವಲಂಬಿತನಾಗಿಲ್ಲ’ ಎನ್ನುವುದು. ಇವರ ಈ ಬದ್ಧತೆಯನ್ನು ಗುರುತಿಸಿ ಒಮ್ಮೆ ಅವರಿಗೆ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಯೂನಿ ವರ್ಸಿಟಿಯಿಂದ ಕರೆ ಬಂತು.
ರಾಗಿಯಲ್ಲದ ಇನ್ನೊಂದು ಧಾನ್ಯವನ್ನು ಕುರಿತ ಸಂಶೋಧನಾವಕಾಶ ಅದಾಗಿತ್ತು. ಆದರೆ ಲಕ್ಷ್ಮಣ ಯ್ಯ ಅವಕಾಶದ ಹಿಂದೆ ಹೋಗಲಿಲ್ಲ, ಪ್ರಶಸ್ತಿಗಾಗಿ ಹಾತೊರೆಯಲಿಲ್ಲ. ‘ನಾನು ರಾಗಿಯನ್ನು ಬಿಟ್ಟು ಬೇರೆ ಬೆಳೆಯ ಬಗ್ಗೆ ಅಧ್ಯಯನ ಮಾಡಲಾರೆ’ ಎನ್ನುವ ಕಠೋರವಾದ ಬದ್ಧತೆಯನ್ನು ಮೆರೆದರು. ತಮ್ಮ ಗುರಿ ಏನಿದ್ದರೂ ರಾಗಿ ಮಾತ್ರವೇ. ಅದೇ ಪ್ರಶಸ್ತಿ, ಅದೇ ಪದಕ ಎಲ್ಲವೂ ಎಂದು ಅವರು ತೀರ್ಮಾನ ಮಾಡಿಬಿಟ್ಟಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಅವರಿಗೆ ಮೇಲಧಿಕಾರಿಯಾಗಿ ಬಡ್ತಿ ಬಂದಾಗಲೂ ಅವರು ತಾನು ರಾಗಿ ಸಂಶೋಧನೆಯಲ್ಲಿ ಇರುವ ಹಂಬಲ ವ್ಯಕ್ತಪಡಿಸಿ ಅದನ್ನೂ ತಿರಸ್ಕರಿಸಿದ್ದರು. ಭವಿಷ್ಯದ ಧಾನ್ಯ ರಾಗಿ ಎನ್ನುವುದನ್ನು ಮನಗಂಡಿದ್ದ ಅವರು, ತೆನೆಗೆ ಬರುವ ಕುತ್ತಿಗೆ ರೋಗ, ಇಳುಕಲು ಒಣಗಿ ಹೋಗುವುದು, ತೆನೆಯ ಇಳುಕಲುಗಳ ಸಂಖ್ಯೆ ಕಡಿಮೆಯಾಗು ವುದು, ಜೊಳ್ಳಾಗುವುದು, ಸೀಕಲು ಕಾಳು, ರಾಗಿಯ ಗಾತ್ರದಲ್ಲಿ ಕಡಿಮೆಯಾಗುವುದು ಹೀಗೆ ಹತ್ತು ಹಲವು ಸಂಗತಿಗಳನ್ನು ಗಮನ ದಲ್ಲಿಟ್ಟುಕೊಂಡು, ಅದರ ಮೂಲಗುಣ ಕೆಡದ ಹಾಗೆ ರಾಗಿಯನ್ನು ಅಭಿವೃದ್ಧಿಗೊಳಿಸಿದರು.
ಲಕ್ಷ್ಮಣಯ್ಯ ನವರಿಗೆ ರಾಗಿಯ ಸ್ವಭಾವ ವರ್ತನೆಗಳ ಆಳವಾದ ಅಧ್ಯಯನ ಇದ್ದುದ್ದರಿಂದ ಇದು ಸಾಧ್ಯವಾಯಿತು. ಹೀಗೆ ರಾಗಿಯ ಸಂಶೋಧನೆಯಲ್ಲಿ ಆರಂಭವಾದ ಅವರ ಪಯಣ ರಾಗಿಯ ಧ್ಯಾನದಲ್ಲೇ ಕೊನೆಯಾಗುತ್ತದೆ. ಅವರ ಸಂಸ್ಕಾರದ ಹೊತ್ತಿನಲ್ಲಿ ಅವರ ಎದೆಯ ಮೇಲೆ ಹಿಡಿ ರಾಗಿಯನ್ನು ಹಾಕಿ ಅಂತಿಮ ವಿಧಿಯನ್ನು ನೆರವೇರಿಸಲಾಗುತ್ತದೆ. ಇದು ಲಕ್ಷ್ಮಣಯ್ಯನವರಿಗಿದ್ದ ರಾಗಿಯ ಬಗೆಗಿನ ಬದ್ಧತೆ. ಲಕ್ಷ್ಮಣಯ್ಯ ಎನ್ನುವ ರಾಗಿಯ ಮೋಹಿ ಇಷ್ಟು ಕೆಲಸವನ್ನು ಮಾಡದೆ ಹೋಗಿದ್ದಿದ್ದರೆ ಇವತ್ತು ರಾಗಿ ನಮಗೆ ಇಷ್ಟು ಸುಲಭಕ್ಕೆ ದೊರಕುತ್ತಲೂ ಇರಲಿಲ್ಲ.
ಅದರ ಬಳಕೆಯ ಬಗ್ಗೆ ಪೋಷಕಾಂಶಗಳ ಬಗ್ಗೆ ನಮಗೆ ತಿಳುವಳಿಕೆಯೂ ಇರುತ್ತಿರಲಿಲ್ಲ. ರಾಗಿ ಎನ್ನುವ ತೃಣಧಾನ್ಯವು, ಅದರ ತ್ರಿವಿಕ್ರಮ ರೂಪದಲ್ಲಿ ಪ್ರಕಟವಾಗಲಿಕ್ಕೆ ಎಲ್ಲಾ ರೀತಿಯ ಶ್ರಮ ಹಾಕಿದ ಲಕ್ಷ್ಮಣಯ್ಯ ಈ ಹೊತ್ತು ಕೃಷಿ ಜಗತ್ತು ನಮಿಸುತ್ತಿದೆ: ಅದೂ ರಾಗಿಯ ಹೆಸರಿನ ಜೊತೆಗೆ.
(ಇತ್ತೀಚೆಗೆ ಪ್ರಕಟಗೊಂಡ ‘ರಾಗಿ ತಂದೇವಾ’ ಪುಸ್ತಕದ ಒಂದು ಅಧ್ಯಾಯ.)
ಸಂಶೋಧನೆಗಾಗಿ ತರಿಸಿದ ಆಫ್ರಿಕಾ ತಳಿ
ಕಿರಿಯ ವಿಜ್ಞಾನಿಯಾಗಿದ್ದ ಇವರು ತಮ್ಮ ತೀವ್ರವಾದ ಆಸಕ್ತಿ, ಅಪರಿಮಿತವಾದ ಶ್ರದ್ಧೆಯಿಂದ ರಾಗಿ ಎನ್ನುವ ಅದ್ಭುತ ಜಗತ್ತನ್ನು ತಮ್ಮದಾಗಿಸಿಕೊಳ್ಳಲು ಮುಂದಾದರು. ಆಫ್ರಿಕಾದಿಂದ ತರಿಸಿದ 900 ತಳಿಗಳನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡ ಲಕ್ಷ್ಮಣಯ್ಯ ತಳಿಗಳನ್ನು ಅಭಿವೃದ್ಧಿಗೊಳಿಸುತ್ತಾ ಹೋದರು. ಅವರ ಈ ಕೆಲಸವೇ ಇಂದು ರಾಗಿ ಜಗತ್ತಿನಲ್ಲಿ ಸಂಚಲನ ಮೂಡಿಸಿ, ಅವಜ್ಞೆಗೆ ಗುರಿ ಯಾದ ಧಾನ್ಯವನ್ನು ಮುಖ್ಯವಾಹಿನಿಗೆ ತಂದರು. ಯಾವ ಬೆಳೆಯೂ ವಾಣಿಜ್ಯೀಕರಣಗೊಳ್ಳದೆ ಉಳಿಯಲಾರದು ಎನ್ನುವುದನ್ನು ಮನಗಂಡ ಅವರು ಹೆಚ್ಚು ಇಳುವರಿಯ ತಳಿಗಳ ಶೋಧನೆಗೆ ಹೊರಟರು. ಅವರು ಕಟ್ಟಿ ಕೊಟ್ಟ ಈ ತಳಿಗಳು ಇವತ್ತು ನಮ್ಮ ರೈತರ ಪಾಲಿಗೆ ಆಶಾದಾಯಕ ವಾಗಿದೆ. ಏನಿಲ್ಲದಿದ್ದರೂ ರಾಗಿಯನ್ನಾದರೂ ಬೆಳೆದು ಬದುಕಬಲ್ಲೆವು ಎನ್ನುವ ವಿಶ್ವಾಸವನ್ನು ತುಂಬಿದೆ.
ಇದನ್ನೂ ಓದಿ: