ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಶರ್ಮಿಳಾ ಮಾಂಡ್ರೆ; ಇಲ್ಲಿವೆ ಈ ಜೋಡಿಯ ಎಂಗೇಜ್ಮೆಂಟ್ ಫೋಟೋಗಳು
ಸ್ಯಾಂಡಲ್ವುಡ್ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ವೈಭವ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿದೆ. ಆಪ್ತ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ಜೋಡಿಯು ಉಂಗುರ ಬದಲಾಯಿಸಿಕೊಂಡಿತು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟನೆ ಮತ್ತು ಸಿನಿಮಾ ನಿರ್ಮಾಣದ ಮೂಲಕ ಶರ್ಮಿಳಾ ಮಾಂಡ್ರೆ ಗುರುತಿಸಿಕೊಂಡಿದ್ದರೆ, ಸುಧನ್ ಸುಂದರಂ ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವೆ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳು.
-
ನಟಿ ಶರ್ಮಿಳಾ ಮಾಂಡ್ರೆ ಅವರು 2007ರ ‘ಸಜನಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ‘ಕೃಷ್ಣ’, ‘ನವಗ್ರಹ’, ‘ಆಕೆ’, ‘ಗಾಳಿಪಟ 2’ ಹಾಗೂ ಇತ್ತೀಚಿನ ‘ಡೆವಿಲ್’ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟನೆಯ ಜೊತೆಗೆ ‘ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಯಶಸ್ವಿ ಚಿತ್ರಗಳನ್ನು ನಿರ್ಮಿಸುತ್ತಾ, ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ನೀಡುವ ಮೂಲಕ ಉದ್ಯಮಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ "ಪ್ಯಾಶನ್ ಸ್ಟುಡಿಯೋಸ್" ನ ಸಂಸ್ಥಾಪಕರಾದ ಸುಧನ್ ಸುಂದರಂ ಅವರು ಚಿತ್ರರಂಗಕ್ಕೆ ಹಲವು ಗುಣಮಟ್ಟದ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಸುಧನ್ ಅವರು ‘ಕಪ್ಪಲ್’, ‘ಸೀತಕಾತಿ’ ಸೇರಿದಂತೆ ರಾಷ್ಟ್ರಪ್ರಶಸ್ತಿ ವಿಜೇತ ‘ಪಾರ್ಕಿಂಗ್’ ಹಾಗೂ ವಿಜಯ್ ಸೇತುಪತಿ ಅಭಿನಯದ ಇತ್ತೀಚಿನ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ‘ಮಹಾರಾಜ’ ಮುಂತಾದ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನಿರ್ಮಿಸಿದ್ದಾರೆ.
"ಇದು ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷವಾದ ಅಧ್ಯಾಯ" ಎಂದು ಶರ್ಮಿಳಾ ಮಾಂಡ್ರೆ ಸಂತಸ ಹಂಚಿಕೊಂಡರೆ, ತಮ್ಮ ಈ ಹೊಸ ಪಯಣಕ್ಕೆ ಜೊತೆಯಾಗಿ ನಿಂತ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಸುಧನ್ ಸುಂದರಂ ಧನ್ಯವಾದ ಅರ್ಪಿಸಿದ್ದಾರೆ.