DK Shivakumar CM Oath Ceremony: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಾಯಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 3ರ ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಲೋಕ ಭವನದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೂ ಮುನ್ನ ಅವರು ತಾಯಿ ಗೌರಮ್ಮಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು.
ತಾತಿಯ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್ -
ಶುಭ ಹಾರೈಸಿದ ತಾಯಿ
ಪ್ರಮಾಣ ವಚನ ಸ್ವೀಕರಿಸಲು ಲೋಕ ಭವನಕ್ಕೆ ತೆರಳುವ ಮುನ್ನ ಡಿ.ಕೆ. ಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ತಾಯಿ ಗೌರಮ್ಮ ಅವರಿಂದ ಆಶೀರ್ವಾದ ಪಡೆದರು.
ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲರು
ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ಡಿಕೆಶಿ ಕುಟುಂಬಸ್ಥರು, ಹೈಕಮಾಂಡ್ ನಾಯಕರು, ಪಕ್ಷದ ಶಾಸಕರು ಸೇರಿ ಸಾವಿರಾರು ಗಣ್ಯರ ಸಮ್ಮುಖದಲ್ಲಿ ಪದಗ್ರಹಣ ನೆರವೇರಿತು.
ರಾಹುಲ್ ಗಾಂಧಿ, ಖರ್ಗೆ ಅವರಿಗೆ ಸ್ವಾಗತ
ಪದ ಗ್ರಹಣ ಸಮಾರಂಭಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ಹಲವು ಕಾಂಗ್ರೆಸ್ ನಾಯಕರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ವಿವಿಧ ಗಣ್ಯರು ಭಾಗಿ
ಸಮಾರಂಭದ ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ 45 ವರ್ಷಗಳ ಪಯಣ
ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ದ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಆಯ್ಕೆಯಾಗಿದ್ದಾರೆ. 8 ಬಾರಿ ಶಾಸಕರಾಗಿ, ಸಚಿವರಾಗಿ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಳಮಟ್ಟದ ಹೋರಾಟದಿಂದ ಹಿಡಿದು ರಾಜ್ಯದ ಸಿಎಂ ಚುಕ್ಕಾಣಿಯವರೆಗೆ ಸುಮಾರು 45 ವರ್ಷಗಳ ರಾಜಕೀಯ ಪ್ರಯಾಣ ಇವರದ್ದು.