RCB vs KKR: ಕೆಕೆಆರ್ ಪಂದ್ಯಕ್ಕೆ ಆರ್ಸಿಬಿ ಆಟಗಾರರ ಕಠಿಣ ಅಭ್ಯಾಸದ ಫೋಟೊಗಳು ಇಲ್ಲಿವೆ
ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್, ಶನಿವಾರದಿಂದ ಪುನಾರಂಭಗೊಳ್ಳಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಸೆಣಸಲಿದೆ. ಆರ್ಸಿಬಿ ಗೆದ್ದರೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.



ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್ ಅಭ್ಯಾಸ ನಡೆಸಿದರು. ಇಂದು ನಡೆಯುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ. ದೇವದತ್ ಪಡಿಕ್ಕಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲು ಮಯಾಂಕ್ ಅಗರ್ವಾಲ್ ಆರ್ಸಿಬಿಗೆ ಸೇರ್ಪಡೆಗೊಂಡಿದ್ದಾರೆ.
ಛಾಯಾಚಿತ್ರಗಳು: ಸುಧಾಕರ್ ದೇವರಾಜ್

ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಬಳಿಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪಂದ್ಯವಾಡಲಿದ್ದು, ಅವರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಲಾಗಲೇ ಅವರನ್ನು ಗೌರವಿಸುವ ಸಲುವಾಗಿ ವಿರಾಟ್ 18 ಎಂದು ಬರೆದಿರುವ ಬಿಳಿ ಜೆರ್ಸಿಗಳು ಚಿನ್ನಸ್ವಾಮಿ ಮೈದಾನದ ಮುಂದೆ ಮಾರಾಟವಾಗುತ್ತಿದೆ.

ಚೆನ್ನೈ ವಿರುದ್ಧದ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್ ಪಾಟೀದಾರ್ ಚೇತರಿಸಿಕೊಂಡಿದ್ದು ಶನಿವಾರ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಶುಕ್ರವಾರವ ಅವರು ನೆಟ್ಸ್ನಲ್ಲಿ ಲವಲವಿಕೆಯಿಂದ ಬ್ಯಾಟಿಂಗ್ ಅಭ್ಯಾಸ ಕೂಡ ನಡೆಸಿದ್ದರು. ಆದರೆ ಕಳೆದ 5 ಪಂದ್ಯಗಳಲ್ಲಿ ಅವರ ಬ್ಯಾಟ್ನಿಂದ ದೊಡ್ಡ ಇನ್ನಿಂಗ್ಸ್ ಮೂಡಿಬಂದಿಲ್ಲ.

ಅನಾರೋಗ್ಯ ಕಾರಣ ಕೆಲ ಪಂದ್ಯಗಳಿಗೆ ಗೈರಾಗಿದ್ದ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಸಂಪೂರ್ಣವಾಗಿ ಗುಣಮುಖರಾಗಿದ್ದು, ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೆಟ್ಸ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಜೊತೆ ಬ್ಯಾಟ್ ಮಾಡಿದರು ಹೀಗಾಗಿ ಅವರು ಇಂದು ಕೆಕೆಆರ್ ವಿರುದ್ಧ ಕಣಕ್ಕಿಳಿಯುವುದು ಖಚಿತ.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ವಿಂಡೀಸ್ನ ಆಲ್ರೌಂಡರ್ ರೊಮೆರಿಯೊ ಶೇಫರ್ಡ್ ಅವರು ಕೂಡ ಶುಕ್ರವಾರ ನೆಟ್ಸ್ನಲ್ಲಿ ದೊಡ್ಡ ಹೊಡತಗಳ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಹೀಗಾಗಿ ಕೆಕೆಆರ್ ವಿರುದ್ಧ ಅವರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ನಿರೀಕ್ಷೆಯಿದೆ. ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಶೇಫರ್ಡ್ 14 ಎಸೆತಗಳಿಂದ ಅಜೇಯ 53 ರನ್ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.