IPL 2025: ಭುವನೇಶ್ವರ್ ಕುಮಾರ್ ದಾಖಲೆ ಸರಿಗಟ್ಟಿದ ನರೈನ್
16 ರನ್ ಅಂತರದ ರೋಚಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ ಐಪಿಎಲ್ನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಗೆದ್ದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ತಂಡದ ಹೆಸರಿನಲ್ಲಿತ್ತು. 2009 ರಲ್ಲಿ ಚೆನ್ನೈ ತಂಡ ಪಂಜಾಬ್ ವಿರುದ್ಧ 116 ರನ್ ರಕ್ಷಿಸಿಕೊಂಡು ಗೆಲುವು ಸಾಧಿಸಿತ್ತು.



ಮಂಗಳವಾರ ನಡೆದಿದ್ದ ಸಣ್ಣ ಮೊತ್ತದ ಅತ್ಯಂತ ರೋಚಕ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು 16 ರನ್ ಅಂತರದಿಂದ ಬಗ್ಗುಬಡಿದು ಸ್ಮರಣೀಯ ಗೆಲುವು ಸಾಧಿಸಿತ್ತು. ಕೆಕೆಆರ್ ಸೋಲು ಕಂಡರೂ ತಂಡದ ಸ್ಪಿನ್ನರ್ ಸುನೀಲ್ ನರೈನ್ ಐಪಿಎಲ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಯಶಸ್ವಿಯಾಗಿದ್ದಾರೆ.

ಪಂದ್ಯದಲ್ಲಿ ಮೂರು ಓವರ್ ಎಸೆದ ನರೈನ್ 14 ರನ್ ವೆಚ್ಚದಲ್ಲಿ 2 ವಿಕೆಟ್ ಉರುಳಿಸಿದರು. ಈ ವಿಕೆಟ್ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ದಾಖಲೆ ಸರಿಗಟ್ಟಿ 3ನೇ ಸ್ಥಾನಕ್ಕೇರಿದರು. ಉಭಯ ಆಟಗಾರರು ಈವರೆಗೆ ತಲಾ 187 ವಿಕೆಟ್ ಕಿತ್ತಿದ್ದಾರೆ.

ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಯಜುವೇಂದ್ರ ಚಹಲ್ ಹೆಸರಿನಲ್ಲಿದೆ. ಚಹಲ್ ಇದುವರೆಗೆ 166 ಐಪಿಎಲ್ ಪಂದ್ಯಗಳನ್ನಾಡಿ 211 ವಿಕೆಟ್ ಕಿತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಕಿತ್ತ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ 192 ವಿಕೆಟ್ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ. 185 ವಿಕೆಟ್ ಕಿತ್ತ ಆರ್.ಅಶ್ವಿನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಿಯೂಷ್ ಚಾವ್ಲಾ ಅವರ ದಾಖಲೆಯನ್ನು ಮುರಿಯಲು ನರೈನ್ ಮತ್ತು ಭವನೇಶ್ವರ್ಗೆ ಇನ್ನು 6 ವಿಕೆಟ್ ಅಗತ್ಯವಿದೆ.

ಎಂವೈಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ವೇಗಿ ಹರ್ಷಿತ್ ರಾಣಾ (25ಕ್ಕೆ 3) ಸಹಿತ ಕೆಕೆಆರ್ ಬೌಲರ್ಗಳ ಸಂಘಟಿತ ದಾಳಿಗೆ ತರಗೆಲೆಯಂತೆ ಉದುರಿ 15.3 ಓವರ್ಗಳಲ್ಲಿ 111 ರನ್ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ 3 ವಿಕೆಟ್ಗೆ 62 ರನ್ಗಳಿಸಿ ಸುಸ್ಥಿತಿಯಲ್ಲಿದ್ದ ಕೆಕೆಆರ್, ಚಾಹಲ್ ದಾಳಿಗೆ ದಿಢೀರ್ ಕುಸಿತ ಕಂಡು 15.1 ಓವರ್ಗಳಲ್ಲಿ 95 ರನ್ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು.